‘ಜಯಲಕ್ಷ್ಮಿ’ ಹೆಸರು ಕೇಳಿದೊಡನೆ ಗರಂ ಆದ ರೇಣುಕಾಚಾರ್ಯ..!
ಬಳ್ಳಾರಿ, ಡಿ.20-ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಅಧಿಕಾರಿಗಳು ಸಚಿವರು ನಿದ್ರಾವಸ್ಥೆಯಲ್ಲಿದ್ದಾರೆ. ಇದರಿಂದ ಅವರು ಇನ್ನು ಹೊರ ಬಂದಿಲ್ಲ. ಪ್ರಧಾನಿಗಳ ಮೇಲೆ ಅನಗತ್ಯ ಆರೋಪ ಮಾಡುವುದನ್ನು ನಿಲ್ಲಿಸಿ ಎಂದು ಬಿಜೆಪಿ ರೈತ ಮೋರ್ಚಾ ಮುಖಂಡ ರೇಣುಕಾಚಾರ್ಯ ಇಂದಿಲ್ಲಿ ಗುಡುಗಿದರು. ಬಿಜೆಪಿ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿಗಳ ಮೇಲೆ ಅನಗತ್ಯ ಆರೋಪ ಮಾಡುವುದನ್ನು ಮುಖ್ಯಮಂತ್ರಿಗಳು ಕೈಬಿಡಬೇಕು. ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳನ್ನು ಭೇಟಿ ಮಾಡದೆ, ಬರ ಪೀಡಿತ ಪ್ರದೇಶಗಳಲ್ಲಿ ಕಾಟಾಚಾರದ ಪರಿಶೀಲನೆ ನಡೆಸಿದ್ದಾರೆ ಎಂದು ಆರೋಪಿಸಿದರು.
ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ರಚನೆಯಲ್ಲೇ ಮುಖ್ಯಮಂತ್ರಿ ಕಾಲಹರಣ ಮಾಡಿದ್ದು, ರೈತರ ಸಮಸ್ಯೆ ಬಗೆಹರಿಸುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆ. ಶಾಸಕರು, ಸಚಿವರು ಬರಗಾಲದ ಬಗ್ಗೆ ವರದಿ ನೀಡಿಲ್ಲ. ಸಮಯವನ್ನು ಮೋಜು, ಮಸ್ತಿಯಲ್ಲಿ ಕಳೆಯುತ್ತಿದ್ದಾರೆ ಎಂದು ದೂರಿದರು. ಬೆರಳೆಣಿಕೆಯಷ್ಟು ಗೋಶಾಲೆ ತೆರೆದು ಅಲ್ಲಿಗೆ ಪೂರೈಸುವ ಮೇವಿನಲ್ಲೂ ಭ್ರಷ್ಟಾಚಾರ ಎಸಗಿದ್ದಾರೆ. ರೈತರ ಪಂಪ್ಸೆಟ್ಗಳಿಗೆ ಅಗತ್ಯ ಪೂರೈಕೆ ಆಗುತ್ತಿಲ್ಲ. ಇಂಧನ ಸಚಿವರು ಮತ್ತು ಸಿಎಂ ನಡುವೆ ಹೊಂದಾಣಿಕೆ ಇಲ್ಲವೆಂಬುದು ಇದರಿಂದ ಸಾಬೀತಾಗುತ್ತದೆ ಎಂದು ಹೇಳಿದರು. ಸರ್ಕಾರ ಕೂಡಲೇ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿದರು.
ತಕ್ಕ ಶಿಕ್ಷೆ:
ಎಚ್.ವೈ.ಮೇಟಿ ಮಾಡಿದ ತಪ್ಪಿಗೆ ತಕ್ಕ ಶಿಕ್ಷೆ ಅನುಭವಿಸಿದ್ದಾರೆ. ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಇದಕ್ಕಿಂತ ಹೆಚ್ಚಿಗೆ ಏನನ್ನೂ ಹೇಳಲಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ಪ್ರಕರಣಗಳಲ್ಲಿ ಮಾತನಾಡಿದ್ದರು. ಈಗ ತಮ್ಮ ಹುದ್ದೆ ಅರಿತು ಮಾತನಾಡಬೇಕು ಎಂದು ತಿಳಿಸಿದರು.
ರೇಣುಕಾಚಾರ್ಯ ಗರಂ: ಅಬಕಾರಿ ಇಲಾಖೆಗೂ, ಜಯಲಕ್ಷ್ಮಿ ಎಂಬ ಹೆಸರಿಗೂ ಏನು ಸಂಬಂಧ ಎಂದು ಕೇಳಿದ ಸುದ್ದಿಗಾರರ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದ ರೇಣುಕಾಚಾರ್ಯ ಈಗೆಲ್ಲಾ ಪ್ರಶ್ನಿಸಬೇಡಿ, ನಾನು ಬರಗಾಲ ವೀಕ್ಷಣೆಗೆ ಬಂದಿದ್ದೇನೆ. ಗೌರವಯುತವಾದ ಪ್ರಶ್ನೆ ಕೇಳಿ ಉತ್ತರ ಪಡೆಯಿರಿ ಎಂದರು.
Eesanje News 24/7 ನ್ಯೂಸ್ ಆ್ಯಪ್ – Click Here to Download