ಶಾಸಕ ವಿಜಯ್ ಕುಮಾರ್ ನಿಧನದ ಹಿನ್ನೆಲೆಯಲ್ಲಿ ಜಯನಗರ ಕ್ಷೇತ್ರದ ಚುನಾವಣೆ ಮುಂದೂಡಿಕೆ..?

ಈ ಸುದ್ದಿಯನ್ನು ಶೇರ್ ಮಾಡಿ

Vijay-Kumar--01

ಬೆಂಗಳೂರು,ಮೇ4- ಹೃದಯ ಸಂಬಂಧಿ ಸಮಸ್ಯೆಯಿಂದ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದ ಜಯನಗರದ ಬಿಜೆಪಿ ಶಾಸಕ ವಿಜಯ್ ಕುಮಾರ್(60) ನಿಧನರಾಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಜಯನಗರ ಬಿಜೆಪಿ ಅಭ್ಯರ್ಥಿಯೂ ಆಗಿದ್ದ ವಿಜಯಕುಮಾರ್ ಹಲವು ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಗುರುವಾರ ಚುನಾವಣಾ ಪ್ರಚಾರ ವೇಳೆ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಗೆ ಕರೆತಂದಾಗಲೇ ಹೃದಯ ಬಡಿತ, ಬಿಪಿ ಕುಸಿತ ಕಂಡಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಧ್ಯರಾತ್ರಿ 1 ಗಂಟೆಗೆ ವಿಜಯ್ ಕುಮಾರ್ ವಿಧಿವಶರಾಗಿದ್ದಾರೆ. ಶಾಸಕ ವಿಜಯ ಕುಮಾರ್ ಮೃತಪಟ್ಟ ಸಂಗತಿಯನ್ನು ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್ ಖಚಿತಪಡಿಸಿದ್ದಾರೆ.

ಇಪ್ಪತ್ತು ದಿನಗಳ ಹಿಂದೆ ಹೃದಯದ ನಾಳದಲ್ಲಿ ಸಮಸ್ಯೆ ಉಂಟಾಗಿದ್ದ ಕಾರಣ ವೈದ್ಯರು ಸ್ಟೆಂಟ್ ಅಳವಡಿಸಿದ್ದರು. ದಿನಕ್ಕೆ ಒಂದೂವರೆ ಕಿ.ಮೀ.ಗಿಂತಲೂ ಹೆಚ್ಚು ನಡೆಯಬಾರದು ಎಂದು ಸಲಹೆಯನ್ನೂ ನೀಡಿದ್ದರು. ಚುನಾವಣೆ ಪ್ರಚಾರಕ್ಕಾಗಿ ಹೆಚ್ಚು ನಡೆದ ಕಾರಣ ಅವರಿಗೆ ಸಮಸ್ಯೆ ಉಂಟಾಗಿತ್ತು. ಗುರುವಾರ ಸಂಜೆ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ. ಮಂಜುನಾಥ್ ಪ್ರಾಥಮಿಕ ತಪಾಸಣೆ ನಡೆಸಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದರು.

ಜಯನಗರ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ವಿಜಯ್ ಕುಮಾರ್ ನಿಧನಕ್ಕೆ ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್, ರಾಜ್ಯ ಚುನಾವಣಾ ಉಸ್ತುವಾರಿ ಮುರಳೀಧರ್ ರಾವ್, ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ ಸದಾನಂದಗೌಡ, ಸುರೇಶ್‍ಕುಮಾರ್ ಸೇರಿದಂತೆ ಹಲವು ಬಿಜೆಪಿ ನಾಯಕರು ಸಂತಾಪ ಸೂಚಿಸಿದ್ದಾರೆ. ಇನ್ನು ಶಾಸಕ ವಿಜಯ್ ಕುಮಾರ್‍ರ ಪಾರ್ಥಿವ ಶರೀರವನ್ನ ಜಯನಗರದ 4ನೇ ಟಿ ಬ್ಲಾಕ್‍ನಲ್ಲಿರುವ ಮನೆಗೆ ತರಲಾಗಿದೆ. ವಿಜಯಕುಮಾರ್ ನಿವಾಸದ ಎದುರು ಬೆಂಬಲಿಗರು ಭಾರಿ ಸಂಖ್ಯೆಯಲ್ಲಿ ನೆರೆದಿದ್ದಾರೆ.

ಚುನಾವಣೆ ಮುಂದೂಡಿಕೆ :

ಬಿಜೆಪಿ ಅಭ್ಯರ್ಥಿ ಬಿ.ಎನ್. ವಿಜಯಕುಮಾರ್ ನಿಧನವಾದ ಹಿನ್ನಲೆಯಲ್ಲಿ ಜಯನಗರ ಕ್ಷೇತ್ರದ ಚುನಾವಣೆ ಮುಂದೂಡಿಕೆಯಾಗಲಿದೆ. ಮೇ 12 ಕ್ಕೆ ನಡೆಯಲಿರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಜಯನಗರ ಬಿಜೆಪಿ ಅಭ್ಯರ್ಥಿ ಆಗಿದ್ದ ವಿಜಯಕುಮಾರ್ ನಿಧನರಾದ ಹಿನ್ನಲೆಯಲ್ಲಿ ಈ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ. ಆದರೆ ಅಧಿಕೃತ ಪ್ರಕಟಣೆಯೊಂದೇ ಬಾಕಿ ಇದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ. ಕಳೆದ ಚುನಾವಣೆಯಲ್ಲಿ ಪಿರಿಯಾಪಟ್ಟಣ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯೊಬ್ಬರು ನಿಧನರಾಗಿದ್ದಾಗಲೂ ಆ ಕ್ಷೇತ್ರದ ಚುನಾವಣೆ ಮುಂದೂಡಿಕೆಯಾಗಿತ್ತು.

Facebook Comments

Sri Raghav

Admin