ಎನ್ಕೌಂಟರ್ ನಲ್ಲಿ ಹತ್ಯೆಯಾದ ಉಗ್ರರ ಬಳಿ ಹೊಸ ನೋಟುಗಳು ಪತ್ತೆ
ಶ್ರೀನಗರ, ನ.22-ಜಮ್ಮು ಮತ್ತು ಕಾಶ್ಮೀರದ ಬಂಡಿಪೊರಾ ಜಿಲ್ಲೆಯಲ್ಲಿ ಇಂದು ಮುಂಜಾನೆ ಭದ್ರತಾಪಡೆ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರಗಾಮಿಗಳು ಹತರಾಗಿದ್ದಾರೆ.
ಉಗ್ರರ ಬಗ್ಗೆ ಲಭಿಸಿದ ಖಚಿತ ವರ್ತಮಾನದ ಮೇಲೆ ಬಂಡಿಪೊರಾ ಜಿಲ್ಲೆಯ ಹಜಿನ್ ಗ್ರಾಮದಲ್ಲಿ ಭದ್ರತಾಪಡೆಗಳು ಶೋಧ ನಡೆಸುತ್ತಿದ್ದಾಗ ಉಗ್ರರ ಗುಂಪು ಯೋಧರ ಮೇಲೆ ಗುಂಡು ಹಾರಿಸಿತು. ಈ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹತರಾದ ಉಗ್ರರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಪಾಕಿಸ್ತಾನದ ಗುರುತಿರುವ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹೊಸ ನೋಟುಗಳು ಪತ್ತೆ :
ಸೇನಾಯೋಧರು ನಡೆಸಿದ ಎನ್ಕೌಂಟರ್ ನಲ್ಲಿ ಹತ್ಯೆಯಾದ ಇಬ್ಬರು ಉಗ್ರರ ಬಳಿ ₹2000 ಮುಖ ಬೆಲೆಯ ನೋಟು ಸೇರಿದಂತೆ ಅಪಾರ ಪ್ರಮಾಣದ ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ನೋಟು ನಿಷೇಧದ ಬಳಿಕ ಉಗ್ರರ ಆರ್ಥಿಕ ವಹಿವಾಟಿಗೆ ಕಡಿವಾಣ ಹಾಕಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿರುವ ಬೆನ್ನಲ್ಲೇ ಉಗ್ರರ ಬಳಿ ₹ 2000 ಮುಖಬೆಲೆಯ ನೋಟುಗಳು ಪತ್ತೆಯಾಗಿವೆ.
► Follow us on – Facebook / Twitter / Google+