ಜಯಲಲಿತಾ ವಿಧಿವಶ (Live)

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ, ಡಿ.6– ಹೃದಯಾಘಾತದಿಂದ ನಿಧನರಾದ ತಮಿಳುನಾಡು ಮುಖ್ಯಮಂತ್ರಿ ಮತ್ತು ಎಐಎಡಿರಂಕೆ ಪರಮೋಚ್ಚ ನಾಯಕಿ ಜಯಲಲಿತಾ ಅವರಿಗೆ ಸಂತಾಪ-ಶ್ರದ್ಧಾಂಜಲಿಗಳ ಮಹಾಪೂರವೇ ಹರಿದುಬಂದಿದೆ. ಚೆನ್ನೈನ ರಾಜಾಜಿ ಹಾಲ್‍ನಲ್ಲಿ ಅವರ ಪಾರ್ಥಿವ ಶರೀರವನ್ನು ಇಡಲಾಗಿದ್ದು, ಲಕ್ಷಾಂತರ ಜನರು ತಮ್ಮ ನೆಚ್ಚಿನ ಪುರಚ್ಚಿ ತಲೈವಿ(ಕ್ರಾಂತಿಕಾರಿ ನಾಯಕಿ) ಅಮ್ಮನಿಗೆ ವಿದಾಯ ವಂದನೆ ಸಲ್ಲಿಸುತ್ತಿದ್ದಾರೆ.  ಇಂದು ಸಂಜೆ 4.30ಕ್ಕೆ ಅವರ ಅಂತ್ಯಸಂಸ್ಕಾರ ನೆರವೇರಲಿದ್ದು, ಸುಮಾರು ಐದು ಕಿ.ಮೀ.ಸರತಿ ಸಾಲಿನಲ್ಲಿ ಶಾಂತಚಿತ್ತರಾಗಿ ನಿಂತಿದ್ದ ಅಸಂಖ್ಯಾತ ಅಭಿಮಾನಿಗಳು ಕಣ್ಣೀರು ಸುರಿಸುತ್ತಾ ಜಯಾ ಅವರ ಅಂತಿಮ ದರ್ಶನ ಪಡೆದು ಗೌರವಾಂಜಲಿ ಸಮರ್ಪಿಸಿದರು.

Croud
ಅಪೋಲೋ ಆಸ್ಪತ್ರೆಯಿಂದ ಜಯಾರ ಕಳೆಬರವನ್ನು ಪೋಯಿಸ್ ಗಾರ್ಡನ್‍ನಲ್ಲಿರುವ ಅವರು ನಿವಾಸಕ್ಕೆ ನಿನ್ನೆ ರಾತ್ರಿ ಕೊಂಡೊಯ್ಯಲಾಯಿತು. ಇಂದು ಮುಂಜಾನೆ ಅವರ ಅಚ್ಚುಮೆಚ್ಚಿನ ಹಸಿರು ಸೀರೆಯನ್ನು ಜಯಲಲಿತಾರ ಪಾರ್ಥಿವ ಶರೀರಕ್ಕೆ ಹೊದಿಸಿ ನಂತರ ನಗರದ ಹೃದಯ ಭಾಗದ ಅಣ್ಣಾ ಸಾಲೈನಲ್ಲಿರುವ ರಾಜಾಜಿ ಸಭಾಂಗಣಕ್ಕೆ ಕೊಂಡೊಯ್ಯಲಾಯಿತು. ಅಲ್ಲಿ ನಾಲ್ವರು ಸೇನಾಧಿಕಾರಿಗಳು ತ್ರಿವರ್ಣ ರಾಷ್ಟ್ರಧ್ವಜವನ್ನು ಶವಪೆಟ್ಟಿಗೆ ಮೇಲೆ ಹೊದಿಸಿದರು. ಬಳಿಕ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಯಿತು.  ಮುಂಜಾನೆ ಚಳಿಯನ್ನು ಲೆಕ್ಕಿಸದೇ ಲಕ್ಷಾಂತರ ಮಂದಿ ಸರತಿ ಸಾಲಿನಲ್ಲಿ ಜಯಲಲಿತಾರಿಗೆ ಭಾವಪೂರ್ಣ ಅಂತಿಮ ನಮನ ಸಲ್ಲಿಸಿದರು. ಸರತಿ ಸಾಲಿಗೆ ಬಂದು ಸೇರುತ್ತಿರುವ ಅಭಿಮಾನಿಗಳ ಸಂಖ್ಯೆ ನಿಮಿಷ ನಿಮಿಷಕ್ಕೂ ಹೆಚ್ಚಾಗುತ್ತಲೇ ಇದೆ. ಕಣ್ಣೀರ ತರ್ಪಣ ಸಲ್ಲಿಸಲಾಗುತ್ತಿದೆ.

Cy9JCwhUcAEi6It

ಮುಖ್ಯಮಂತ್ರಿ ಓ.ಪನ್ನೀರ್ ಸೆಲ್ವಂ ಮತ್ತು ಅವರ ಸಂಪುಟ ಸಹೋದ್ಯೋಗಿಗಳು, ಸಂಸದರು, ಶಾಸಕರು, ಪಕ್ಷದ ಮುಖಂಡರು ಮತ್ತು ರಾಜ್ಯ ಸರ್ಕಾರದ ಉನ್ನತಾಧಿಕಾರಿಗಳು ಜಯಲಲಿತಾರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ತಮ್ಮ ನೆಚ್ಚಿನ ಅಧಿನಾಯಕಿ ಅಗಲಿಕೆಯ ದುಃಖ ಪನ್ನೀರ್ ಸೆಲ್ವ ಅವರಲ್ಲಿ ಮಡುಗಟ್ಟಿತ್ತು. ಭಾವುಕರಾಗಿದ್ದ ಅವರಲ್ಲಿ ಅಗಾಗ ಕಣ್ಣೀರು ಒತ್ತರಿಸಿ ಬರುತ್ತಿತ್ತು. ಆರು ಬಾರಿ ಮುಖ್ಯಮಂತ್ರಿಯಾಗಿ ತಮಿಳುನಾಡಿನಲ್ಲಿ ಆಳ್ವಿಕೆ ನಡೆಸಿದ್ದ ಜಯಲಲಿತಾರ ಪರಮಾಪ್ತೆ ಶಶಿಕಲಾ ನಟರಾಜನ್ ಆಕೆಯ ಪಾರ್ಥಿವ ಶವದ ಪಕ್ಕದಲ್ಲೇ ನಿಂತು ಬಿಕ್ಕಿ ಬಿಕ್ಕಿ ಅಳುತ್ತಿದ್ದರು.  ಕೇಂದ್ರ ಸಚಿವ ಎಂ.ವೆಂಕಯ್ಯನಾಯ್ಡು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಪಕ್ಷಗಳ ಮುಖಂಡರು, ಚಲನಚಿತ್ರ ನಟ-ನಟಿಯರು, ಕ್ರೀಡಾಪಟುಗಳು ಸೇರಿದಂತೆ ಅನೇಕರು ಜಯಾರಿಗೆ ಶ್ರದ್ಧಾಂಜಲಿ ಸಮರ್ಪಿಸಿದರು.

Cy93bjwUkAAekvb

ಜಯಾಲಲಿತಾರ ನಿಧನದ ಹಿನ್ನೆಲೆಯಲ್ಲಿ ಇಂದು ಎಲ್ಲ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಚೆನ್ನೈ ಸೇರಿದಂತೆ ರಾಜ್ಯದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ತಮಿಳುನಾಡಿನಲ್ಲಿ ಏಳು ದಿನಗಳ ಶೋಕಾಚರಣೆ ಘೋಷಿಸಲಾಗಿದ್ದು, ರಾಷ್ಟ್ರಧ್ವಜವನ್ನು ಅರ್ಧಮಟ್ಟಕ್ಕೆ ಇಳಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದಾದ್ಯಂತ ಭಾರೀ ಬಂದೋಬಸ್ತ್ ಮಾಡಲಾಗಿದೆ.  ನೆರೆ ರಾಜ್ಯ ಕೇರಳದಲ್ಲಿ ಜಯಾ ನಿಧನದ ಗೌರವಾರ್ಥ ಸರ್ಕಾರಿ ಕಚೇರಿಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ರಾಜ್ಯಾದ್ಯಂತ ಒಂದು ದಿನದ ಶೋಕಾಚರಣೆ ಘೋಷಿಸಲಾಗಿದೆ.  ಕೇಂದ್ರ ಸರ್ಕಾರ ಕೂಡ ಇಂದು ರಾಷ್ಟ್ರ ಶೋಕಾಚರಣೆಯನ್ನು ಘೋಷಿಸಿದ್ದು, ರಾಷ್ಟ್ರಧ್ವಜವನ್ನು ಅರ್ಧ ಮಟ್ಟಕ್ಕೆ ಹಾರಿಸಲಾಗಿದೆ.

Cy9n5DxWgAAAL2E

ಮರೀನಾ ಬೀಚ್‍ನಲ್ಲಿ ಅಂತ್ಯಕ್ರಿಯೆ :

ಜಯಲಲಿತಾರ ಅಂತ್ಯಕ್ರಿಯೆ ಮರೀನಾ ಬೀಚ್‍ನಲ್ಲಿ ಇಂದು ಸಂ ಜೆ 4.30ಕ್ಕೆ ನೆರವೇರಲಿದ್ದು, ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ಅವರ ಸಮಾಧಿ ಪಕ್ಕದಲ್ಲೇ (ಡಾ.ಎಂಜಿಆರ್ ಮೆಮೋರಿಯಲ್) ಸಕಲ ಸರ್ಕಾರಿ ಗೌರವಗಳೊಂದಿಗೆ ಜಯಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.

> ಜಯಾ ನಿಧನಕ್ಕೆ ಗಣ್ಯಾತಿಗಣ್ಯರ ಆಶ್ರುತರ್ಪಣ

ಚೆನ್ನೈ, ಡಿ.6-ಹೃದಯಾಘಾತದಿಂದ ನಿಧನರಾದ ಜಯಲಲಿತಾರಿಗೆ ದೇಶ-ವಿದೇಶಗಳ ಗಣ್ಯಾತಿಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಡಿಎಂಕೆ ಪರಮೋಚ್ಚ ನಾಯಕ ಡಾ. ಎಂ.ಕರುಣಾನಿಧಿ, ಜಯಾ ನಿಧನಕ್ಕೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಅವರ ನೈತಿಕ ಶಕ್ತಿ ತಮಿಳುನಾಡಿನಲ್ಲಿ ಎಂದೆಂದೂ ಚಿರಸ್ಥಾಯಿಯಾಗಿದೆ ಎಂದು ಅವರು ಹೇಳಿದ್ದಾರೆ.  ಚಿಕಿತ್ಸೆ ಬಳಿಕ ಅವರು ಸಂಪೂರ್ಣ ಚೇತರಿಸಿಕೊಂಡು ಕರ್ತವ್ಯಕ್ಕೆ ಹಿಂದಿರುತ್ತಾರೆ ಎಂಬ ನಂಬಿಕೆ ಇತ್ತು. ಆದರೆ ಅವರು ಬಾರದ ಲೋಕಕ್ಕೆ ತೆರಳಿರುವುದರಿಂದ ಅಪಾರ ದುಃಖವಾಗಿದೆ ಎಂದು ಕರುಣಾನಿಧಿ ಹೇಳಿದ್ದಾರೆ.

ಕೇಂದ್ರ ಸಚಿವರಾದ ಮನೋಹರ್ ಪರಿಕ್ಕರ್, ರಾಜನಾಥ್ ಸಿಂಗ್, ಎಂ.ವೆಂಕಯ್ಯನಾಯ್ಡು, ಪ್ರಕಾಶ್ ಜಾವೇಡ್ಕರ್, ಪುದುಚೇರಿ ಲೆಫ್ಟಿನೆಂಟ್ ಗೌರ್ನರ್ ಕಿರಣ್ ಬೇಡಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ತಮಿಳುನಾಡು ಕಾಂಗ್ರೆಸ್ ಸಮಿತಿ ಅಧ್ಯಕ್ಷ ತಿರುವವಕ್ಕರಸು, ಡಿಎಂಡಿಕೆ ಸಂಸ್ಥಾಪಕ, ಚಿತ್ರನಟ ವಿಜಯಕಾಂತ್, ಕಾಂಗ್ರೆಸ್ ನಾಯಕ ಪಿ.ಚಿದಂಬರಂ, ಖ್ಯಾತ ನಟ ಅಜಿತ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಜಯಾ ನಿಧನಕ್ಕೆ ಸಂತಾಪ ಸೂಚಿಸಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದ್ದಾರೆ.  ಭಾರತಕ್ಕೆ ಅಮೆರಿಕ ರಾಯಭಾರಿಯಾಗಿರುವ ರಿಚರ್ಡ್ ಆರ್ ವೆರ್ಮಾ ಕೂಡ ಸಂತಾಪ ಸೂಚಿಸಿದ್ದಾರೆ.

 ಜಯಲಲಿತಾ ಕನ್ನಡ ಚಿತ್ರಗಳು:  ಚಿನ್ನದ ಗೊಂಬೆ(1964), ಮನೆ ಅಳಿಯ, ನನ್ನ ಕರ್ತವ್ಯ (1965), ಮಾವನ ಮಗಳು, ಬದುಕುವ ದಾರಿ (1966)

 ತಮಿಳು ಚಿತ್ರಗಳು: ಯಾರ್ ನೀ?, ನೀ, ವೈರಂ, ವಂದಲೇ ಮಗರಸಿ, ಬೊಮ್ಮಲಟ್ಟಂ, ರಾಜ ವೀಟ್ಟು ಪಿಳ್ಳೈ, ಥಂಗ ಗೋಪುರಂ, ಚಿಕ್ಕಡು ದೊರಕ್ಕಡು, ಟಿಕ್ಕ ಶಂಕರಯ್ಯ, ನಿಲುವು ದೊಪಿಡಿ, ಶ್ರೀ ಕೃಷ್ಣ ವಿಜಯಂ, ಗೌರಿ ಕಲ್ಯಾಣಂ, ಕುಮಾರಿ ಪೇಣಿ, ನಾನ್ ï, ಮಗರಸಿ, ಮಾಡಿ ವೀಟ್ಟು ಮಾಪ್ಪಿಳೈ, ಪಣಕ್ಕಾರ ಪಿಳ್ಳೆ, ಮೂಂಡ್ರು ಎಯುದು, ಅಂಡ್ರ ಕಂಡ ಮುಗಂ, ಅವಳುಕ್ಕು ಆಯಿರಂ ಕಂಗಲï, ಚಂದ್ರೋದಯಂ, ಆಡಿಮೈ ಪೇಣಿ, ಎಂಗಿರುಂದೋ ವಂದಾಲï, ಸೂರ್ಯಗಂಧಿ, ಪಟ್ಟಿಕಡಾ ಪಟ್ಟಣಂ, ಗಲಾಟ ಕಲ್ಯಾಣಂ, ದೈವ ಮಗನï, ತಿರುಮಂಗಲಂ, ಕಾನಾವನ್ ಮನೈವಿ, ಎನ್ ಅಣ್ಣನï, ಕಣ್ಣನ್ ಎನ್ ಕಾದಲಳ್, ಒರು ತಾಯಿ ಮಕ್ಕಳ, ಚಿತ್ರ ಪೌರ್ಣಮಿ, ಇತ್ಯಾದಿ.

ತೆಲುಗು ಚಿತ್ರ: ಶ್ರೀ ಕೃಷ್ಣ ಸತ್ಯ, ಬಾಗ್ದಾದ್ ಪೇರಯಗಿ, ಗಾಂಧಿಕೋಟ ರಹಸ್ಯಂ, ಆಲಿ ಬಾಬಾ 40 ದೊಂಗಲು, ದೇವುಡು ಚೇಸಿನ ಮನುಷ್ಯುಲು, ಕಡಲಡು ವಡಲಡು, ಕಥಾನಾಯಕುಡು, ಮನಷುಲು ಮಮತಲು, ಆಸ್ತಪರುಲು, ಬ್ರಹ್ಮಚಾರಿ, ಆದರ್ಶ ಕುಟುಂಬಂ, ಅದೃಷ್ಟವಂತಲು, ಭಾರ್ಯ ಬಿಡ್ಡಲು ಇತರೆ. ಕೇವಲ ತಮಿಳು, ತೆಲುಗು ಮಾತ್ರವಲ್ಲದೇ ಮಲಯಾಳಂನಲ್ಲೂ ಜಯಲಲಿತಾ ನಟಿಸಿದ್ದು, ಜೀಸಸï(1973) ಅಲ್ಲದೇ ಆಕೆಯ 100ನೇ ಸಿನಿಮಾ ಎಂಬ ಖ್ಯಾತಿ ಪಡೆದಿದ್ದ ತಿರುಮಂಗಲಂ (1974) ಎಂಬ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

> ಜಯಲಲಿತಾಗಾಗಿ ಮಿಡಿದ ಶ್ರೀರಾಮಪುರ ಜನತೆ

Jayalalithaa-011

ಬೆಂಗಳೂರು, ಡಿ.6-ಬೆಂಗಳೂರಿನ ಶ್ರೀರಾಮಪುರಕ್ಕೂ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗು ಅವಿನಾಭಾವ ಸಂಬಂಧ. ನಿನ್ನೆ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಶ್ರೀರಾಮಪುರ ಹಾಗೂ ಬೆಂಗಳೂರಿನ ಇತರೆಡೆ ಶೋಕದ ವಾತಾವರಣ ನಿರ್ಮಾಣವಾಯಿತು.  ತಮಿಳು ಭಾಷಿಗರು, ಅಮ್ಮನ ಅಭಿಮಾನಿಗಳು, ಎಐಎಡಿಎಂಕೆ ಕಾರ್ಯಕರ್ತರು ಅಮ್ಮನಿಗಾಗಿ ಮಮ್ಮಲ ಮರುಗಿದರು. ಕಳೆದ 75 ದಿನಗಳಿಂದ ಅಮ್ಮ ಅಪೊಲೋ ಆಸ್ಪತ್ರೆಯಲ್ಲಿದ್ದಾಗಲೇ ಈ ಭಾಗದಲ್ಲಿ ಹೋಮ, ಹವನಗಳು, ವಿಶೇಷ ಪೂಜೆಗಳನ್ನು ಮಾಡಲಾಗುತ್ತಿತ್ತು. ನಿನ್ನೆ ಜಯಲಲಿತಾ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಇಲ್ಲಿ ಜನರ ದುಃಖ ಮಡುಗಟ್ಟಿತ್ತು. ಎಲ್ಲರೂ ಸೇರಿ ಜಯಲಲಿತಾ ಅವರು ಫೋ ಟೋ ಇಟ್ಟು ಪೂಜೆ ಮಾಡಿ ಶೋಕ ವ್ಯಕ್ತಪಡಿಸಿದರು.

ಗಲ್ಲಿ ಗಲ್ಲಿಗಳಲ್ಲಿ ಜಯಲಲಿತಾ ಬ್ಯಾನರ್‍ಗಳು, ಫೋ ಟೋಗಳು ಕಂಡು ಬಂದವು. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲಾ ಏರಿಯಾಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದರು.
ಅಲ್ಲದೆ ಜಯಲಲಿತಾ ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ನೂರಾರು ಕಾರ್ಮಿಕರು ಬಸ್, ವಾಹನಗಳ ಮೂಲಕ ತಮಿಳುನಾಡಿಗೆ ಚೆನ್ನೈಗೆ ತೆರಳಿದರು. ನಿನ್ನೆಯಿಂದ ಇಲ್ಲಿ ಶೋಕದ ವಾತಾವರಣ ಮನೆ ಮಾಡಿತ್ತು. ಎಲ್ಲೆಡೆ ಅಮ್ಮನ ಅಂತಿಮ ನಮನ ಕಾರ್ಯಕ್ರಮ ನಡೆಯುತ್ತಿತ್ತು. ಭದ್ರತೆಗಾಗಿ ಒಬ್ಬರು ಇನ್ಸ್‍ಪೆಕ್ಟರ್, ಮೂರು ಜನ ಸಬ್‍ಇನ್ಸ್‍ಪೆಕ್ಟರ್, ಒಂದು ಕೆಎಸ್‍ಆರ್‍ಪಿ ತುಕಡಿ, ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.

ಜಯಲಲಿತಾ ಅವರಿಗಿದ್ದ ಕುರ್ಚಿ ಖಯಾಲಿ : ಅದು ವಾಸ್ತುವೋ, ವೈದ್ಯರ ಸಲಹೆಯೋ

Jayalalithaa-Chair

ಬೆಂಗಳೂರು, ಡಿ.6-ಮುಖ್ಯಮಂತ್ರಿ ಜಯಲಲಿತಾ ಅವರು ಹೋದೆಡೆ ಬಂದೆಡೆಯಲ್ಲೆಲ್ಲಾ ಅವರು ಬಳಸುತ್ತಿದ್ದ ಕುರ್ಚಿಯೂ ಹೋಗುತ್ತಿತ್ತು. ಎಲ್ಲಿಯೂ ಅವರು ಬೇರೆ ಕುರ್ಚಿಯಲ್ಲಿ ಕೂರುತ್ತಿರಲಿಲ್ಲ. ಅವರಿಗಾಗಿ ನಿರ್ಮಿಸಿದ್ದ ವಿಶೇಷ ಕುರ್ಚಿಯಲ್ಲಿಯೇ ಅವರು ಆಸೀನರಾಗಬೇಕಿತ್ತು. ಯಾವುದೇ ಮಹತ್ವದ ಸಭೆಗಳಿರಲಿ, ಹೊರ ರಾಜ್ಯಗಳಿಗೆ ಹೋಗಬೇಕಾಗಿರಲಿ, ದೆಹಲಿಗೆ ತೆರಳಬೇಕಾಗಿರಲಿ ಈ ಕುರ್ಚಿಯನ್ನು ಅವರ ಸಹಾಯಕರು ಜೊತೆಯಲ್ಲಿಯೇ ಕೊಂಡೊಯ್ಯಬೇಕಾಗಿತ್ತು. ಈ ಕುರ್ಚಿಯಲ್ಲಿ ಮಾತ್ರ ಅವರು ಕುಳಿತುಕೊಳ್ಳುತ್ತಿದ್ದರು. ರಾಜ್ಯದ ವಿಷಯಗಳಿಗೆ ಸಂಬಂಧಿಸಿದಂತೆ ರಾಷ್ಟ್ರಪತಿ ಪ್ರಧಾನಿ ಭೇಟಿ ಮಾಡಲು ಜಯಾ ದೆಹಲಿಗೆ ಹೋದರೆ ಕುರ್ಚಿಯನ್ನು ತೆಗೆದುಕೊಂಡು ಹೋಗುತ್ತಿದ್ದರು. ಈ ಕುರ್ಚಿ ಅವರಿಗೆ ತುಂಬಾ ಅಚ್ಚುಮೆಚ್ಚು ಮತ್ತು ಶುಭದ ಸಂಕೇತವಾಗಿತ್ತು. ವಾಸ್ತು ಪ್ರಕಾರ ಈ ಕುರ್ಚಿಯಲ್ಲಿ ಕುಳಿತರೆ ಉದ್ದೇಶಿತ ಕೆಲಸಗಳು ಸಫಲವಾಗುತ್ತವೆ ಎಂಬ ನಂಬಿಕೆಯೂ ಅವರಿಗಿತ್ತು. ಮತ್ತೊಂದು ಮೂಲದ ಪ್ರಕಾರ ಬೆನ್ನುನೋವಿನ ಸಮಸ್ಯೆಯಿಂದ ವೈದ್ಯರ ಸಲಹೆಯಂತೆ ಬಳಸುತ್ತಿದ್ದರು ಎಂದು ಹೇಳಲಾಗಿದೆ.

> ತಮಿಳುನಾಡಿಗೆ ‘ಅಮ್ಮ’ನಾದರೂ ಜಯಲಲಿತಾ ಕರ್ನಾಟಕದ ಮನೆ ಮಗಳು

Jayalalithaa-Y
ಸ್ವಾತಂತ್ರ್ಯಾನಂತರ ಭಾರತೀಯ ರಾಜಕಾರಣದಲ್ಲಿ ದಿವಂಗತ ಪ್ರಧಾನಿ ಇಂದಿರಾಗಾಂಧಿ ಅವರನ್ನು ಬಿಟ್ಟರೆ ಅವರಷ್ಟೇ ಬಲಿಷ್ಠ ಮಹಿಳಾ ರಾಜಕಾರಣಿ ಎಂದರೆ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ.  ಕರ್ನಾಟಕದ ಮಗಳಾಗಿ ಹುಟ್ಟಿ ಇನ್ನೊಂದು ರಾಜ್ಯದ ಪ್ರಜಾ ಕೋಟಿಯ ಅಮ್ಮ ಎನಿಸಿಕೊಳ್ಳುವ ಪ್ರಕ್ರಿಯೆಯ ನಡುವೆ ಜೆ.ಜಯಲಲಿತಾ ಅವರು ಕ್ರಮಿಸಿದ ಹಾದಿ ಹೂವಿನ ಹಾದಿಯೇನಾಗಿರಲಿಲ್ಲ. ತನ್ನ ಜೀವನದುದ್ದಕ್ಕೂ ಸಾಕಷ್ಟು ನೋವು, ಅವಮಾನಗಳನ್ನು ಸಹಿಸಿಕೊಂಡು ಮುಂದಿನ ಗುರಿ ಸಾಧನೆಗಾಗಿ ಮುನ್ನುಗ್ಗಿದ ಮಹಿಳೆ ಜಯಲಲಿತಾ ಎಂಬುದರಲ್ಲಿ ಎರಡು ಮಾತೇ ಇಲ್ಲ.

ಅವರು ತಮಿಳುನಾಡಿನ ಮುಖ್ಯಮಂತ್ರಿ ಗದ್ದುಗೆ ಏರಿದಾಗಲೆಲ್ಲಾ ಕರ್ನಾಟಕಕ್ಕೆ ಭಾರೀ ಕಿರಿಕಿರಿ ಉಂಟು ಮಾಡಿರಬಹುದು. ಆದರೆ ಜನ್ಮಭೂಮಿಗಿಂತಲೂ ತಮ್ಮ ಕರ್ಮ ಭೂಮಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಅವರು ಒಬ್ಬ ರಾಜಕಾರಣಿಯಾಗಿ ಪ್ರಾಮಾಣಿಕತೆಯಿಂದ ನಡೆದುಕೊಂಡಿದ್ದಾರೆ ಎಂಬುದು ನಿರ್ವಿವಾದ. ಜಯಲಲಿತಾ ಅವರು ಕೂಡ ಕೆಲವು ಸಂದರ್ಭಗಳಲ್ಲಿ ಇಂದಿರಾಗಾಂಧಿಯವರಂತೆಯೇ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಅವರಂತೆಯೇ ಸರ್ವಾಧಿಕಾರಿ ಧೋರಣೆಯನ್ನು ಮೆರೆದಿದ್ದಾರೆ. ಇದನ್ನು ಬೇರೆಯವರು ಸರ್ವಾಧಿಕಾರಿ ನಡೆ ಎಂದು ಟೀಕಿಸಬಹುದಾದರೂ ಆಗಿನ ಸಂದರ್ಭಕ್ಕೆ ಜಯಲಲಿತಾ ಅವರು ನಡೆದುಕೊಂಡ ರೀತಿ ಸಮಂಜಸವಾಗಿಯೇ ಇತ್ತು.

ಕರ್ನಾಟಕದಲ್ಲಿ ಹುಟ್ಟಿದ ಕಾವೇರಿ ಕರ್ನಾಟಕದ ಜನತೆಯನ್ನೂ ತೃಪ್ತಿ ಪಡಿಸಿ ತಮಿಳುನಾಡಿಗೆ ಹರಿದಂತೆಯೇ ಜಯಲಲಿತಾ ಅವರ ಬದುಕು ಕೂಡ. ಅವರ ಸಿನಿಮಾ ಜೀವನ, ಕಲಾ ಜೀವನ ಆರಂಭವಾಗಿದ್ದು ಕರ್ನಾಟಕದಿಂದಲೇ. ಕರ್ನಾಟಕದಲ್ಲಿ ಕಲಾ ಸೇವೆಯ ಜತೆಗೇ ಸಾಮಾಜಿಕ ಕಳಕಳಿಯನ್ನು ಮೆರೆದವರು ಜಯಲಲಿತಾ. ಚಿಕ್ಕ ಹುಡುಗಿಯಾಗಿದ್ದಾಗಲೇ ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ತಾಲ್ಲೂಕಿನ ಕುಗ್ರಾಮವೊಂದರಲ್ಲಿ ಶಾಲಾ ಕಟ್ಟಡ ನಿರ್ಮಿಸಲು ಕಾಲಿಗೆ ಗೆಜ್ಜೆ ಕಟ್ಟಿ ನೃತ್ಯ ಪ್ರದರ್ಶನ ನೀಡಿದವರು ಇದೇ ಜಯಲಲಿತಾ. ಅವರಿಗೆ ಕರ್ನಾಟಕ, ತಮಿಳುನಾಡು ಎಂಬ ತಾರತಮ್ಯವೇನೂ ಮೊದಲಿಗೇ ಇರಲಿಲ್ಲ. ಆದರೆ ತಮಿಳು ಸಿನಿಮಾ ರಂಗ ಮತ್ತು ತಮಿಳುನಾಡು ರಾಜಕೀಯ ರಂಗ ಎರಡಕ್ಕೂ ಗುರುವಾಗಿ ಅವರ ಬೆನ್ನಿಗೆ ನಿಂತವರು ತಮಿಳಿನ ಖ್ಯಾತ ನಟ ಎಂ.ಜಿ.ರಾಮಚಂದ್ರನ್. ಈ ಹಿನ್ನೆಲೆಯಲ್ಲಿಯೇ ತಮಿಳುನಾಡನ್ನು ಅವರು ತಮ್ಮ ಕರ್ಮಭೂಮಿಯನ್ನಾಗಿ ಆಯ್ಕೆ ಮಾಡಿಕೊಂಡರು. ತಾನು ಬದುಕಿದರೂ ಇಲ್ಲೇ, ಬೆಳೆದರೂ ಇಲ್ಲೇ ಮತ್ತು ಜೀವನ ಪಯಣದ ಕೊನೆಯೂ ಇಲ್ಲೇ ಎಂಬ ದೃಢ ನಿರ್ಧಾರದೊಂದಿಗೆ ಜೀವನ ಆರಂಭಿಸಿದ ಅವರು ನಿಜಕ್ಕೂ ತಾವು ನಂಬಿದ ತಮಿಳು ನೆಲಕ್ಕೆ ಒಂದು ಚೂರು ಅನ್ಯಾಯವಾಗದಂತೆ ನಡೆದುಕೊಂಡರು. ಕೋಟಿ ಕೋಟಿ ತಮಿಳರ ವಿಶ್ವಾಸಕ್ಕೆ ಪಾತ್ರರಾದರು. ಕರ್ನಾಟಕದ ಮಗಳಾಗಿ ಹುಟ್ಟಿದರೂ ತಮಿಳಿಗರ ಅಮ್ಮನಾದರು. ಇದೇನು ಸಾಮಾನ್ಯದ ವಿಷಯವೇ?

ಶರಣನ ಗುಣ ಮರಣದಲ್ಲಿ ಕಾಣು ಎಂಬ ಗಾದೆಯನ್ನು ಜಯಲಲಿತಾ ಅವರ ಅಂತ್ಯ ರುಜುವಾತುಪಡಿಸಿದೆ. ಸಾಮಾನ್ಯವಾಗಿ ಯಾವುದೇ ಒಬ್ಬ ರಾಜಕಾರಣಿ ನಿಧನರಾದರೆ ಜನ ಕಡ್ಡಾಯವೆಂಬಂತೆ ಕಂಬನಿ ಮಿಡಿಯುವುದು, ಯಾಂತ್ರಿಕವೆಂಬಂತೆ ಸಂತಾಪ ಸೂಚಿಸುವುದು ಸರ್ವೇ ಸಾಮಾನ್ಯ. ಆದರೆ ಜಯಲಲಿತಾ ಅವರ ನಿಧನ ಸಂಗತಿಗೆ ತಮಿಳುನಾಡೇ ಮರುಕ ಪಟ್ಟಿತು. ಇಡೀ ತಮಿಳುನಾಡಿನ ಜನಸಾಮಾನ್ಯರು ಸ್ವತಃ ತಮ್ಮ ತಾಯಿಯನ್ನೇ ಕಳೆದುಕೊಂಡಂತೆ ರೋದಿಸುತ್ತಿದ್ದಾರೆ. ಇದೇನೂ ತೋರಿಕೆಯ ದುಃಖವಲ್ಲ. ಇಡೀ ಜನತೆ ಶೋಕ ಸಾಗರದಲ್ಲಿ ಮುಳುಗಿದೆ. ಅವರು ಅಸ್ವಸ್ಥರಾಗಿದ್ದಕ್ಕೆ ಕೆಲವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಜಯಲಲಿತಾ ಅವರು ಹಲವಾರು ಕಾರಣಗಳಿಂದ ಕಾರಾಗೃಹಕ್ಕೆ ಹೋದಾಗ, ಆಸ್ಪತ್ರೆ ಸೇರಿದಾಗ ಜೀವ ಕಳೆದುಕೊಂಡವರ ಸಂಖ್ಯೆ 200ಕ್ಕೂ ಹೆಚ್ಚು. ಇದು ಎಂತಹ ಅದ್ಭುತವಾದ ಮಮತೆ. ನಿಜವಾಗಿಯೂ ಮಾತೃ ವಾತ್ಸಲ್ಯ ಎಂದರೆ ಇದೇ ಇರಬೇಕು. ಒಂದು ರಾಜ್ಯದಲ್ಲಿ ಹುಟ್ಟಿ ಇನ್ನೊಂದು ರಾಜ್ಯಕ್ಕೆ ಹೋಗಿ ಅಲ್ಲಿ ಈ ರೀತಿ ಜನ ಪ್ರೀತಿ, ವಾತ್ಸಲ್ಯಗಳನ್ನು ಗಳಿಸುವುದೆಂದರೆ ನಿಜಕ್ಕೂ ಇದು ಸಾಮಾನ್ಯ ವಿಷಯವೇನಲ್ಲ. ಜಯಲಲಿತಾ ಒಬ್ಬರಿಗೆ ಮಾತ್ರ ಇದು ಸಾಧ್ಯ. ಇನ್ನು ಜಯಲಲಿತಾರಂತಹ ಪ್ರಚಂಡ ರಾಜಕಾರಣಿ, ಜನಪ್ರಿಯ ಕಲಾವಿದೆ ಮತ್ತೊಮ್ಮೆ ಹುಟ್ಟಿ ಬರುತ್ತಾರೆಂಬ ನಂಬಿಕೆಯಂತೂ ಇಲ್ಲ.

> ಅಮ್ಮ  ಇನ್ನಿಲ್ಲ

Jayalalitha-01

ಚೆನ್ನೈ ಡಿ.06 : ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ತಮಿಳುನಾಡು ಮುಖ್ಯಮಂತ್ರಿ ಹಾಗೂ ತಮಿಳರ ಪಾಲಿನ ಪ್ರೀತಿಯ ‘ಅಮ್ಮ’ ಜಯರಾಮನ್ ಜಯಲಲಿತಾ ಅವರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ 11.30ಕ್ಕೆ ವಿಧಿವಶರಾಗಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು.  ತೀವ್ರ ಜ್ವರ ಹಾಗೂ ನಿರ್ಜಲೀಕರಣದಿಂದ ಬಳಲುತ್ತಿದ್ದ 68 ವರ್ಷದ ಜಯಲಲಿತಾ ಅವರನ್ನು ಕಳೆದ ಸೆಪ್ಟೆಂಬರ್ 22ರಂದು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುದೀರ್ಘ ಎರಡು ತಿಂಗಳ ಚಿಕಿತ್ಸೆಯ ನಂತರವೂ ಚೇತರಿಸಿಕೊಳ್ಳದ ಅಮ್ಮ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

Jayalalitha-01

ಇತ್ತೀಚೆಗಷ್ಟೇ ತಮಿಳುನಾಡು ಮುಖ್ಯಮಂತ್ರಿಯ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಮಾತನಾಡುತ್ತಿದ್ದಾರೆ ಎಂದು ಆಸ್ಪತ್ರೆಯ ಅಧ್ಯಕ್ಷ ಡಾ. ಪ್ರತಾಪ್ ಸಿ.ರೆಡ್ಡಿ ಅವರು ಹೇಳಿದ್ದರು. ಆದರೆ ಭಾನುವಾರ ಸಂಜೆ ಹೃದಯ ಸ್ತಂಭನಕ್ಕೆ ತುತ್ತಾದ ಅವರು ಚಿಂತಾಜನಕ ಸ್ಥಿತಿ ತಲುಪಿದ್ದರು. ನಿನ್ನೆ ಬೆಳಗ್ಗೆ ಇಸಿಎಂಒ ಉಪಕರಣದ ನೆರವಿನ ಮೂಲಕ ಆಮ್ಲಜನಕವನ್ನು ಪೂರೈಸಲಾಗುತ್ತಿತ್ತು. ಆದರೆ ರಾತ್ರಿ ವೇಳೆಗೆ ಅವರ ದೇಹ ಯಾವುದೇ ಚಿಕಿತ್ಸೆಗೆ ಫಲಿಸದೆ ನಿಧನರಾಗಿದ್ದಾರೆ.

J-Jayalalita
ಸತತ ಎರಡನೇ ಬಾರಿ ಹಾಗೂ ಒಟ್ಟು ಆರು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರು ಮೂಲತ ಕನ್ನಡದವರಾದರೂ ಕೋಟ್ಯಾಂತರ ತಮಿಳರ ಹೃದಯಗಳಲ್ಲಿ ಪ್ರೀತಿಯ ‘ಅಮ್ಮ’ನಾಗಿ ಹಾಗೂ ಎಐಎಡಿಎಂಕೆ ಕಾರ್ಯಕರ್ತರ ಪುರಚ್ಚಿ ತಲೈವಿಯಾಗಿ ಸ್ಥಾನ ಪಡೆದಿದ್ದರು. ದಕ್ಷಿಣ ಭಾರತದ ಅತಿ ಪ್ರಭಾವಿ ನಾಯಕಿ ಹಾಗೂ ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ಅಕಾಲಿಕ ನಿಧನದಿಂದಾಗಿ ಇಡೀ ತಮಿಳುನಾಡು ಶೋಕ ಸಾಗರದಲ್ಲಿ ಮುಳುಗಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

ಅಧಿಕಾರದಲ್ಲಿದ್ದಾಗಲೇ ನಿಧನ, ತಮಿಳುನಾಡಿನ ಮೂರನೇ ಸಿಎಂ

ಅಧಿಕಾರದಲ್ಲಿದ್ದಾಗಲೇ ಜನಪ್ರಿಯ ಮುಖ್ಯಮಂತ್ರಿಯೊಬ್ಬರನ್ನು ಕಳೆದುಕೊಳ್ಳುವುದು ತಮಿಳುನಾಡಿನ ಜನತೆ ಪಾಲಿಗೆ ದುರಂತ ಸಂಗತಿಯಾಗಿ ಪರಿಣಮಿಸಿದೆ. ಮೊದಲಿಗೆ ಸಿ.ಎನ್ ಅಣ್ಣಾದೊರೈ ಅವರು ಕ್ಯಾನ್ಸರಿಗೆ ಬಲಿಯಾದರೆ, ನಂತರ ಎಐಎಡಿಎಂಕೆಯ ನಾಯಕ, ನಟ ಎಂಜಿ ರಾಮಚಂದ್ರನ್ ಅವರು ಹಾಗೂ ಈಗ ಪುರಚ್ಚಿ ತಲೈವಿ ಜಯಲಲಿತಾ ಅವರು ಈ ಹಾದಿ ಹಿಡಿದಿದ್ದಾರೆ. ಅಣ್ಣಾ ಎಂದು ಕರೆಸಿಕೊಳ್ಳುತ್ತಿದ್ದ ದ್ರಾವಿಡ ಪಕ್ಷದ ನಾಯಕ ಸಿ.ಎನ್ ಅಣ್ಣಾದೊರೈ ಅವರು ಕ್ಯಾನ್ಸರಿನಿಂದ ಬಳಲುತ್ತಿದ್ದರು.

ತಮಿಳುನಾಡು ಮುಖ್ಯಮಂತ್ರಿಯಾಗಿ ಪನ್ನೀರ್ ಸೆಲ್ವಂ ಪ್ರಮಾಣವಚನ ಸ್ವೀಕಾರ

Panner-Selvam

ಹೃದಯಾಘಾತಕ್ಕೊಳಗಾಗಿ ಜೆ. ಜಯಲಲಿತಾ ಅವರು ಇಹಲೋಕ ತ್ಯಜಿಸಿರುವ ಹಿನ್ನಲೆಯಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಒ.ಪನ್ನೀರ್ ಸೆಲ್ವಂ ಅವರು ಸೋಮವಾರ ತಡರಾತ್ರಿ ಪ್ರಮಾಣ ವಚನವನ್ನು ಸ್ವೀಕರಿಸಿದ್ದಾರೆ. ತಮಿಳುನಾಡಿನ ರಾಜಭವನದಲ್ಲಿರುವ ರಾಜಾಜಿ ಹಾಲ್ ನಲ್ಲಿ ಸೋಮವಾರ ತಡರಾತ್ರಿ 1.20 ನಡೆದ ಸರಳ ಕಾರ್ಯಕ್ರಮದಲ್ಲಿ ಪನ್ನೀರ್ ಸೆಲ್ವಂ ಮತ್ತು 31 ನೂತನ ಸಚಿವರು ಪ್ರಮಾಣವಚನವನ್ನು ಸ್ವೀಕರಿಸಿದ್ದಾರೆ. ಈ ಹಿಂದೆ ಜಯಲಲಿತಾ ಸಂಪುಟದಲ್ಲಿ ಸಚಿವರಾಗಿದ್ದವರೇ ಮತ್ತೆ ಸಚಿವರಾಗಿ ಪ್ರಮಾಣವಚನವನ್ನು ಸ್ವೀಕರಿಸಿದ್ದಾರೆ. ತಮಿಳುನಾಡು ರಾಜ್ಯ ಉಸ್ತುವಾರಿ ರಾಜ್ಯಪಾಲ ಸಿ. ವಿದ್ಯಾಸಾಗರ್ ರಾವ್ ಅವರು ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಕಾರ್ಯದರ್ಶಿ ಪಿ.ರಾಮಮೋಹನ್ ರಾವ್ ಮತ್ತು ತಮಿಳುನಾಡು ರಾಜ್ಯ ಸರ್ಕಾರದ ಸಲಹೆಗಾರರಾದ ಶೀಲಾ ರಾಮಕೃಷ್ಣನ್ ಸೇರಿದಂತೆ ಜಯಲಲಿತಾ ಅವರ ಕೆಲವೇ ಆಪ್ತರು ಹಾಜರಿದ್ದರು.

ತಮಿಳುನಾಡು ಗಡಿಭಾಗದಲ್ಲಿ ಬಿಗಿಬಂದೋಬಸ್ತ್

ಕೋಲಾರ, ಡಿ.6-ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಮಾಲೂರು ಮತ್ತು ಬಂಗಾರಪೇಟೆ ತಾಲೂಕಿನ ಗಡಿಭಾಗಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಜಿಲ್ಲೆಯ ಮಾಲೂರು ಸಂಪಗೆರೆ ಮತ್ತು ಡಿ.ಎಸ್.ದೊಡ್ಡಿಗಳಲ್ಲಿ ತಮಿಳುನಾಡು ಮಾರ್ಗವಿದ್ದು, 30ಕ್ಕೂ ಹೆಚ್ಚು ಮಂದಿ ಮಾಲೂರು ಪೊಲೀಸರನ್ನು ನಿಯೋಜಿಸಲಾಗಿದೆ. ಬಂಗಾರಪೇಟೆ ತಾಲೂಕಿನ ಕಾಮಿ ಸಮುದ್ರ ಸಮೀಪ ಕಲುಮನಹಳ್ಳಿ ಗಡಿ ಗ್ರಾಮದಲ್ಲಿ ಬಂಗಾರಪೇಟೆ ಪೊಲೀಸರು ಚೆಕ್‍ಪೋ ಸ್ಟ್‍ಗಳನ್ನು ನಿರ್ಮಿಸಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಜಿಲ್ಲೆಯಿಂದ ತಮಿಳುನಾಡಿಗೆ ದಿನನಿತ್ಯ ಹೋಗುವ ಹೂವು-ತರಕಾರಿ, ಹಾಲಿನ ಸರಬರಾಜು ನಿನ್ನೆಯಿಂದಲೇ ಸ್ಥಗಿತಗೊಂಡಿದೆ. ಜಿಲ್ಲೆಯ 28 ಕೆಎಸ್‍ಆರ್‍ಟಿಸಿ ಬಸ್‍ಗಳು ಸಂಚರಿಸುತ್ತಿದ್ದವು. ಆದರೆ ಜಯಲಲಿತಾ ನಿಧನದ ಹಿನ್ನೆಲೆಯಲ್ಲಿ ನಿನ್ನೆಯಿಂದಲೇ ಸಂಚಾರವನ್ನು ನಿಲ್ಲಿಸಲಾಗಿದೆ. ಕೆಜಿಎಫ್ ಡಿಪೋ ದಿಂದ ಚೆನ್ನೈ4 ಬಸ್, ವೇಲೂರು 2, ಗುಡಿಯಾತ್ತಂ 2, ಮಾಲೂರು ಡಿಪೋ ದಿಂದ ಕೃಷ್ಣಗಿರಿ ಮತ್ತು ಹೊಸೂರು ಹೋಗಲು 12 ಬಸ್‍ಗಳು ಸೇರಿದಂತೆ ಎಲ್ಲ ಬಸ್‍ಗಳ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಪ್ರಧಾನಿ ಮೋದಿ ಸಂತಾಪ :

ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ನಿಧನ ಹೊಂದಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ತೀವ್ರ ಸಂತಾಪವನ್ನು ಸೂಚಿಸಿದ್ದಾರೆ.  ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಜಯಲಲಿತಾ ಅವರ ಅಕಾಲಿಕ ಮರಣ ತೀವ್ರ ನೋವನ್ನು ತಂದಿದೆ. ಅವರ ಅಗಲಿಕೆ ಭಾರತೀಯ ರಾಜಕೀಯಕ್ಕೆ ತುಂಬಲಾರದ ನಷ್ಟ ಎಂದು ಹೇಳಿದ್ದಾರೆ. ಜನರೊಂದಿಗೆ ಜಯಲಲಿತಾ ಅವರ ಸಂಪರ್ಕ ಅವಿನಾಭಾವವಾಗಿತ್ತು. ಬಡ ಜನರ ಪರವಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದರು. ಮಹಿಳೆಯರಿಗೆ ಜಯಲಲಿತಾ ಅವರು ಎಂದಿಗೂ ಸ್ಫೂರ್ತಿದಾಯಕ ವ್ಯಕ್ತಿಯಾಗಿದ್ದಾರೆಂದು ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಜಯಲಲಿತಾ ಅವರ ಅಕಾಲಿಕ ನಿಧನ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ.

ನಟಿಯಾಗಿದ್ದ ಜಯಾ ತಮಿಳರ ಅಮ್ಮನಾಗಿದ್ದು : 

Jayalalitha

ಕರ್ನಾಟಕದ ಮಂಡ್ಯದ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಜನಿಸಿದ ಜಯಲಲಿತಾ ಅವರು ನಟಿ, ನೃತ್ಯಗಾರ್ತಿ, ರಾಜಕಾರಣಿಯಾಗಿ ಬೆಳೆದವರು. ಮೈಸೂರು ರಾಜಮನೆತನದ ಜತೆಗೆ ಜಯರಾಮ್ ಅವರ ಕುಟುಂಬ ನಿಕಟ ಸಂಪರ್ಕ ಹೊಂದಿತ್ತು. ಆದರೆ, ಬಾಲ್ಯದಲ್ಲೇ ಅಪ್ಪನನ್ನು ಕಳೆದುಕೊಂಡು ಅಮ್ಮ ನಟಿ ಸಂಧ್ಯಾ ಅವರಂತೆ ಬಣ್ಣದ ಬದುಕಿಗೆ ಕಾಲಿರಿಸಿದರು. ಬಾಲನಟಿಯಾಗಿ ಕನ್ನಡ, ಹಿಂದಿ ಚಿತ್ರಗಳಲ್ಲಿ ನಟಿಸಿದ್ದ ಜಯಲಲಿತಾ ಅವರು 15 ವರ್ಷ ವಯಸ್ಸಿಗೆ ನಾಯಕಿಯಾದರು.  1965ರ ವೇಳೆಗೆ ಸ್ಟಾರ್ ನಟ ಎಂಜಿಆರ್ ಪರಿಚಯವಾಗಿ ಅವರ ಚಿತ್ರಗಳ ನಾಯಕಿ ಎರಡು ದಶಕಗಳ ಕಾಲ ಮೆರೆದರು. ಮುಂದೆ ಎಂಜಿಆರ್ ಮೃತರಾದ ಬಳಿಕ ಅವರ ಉತ್ತರಾಧಿಕಾರಿಯಾಗಿ ತಮಿಳುನಾಡಿನ ಎಐಎಡಿಎಂಕೆ ಪಕ್ಷವನ್ನು ಕಟ್ಟಿ ಬೆಳೆಸಿದರು. ರಾಜ್ಯ ಸಭಾ ಸದಸ್ಯೆಯಾಗಿ, ಮುಖ್ಯಮಂತ್ರಿಯಾಗಿ ತಮಿಳರ ಪಾಲಿನ ದೇವತೆಯಾದರು.

ಪಾಕ್ ಪತ್ರಿಕೆಯಲ್ಲೂ ಜಯಾನಿಧನ ವಾರ್ತೆ :

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ನಿಧನರಾಗಿದ್ದಾರೆ ಎಂದು ಪಾಕಿಸ್ತಾನ 2 ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಇದನ್ನು ಹಿರಿಯ ಪತ್ರಕರ್ತರೊಬ್ಬರು ಪ್ರಸ್ತಾಪಿಸಿ ಸ್ಪಷ್ಟನೆ ನೀಡಿದ್ದರು.  ಪಾಕಿಸ್ತಾನದ ಪ್ರಮುಖ ಪತ್ರಕರ್ತರಾಗಿರುವ ಓಮರ್ ಆರ್. ಖುರೇಷಿ, ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ, ಪಾಕಿಸ್ತಾನದ 2 ಪ್ರಮುಖ ಪತ್ರಿಕೆಗಳು ಭಾರತದ ರಾಜಕಾರಣಿ ಜಯಲಲಿತಾ ಅವರ ಸಾವಿನ ಸುದ್ದಿ ಪ್ರಕಟಿಸಿವೆ. ಜಯಲಲಿತಾ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಮತ್ತೊಂದು ಟ್ವೀಟ್ ನಲ್ಲಿ ಪತ್ರಿಕೆಗಳ ಹೆಸರನ್ನು ಪ್ರಸ್ತಾಪಿಸಿ, ಆತ್ಮೀಯರೇ ಜಯಲಲಿತಾ ಅವರಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದರು. ಪಾಕ್ ಪತ್ರಿಕೆಗಳಿರಲಿ, ಜಯಲಲಿತಾ ಒಡೆತನದ ಜಯಾ ಪ್ಲಸ್ ಸುದ್ದಿವಾಹಿನಿಯಲ್ಲಿಯೇ ನಿಧನದ ಸುದ್ದಿ ಭಿತ್ತರವಾಗಿದೆ.

 

Facebook Comments

Sri Raghav

Admin