ಜಯನಗರ ಗೆಲ್ಲುವ ಹೊಣೆಯನ್ನು ಅನಂತ್-ಅಶೋಕ್ ಹೆಗಲಿಗೆ ಹಾಕಿದ ಯಡಿಯೂರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

Anant--kumar--01

ಬೆಂಗಳೂರು, ಮೇ 23- ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಹೊಣೆಗಾರಿಕೆ ಕೇಂದ್ರ ಸಚಿವ ಅನಂತಕುಮಾರ್ ಹಾಗೂ ಶಾಸಕ ಆರ್.ಅಶೋಕ್ ಹೆಗಲಿಗೆ ನೀಡುವ ಮೂಲಕ ಬಿ.ಎಸ್.ಯಡಿಯೂರಪ್ಪ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದಾರೆ. ಈ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಿಸಿಕೊಡಬೇಕಾದ ಅನಿವಾರ್ಯತೆ ಅನಂತಕುಮಾರ್ ಮತ್ತು ಅಶೋಕ್‍ಗೆ ಎದುರಾಗಿದೆ. ಒಂದು ವೇಳೆ ಫಲಿತಾಂಶ ವ್ಯತಿರಿಕ್ತವಾದರೆ ಇಬ್ಬರ ನಾಯಕತ್ವಕ್ಕೂ ಭವಿಷ್ಯದಲ್ಲಿ ಧಕ್ಕೆ ಬರುವುದು ಸುಳ್ಳಲ್ಲ.

ಹೀಗಾಗಿಯೇ ಸಾಕಷ್ಟು ಅಳೆದು ತೂಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಜಯನಗರ ವಿಧಾನಸಭಾ ಚುನಾವಣೆಯ ಉಸ್ತುವಾರಿಯನ್ನು ಅನಂತ್‍ಕುಮಾರ್ ಹಾಗೂ ಅಶೋಕ್‍ಗೆ ನೀಡುವ ಮೂಲಕ ರಾಜಕೀಯ ಜಾಣ್ಮೆ ಮೆರೆದಿದ್ದಾರೆ. ಇತ್ತೀಚೆಗೆ ಪ್ರಕಟಗೊಂಡ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದ ವೇಳೆ ಅನ್ಯ ಪಕ್ಷದ ಶಾಸಕರ ಬೆಂಬಲ ಪಡೆಯಲು ಈ ಇಬ್ಬರು ಮುಖಂಡರು ಅಷ್ಟೊಂದು ಉತ್ಸುಕತೆ ತೋರಲಿಲ್ಲ. ಈ ಕಾರಣಕ್ಕಾಗಿಯೇ ಇಬ್ಬರ ಮೇಲೂ ಯಡಿಯೂರಪ್ಪ ಮುನಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಹಲವರ ವಿರೋಧದ ನಡುವೆಯೂ ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ದಿವಂಗತ ಬಿ.ಎನ್.ವಿಜಯಕುಮಾರ್ ಸಹೋದರ ಪ್ರಹ್ಲಾದ್ ಬಾಬು ಅವರಿಗೆ ಟಿಕೆಟ್ ನೀಡಲಾಗಿದೆ. ಆದರೆ ಅವರಿಗೆ ಟಿಕೆಟ್ ಘೋಷಣೆ ಮಾಡಿರುವ ಪಕ್ಷದ ಕ್ರಮಕ್ಕೆ ಸ್ಥಳೀಯ ಬಿಜೆಪಿ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ ಸದಸ್ಯ ಎನ್.ನಾಗರಾಜ್, ಮಾಜಿ ಮೇಯರ್ ಎಸ್.ಕೆ.ನಟರಾಜ್, ಬಿಬಿಎಂಪಿ ಮಾಜಿ ಸದಸ್ಯರಾದ ಸಿ.ಕೆ.ರಾಮಮೂರ್ತಿ, ಸೋಮಶೇಖರ್ ಆಕಾಂಕ್ಷಿಗಳಾಗಿದ್ದರು. ಇವರೆಲ್ಲರನ್ನು ಕಡೆಗಣಿಸಿ ಪ್ರಹ್ಲಾದ್ ಬಾಬುಗೆ ಟಿಕೆಟ್ ನೀಡಿರುವುದು ಸ್ಥಳೀಯ ಮುಖಂಡರ ಕಣ್ಣು ಕೆಂಪಾಗುವಂತೆ ಮಾಡಿದೆ.

ಈಗಾಗಲೇ ಇದರಲ್ಲಿ ಎನ್.ನಾಗರಾಜ್ ಪಕ್ಷದ ಈ ತೀರ್ಮಾನದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸೌಮ್ಯ ರೆಡ್ಡಿ ಗೆಲುವಿಗೆ ಅನುಕೂಲವಾಗುತ್ತದೆ. ಯಾವುದೇ ಕಾರಣಕ್ಕೂ ಪ್ರಹ್ಲಾದ್ ಬಾಬುಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ. ನಮ್ಮಲ್ಲಿ ಯಾರಿಗೆ ಟಿಕೆಟ್ ನೀಡಿದ್ದರೂ ನಾವು ಒಗ್ಗಟ್ಟಾಗಿ ಗೆಲುವಿಗೆ ಶ್ರಮಿಸುತ್ತಿದ್ದೇವೆ ಎಂದು ಹೇಳಿದ್ದಾರೆ.  ಮಾಜಿ ಮೇಯರ್ ಎಸ್.ಕೆ.ನಟರಾಜ್ ಕೂಡ ಪಕ್ಷದ ತೀರ್ಮಾನದಿಂದ ಬೇಸತ್ತು ಚುನಾವಣಾ ಪ್ರಕ್ರಿಯೆಯಿಂದಲೇ ದೂರ ಉಳಿಯುವ ತೀರ್ಮಾನಕ್ಕೆ ಬಂದಿದ್ದಾರೆ.

ಉಳಿದಂತೆ ಬಿಬಿಎಂಪಿ ಸದಸ್ಯರು ಕೂಡ ಬೇಸರಗೊಂಡಿದ್ದು , ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡಬೇಕೆ ಬೇಡವೇ ಎಂಬ ಬಗ್ಗೆ ಗೊಂದಲದಲ್ಲಿದ್ದಾರೆ. ಸ್ಥಳೀಯ ಮುಖಂಡರ ಈ ತೀರ್ಮಾನದಿಂದ ಅನಂತಕುಮಾರ್ ಮತ್ತು ಅಶೋಕ್ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಎಲ್ಲರ ಮನವೊಲಿಸಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಪರಸ್ಪರ ವಿರುದ್ಧ ದಿಕ್ಕಿಗೆ ಸಾಗುತ್ತಿರುವ ಸ್ಥಳೀಯರನ್ನು ಒಂದೇ ವೇದಿಕೆಗೆ ಕರೆತಂದು ಪ್ರಹ್ಲಾದ್ ಬಾಬು ಅವರನ್ನು ಗೆಲ್ಲಿಸಿಕೊಡುವ ಹೊಣೆಗಾರಿಕೆ ಈ ಇಬ್ಬರ ಮೇಲೆ ಇದೆ. ಹೇಳಿಕೇಳಿ ಜಯನಗರ ಅನಂತಕುಮಾರ್ ಮತ್ತು ಅಶೋಕ್ ಅವರ ರಾಜಕೀಯ ಕರ್ಮಭೂಮಿ. ಇಲ್ಲಿ ಇಬ್ಬರು ನಾಯಕರ ಬೇರುಗಳು ಸಾಕಷ್ಟಿವೆ. ಒಂದು ವೇಳೆ ಫಲಿತಾಂಶದಲ್ಲಿ ಕೊಂಚ ಏರುಪೇರಾದರೂ ಇದನ್ನೇ ಮಾನದಂಡವಾಗಿಟ್ಟುಕೊಂಡು ಹೈಕಮಾಂಡ್ ಬಳಿ ಉಭಯ ನಾಯಕರ ಸಾಮಥ್ರ್ಯವನ್ನು ಮುಂದಿಡಲು ಯಡಿಯೂರಪ್ಪ ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.

Facebook Comments

Sri Raghav

Admin