ಜಯಾ ಅಂತಿಮ ದರ್ಶನಕ್ಕೆ ಜನಸಾಗರ, ಕಣ್ಣೀರ ತರ್ಪಣದ, ಸಂಜೆ ಅಂತ್ಯಕ್ರಿಯೆ

ಈ ಸುದ್ದಿಯನ್ನು ಶೇರ್ ಮಾಡಿ

Vijay

ಚೆನ್ನೈ, ಡಿ.6– ಹೃದಯಾಘಾತದಿಂದ ನಿಧನರಾದ ತಮಿಳುನಾಡು ಮುಖ್ಯಮಂತ್ರಿ ಮತ್ತು ಎಐಎಡಿರಂಕೆ ಪರಮೋಚ್ಚ ನಾಯಕಿ ಜಯಲಲಿತಾ ಅವರಿಗೆ ಸಂತಾಪ-ಶ್ರದ್ಧಾಂಜಲಿಗಳ ಮಹಾಪೂರವೇ ಹರಿದುಬಂದಿದೆ. ಚೆನ್ನೈನ ರಾಜಾಜಿ ಹಾಲ್‍ನಲ್ಲಿ ಅವರ ಪಾರ್ಥಿವ ಶರೀರವನ್ನು ಇಡಲಾಗಿದ್ದು, ಲಕ್ಷಾಂತರ ಜನರು ತಮ್ಮ ನೆಚ್ಚಿನ ಪುರಚ್ಚಿ ತಲೈವಿ(ಕ್ರಾಂತಿಕಾರಿ ನಾಯಕಿ) ಅಮ್ಮನಿಗೆ ವಿದಾಯ ವಂದನೆ ಸಲ್ಲಿಸುತ್ತಿದ್ದಾರೆ.  ಇಂದು ಸಂಜೆ 4.30ಕ್ಕೆ ಅವರ ಅಂತ್ಯಸಂಸ್ಕಾರ ನೆರವೇರಲಿದ್ದು, ಸುಮಾರು ಐದು ಕಿ.ಮೀ.ಸರತಿ ಸಾಲಿನಲ್ಲಿ ಶಾಂತಚಿತ್ತರಾಗಿ ನಿಂತಿದ್ದ ಅಸಂಖ್ಯಾತ ಅಭಿಮಾನಿಗಳು ಕಣ್ಣೀರು ಸುರಿಸುತ್ತಾ ಜಯಾ ಅವರ ಅಂತಿಮ ದರ್ಶನ ಪಡೆದು ಗೌರವಾಂಜಲಿ ಸಮರ್ಪಿಸಿದರು.

Croud
ಅಪೋಲೋ ಆಸ್ಪತ್ರೆಯಿಂದ ಜಯಾರ ಕಳೆಬರವನ್ನು ಪೋಯಿಸ್ ಗಾರ್ಡನ್‍ನಲ್ಲಿರುವ ಅವರು ನಿವಾಸಕ್ಕೆ ನಿನ್ನೆ ರಾತ್ರಿ ಕೊಂಡೊಯ್ಯಲಾಯಿತು. ಇಂದು ಮುಂಜಾನೆ ಅವರ ಅಚ್ಚುಮೆಚ್ಚಿನ ಹಸಿರು ಸೀರೆಯನ್ನು ಜಯಲಲಿತಾರ ಪಾರ್ಥಿವ ಶರೀರಕ್ಕೆ ಹೊದಿಸಿ ನಂತರ ನಗರದ ಹೃದಯ ಭಾಗದ ಅಣ್ಣಾ ಸಾಲೈನಲ್ಲಿರುವ ರಾಜಾಜಿ ಸಭಾಂಗಣಕ್ಕೆ ಕೊಂಡೊಯ್ಯಲಾಯಿತು. ಅಲ್ಲಿ ನಾಲ್ವರು ಸೇನಾಧಿಕಾರಿಗಳು ತ್ರಿವರ್ಣ ರಾಷ್ಟ್ರಧ್ವಜವನ್ನು ಶವಪೆಟ್ಟಿಗೆ ಮೇಲೆ ಹೊದಿಸಿದರು. ಬಳಿಕ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಯಿತು.  ಮುಂಜಾನೆ ಚಳಿಯನ್ನು ಲೆಕ್ಕಿಸದೇ ಲಕ್ಷಾಂತರ ಮಂದಿ ಸರತಿ ಸಾಲಿನಲ್ಲಿ ಜಯಲಲಿತಾರಿಗೆ ಭಾವಪೂರ್ಣ ಅಂತಿಮ ನಮನ ಸಲ್ಲಿಸಿದರು. ಸರತಿ ಸಾಲಿಗೆ ಬಂದು ಸೇರುತ್ತಿರುವ ಅಭಿಮಾನಿಗಳ ಸಂಖ್ಯೆ ನಿಮಿಷ ನಿಮಿಷಕ್ಕೂ ಹೆಚ್ಚಾಗುತ್ತಲೇ ಇದೆ. ಕಣ್ಣೀರ ತರ್ಪಣ ಸಲ್ಲಿಸಲಾಗುತ್ತಿದೆ.

Cy9JCwhUcAEi6It

ಮುಖ್ಯಮಂತ್ರಿ ಓ.ಪನ್ನೀರ್ ಸೆಲ್ವಂ ಮತ್ತು ಅವರ ಸಂಪುಟ ಸಹೋದ್ಯೋಗಿಗಳು, ಸಂಸದರು, ಶಾಸಕರು, ಪಕ್ಷದ ಮುಖಂಡರು ಮತ್ತು ರಾಜ್ಯ ಸರ್ಕಾರದ ಉನ್ನತಾಧಿಕಾರಿಗಳು ಜಯಲಲಿತಾರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ತಮ್ಮ ನೆಚ್ಚಿನ ಅಧಿನಾಯಕಿ ಅಗಲಿಕೆಯ ದುಃಖ ಪನ್ನೀರ್ ಸೆಲ್ವ ಅವರಲ್ಲಿ ಮಡುಗಟ್ಟಿತ್ತು. ಭಾವುಕರಾಗಿದ್ದ ಅವರಲ್ಲಿ ಅಗಾಗ ಕಣ್ಣೀರು ಒತ್ತರಿಸಿ ಬರುತ್ತಿತ್ತು. ಆರು ಬಾರಿ ಮುಖ್ಯಮಂತ್ರಿಯಾಗಿ ತಮಿಳುನಾಡಿನಲ್ಲಿ ಆಳ್ವಿಕೆ ನಡೆಸಿದ್ದ ಜಯಲಲಿತಾರ ಪರಮಾಪ್ತೆ ಶಶಿಕಲಾ ನಟರಾಜನ್ ಆಕೆಯ ಪಾರ್ಥಿವ ಶವದ ಪಕ್ಕದಲ್ಲೇ ನಿಂತು ಬಿಕ್ಕಿ ಬಿಕ್ಕಿ ಅಳುತ್ತಿದ್ದರು.  ಕೇಂದ್ರ ಸಚಿವ ಎಂ.ವೆಂಕಯ್ಯನಾಯ್ಡು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಪಕ್ಷಗಳ ಮುಖಂಡರು, ಚಲನಚಿತ್ರ ನಟ-ನಟಿಯರು, ಕ್ರೀಡಾಪಟುಗಳು ಸೇರಿದಂತೆ ಅನೇಕರು ಜಯಾರಿಗೆ ಶ್ರದ್ಧಾಂಜಲಿ ಸಮರ್ಪಿಸಿದರು.

Cy93bjwUkAAekvb

ಜಯಾಲಲಿತಾರ ನಿಧನದ ಹಿನ್ನೆಲೆಯಲ್ಲಿ ಇಂದು ಎಲ್ಲ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಚೆನ್ನೈ ಸೇರಿದಂತೆ ರಾಜ್ಯದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ತಮಿಳುನಾಡಿನಲ್ಲಿ ಏಳು ದಿನಗಳ ಶೋಕಾಚರಣೆ ಘೋಷಿಸಲಾಗಿದ್ದು, ರಾಷ್ಟ್ರಧ್ವಜವನ್ನು ಅರ್ಧಮಟ್ಟಕ್ಕೆ ಇಳಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದಾದ್ಯಂತ ಭಾರೀ ಬಂದೋಬಸ್ತ್ ಮಾಡಲಾಗಿದೆ.  ನೆರೆ ರಾಜ್ಯ ಕೇರಳದಲ್ಲಿ ಜಯಾ ನಿಧನದ ಗೌರವಾರ್ಥ ಸರ್ಕಾರಿ ಕಚೇರಿಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ರಾಜ್ಯಾದ್ಯಂತ ಒಂದು ದಿನದ ಶೋಕಾಚರಣೆ ಘೋಷಿಸಲಾಗಿದೆ.  ಕೇಂದ್ರ ಸರ್ಕಾರ ಕೂಡ ಇಂದು ರಾಷ್ಟ್ರ ಶೋಕಾಚರಣೆಯನ್ನು ಘೋಷಿಸಿದ್ದು, ರಾಷ್ಟ್ರಧ್ವಜವನ್ನು ಅರ್ಧ ಮಟ್ಟಕ್ಕೆ ಹಾರಿಸಲಾಗಿದೆ.

Cy9n5DxWgAAAL2E

ಮರೀನಾ ಬೀಚ್‍ನಲ್ಲಿ ಅಂತ್ಯಕ್ರಿಯೆ :

ಜಯಲಲಿತಾರ ಅಂತ್ಯಕ್ರಿಯೆ ಮರೀನಾ ಬೀಚ್‍ನಲ್ಲಿ ಇಂದು ಸಂ ಜೆ 4.30ಕ್ಕೆ ನೆರವೇರಲಿದ್ದು, ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ಅವರ ಸಮಾಧಿ ಪಕ್ಕದಲ್ಲೇ (ಡಾ.ಎಂಜಿಆರ್ ಮೆಮೋರಿಯಲ್) ಸಕಲ ಸರ್ಕಾರಿ ಗೌರವಗಳೊಂದಿಗೆ ಜಯಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin