ಜಯನಗರ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್‍ಗೆ ಪಾಲಿಕೆ ಸದಸ್ಯರ ಬೆಂಬಲ

ಈ ಸುದ್ದಿಯನ್ನು ಶೇರ್ ಮಾಡಿ

BN-Prahlad--01
ಬೆಂಗಳೂರು, ಜೂ.5- ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಬಿಎಂಪಿಯ ಬಿಜೆಪಿ ಸದಸ್ಯ ಎನ್.ನಾಗರಾಜು ಹೊರತು ಪಡಿಸಿ ಐದು ಮಂದಿ ಸದಸ್ಯರು ಒಗ್ಗಟ್ಟಾಗಿ ಕೆಲಸ ಮಾಡಿ ಪ್ರಹ್ಲಾದ್ ಅವರನ್ನು ಗೆಲ್ಲಿಸುವುದಾಗಿ ಘೋಷಿಸಿದರು.  ಶಾಸಕ ಬಿ.ಎನ್.ವಿಜಯ್‍ಕುಮಾರ್ ಅವರು ಮೃತಪಟ್ಟ ಹಿನ್ನೆಲೆಯಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ಜೂ.11ಕ್ಕೆ ಮುಂದೂಡಲಾಗಿತ್ತು.  ಮಾಜಿ ಮೇಯರ್ ಎಸ್.ಕೆ.ನಟರಾಜ್, ಮಾಜಿ ಸದಸ್ಯರಾದ ಸಿ.ಕೆ.ರಾಮಮೂರ್ತಿ, ಸೋಮಶೇಖರ್ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ, ಬಿಜೆಪಿ ವರಿಷ್ಠರು ವಿಜಯ್‍ಕುಮಾರ್ ಅವರ ಸಹೋದರ ಪ್ರಹ್ಲಾದ್ ಆವರಿಗೆ ಟಿಕೆಟ್ ನೀಡಿದ್ದರಿಂದ ಇವರುಗಳು ಅಸಮಾಧಾನಗೊಂಡಿದ್ದರು.

ಇಂದು ಜಯನಗರದಲ್ಲಿರುವ ಖಾಸಗಿ ಸಭಾಂಗಣದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ವಿಜಯ್‍ಕುಮಾರ್ ಅವರ ಸಹೋದರ ಪ್ರಹ್ಲಾದ್ ಪರ ಕೆಲಸ ನಿರ್ವಹಿಸಲು ನಿರ್ಧರಿಸಿರುವುದಾಗಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಎಸ್.ಕೆ.ನಟರಾಜ್, ಮಾಜಿ ಸದಸ್ಯರಾದ ಸಿ.ಕೆ.ರಾಮಮೂರ್ತಿ, ಸೋಮಶೇಖರ್, ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ, ನಾಗರತ್ನ ರಾಮಮೂರ್ತಿ, ಗೋವಿಂದನಾಯ್ಡು, ಲಕ್ಷ್ಮಿ ನಟರಾಜ್, ದೀಪಿಕಾ ಮಂಜುನಾಥ್‍ರೆಡ್ಡಿ, ಮಾಲತಿ ಸೋಮಶೇಖರ್, ನಟಿ ಮಾಳವಿಕ ಪಾಲ್ಗೊಂಡಿದ್ದರು.

ಸಿ.ಕೆ.ರಾಮಮೂರ್ತಿ ಮಾತನಾಡಿ, ಈ ಕ್ಷೇತ್ರದ ಬಿಜೆಪಿ ಕಾರ್ಪೊರೇಟರ್ ಪಕ್ಷ ಬದಲಾಯಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ, ನಾವ್ಯಾರೂ ಪಕ್ಷ ಬದಲಿಸಿಲ್ಲ. ಒಗ್ಗಟ್ಟಾಗಿದ್ದೇವೆ. ನಾವು ಬಿಬಿಎಂಪಿ ಸದಸ್ಯರಾಗಲು ವಿಜಯ್‍ಕುಮಾರ್ ಅವರೇ ನೇರ ಕಾರಣ. ಹಾಗಾಗಿ ನಾವು ಪಕ್ಷಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು. ನಾವು ಟಿಕೆಟ್ ಆಕಾಂಕ್ಷಿಯಾಗಿದ್ದು ನಿಜ. ಆದರೆ ಪ್ರಹ್ಲಾದ್ ಅವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ನಾವೆಲ್ಲರೂ ಅವರ ಪರ ಕೆಲಸ ಮಾಡುತ್ತಿದ್ದೇವೆ ಎಂದರು.  ಎಸ್.ಕೆ.ನಟರಾಜ್ ಮಾತನಾಡಿ, ಆರಂಭದಲ್ಲಿ ನಾವು ಟೆಕೆಟ್ ಕೇಳಿದ್ದು ಸತ್ಯ. ಪ್ರಹ್ಲಾದ್ ಅವರಿಗೆ ಟಿಕೆಟ್ ಘೋಷಣೆಯಾದ ನಂತರ ಸುಮ್ಮನಾಗಿ ಆರ್.ಅಶೋಕ್ ಅವರ ನೇತೃತ್ವದಲ್ಲಿ ಸಭೆ ನಡೆಸಿ ಒಮ್ಮತದ ನಿರ್ಧಾರಕ್ಕೆ ಬಂದಿದ್ದೇವೆ. ಎನ್.ನಾಗರಾಜ್ ಕೂಡ ಬಿಜೆಪಿಯಲ್ಲೇ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.

ಎನ್.ನಾಗರಾಜ್ ವಿರುದ್ಧ ಅಸಮಾಧಾನ:
ಬೈರಸಂದ್ರ ವಾರ್ಡ್ ಕಾರ್ಪೊರೇಟರ್ ಎನ್.ನಾಗರಾಜ್ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಾರೆ. ಆ ಪಕ್ಷದ ಅಭ್ಯರ್ಥಿ ಸೌಮ್ಯರೆಡ್ಡಿ ಪರ ನಾಗರಾಜು ಪ್ರಚಾರ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇಂದಿನ ಸುದ್ದಿಗೋಷ್ಠಿಗೆ ಅವರು ಗೈರಾಗಿರುವುದು ಇದಕ್ಕೆ ಇಂಬುಕೊಡುವಂತಿದೆ. ಹಾಗಾಗಿ ಬಿಜೆಪಿ ಕಾರ್ಪೊರೇಟರ್ ಗಳು ನಾಗರಾಜ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಪಕ್ಷಕ್ಕೆ ಮೋಸ ಮಾಡಿದವರು ಹೆತ್ತ ತಾಯಿಗೆ ಮೋಸ ಮಾಡಿದಂತೆ. ದುಡ್ಡಿನ ಆಸೆಗೆ ಬೀಳುವವರು ಪಕ್ಷ ತೊರೆಯುತ್ತಾರೆ. ಅವರು ಕಾಂಗ್ರೆಸ್‍ಗೆ ಹೋಗುವುದಾದರೆ ರಾಜೀನಾಮೆ ಕೊಟ್ಟು ಹೋಗಲಿ. ಪಕ್ಷ ನಿಷ್ಟೆ ಇದ್ದರೆ ಪ್ರಚಾರಕ್ಕೆ ಬರಲಿ. ಇಂದು ಸುದ್ದಿಗೋಷ್ಠಿ ಹಮ್ಮಿಕೊಂಡಿರುವುದಾಗಿ ಆಹ್ವಾನ ನೀಡಿದ್ದರೂ ನಾಗರಾಜ್ ಬಂದಿಲ್ಲ ಎಂದು ಐವರು ಕಾರ್ಪೊರೇಟರ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

Facebook Comments

Sri Raghav

Admin