ಜಯಾ ಆದಾಯಮೀರಿ ಆಸ್ತಿಗಳಿಕೆ ಪ್ರಕರಣಕ್ಕೆ ಮರುಜೀವ ನೀಡಲು ಮೇಲ್ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

Jayalalithaa-021

ನವದೆಹಲಿ, ಮಾ.22 -ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ದಿವಂಗತ ಜಯಲಲಿತಾ ವಿರುದ್ಧದ ಕಾನೂನು ಕಲಾಪಗಳನ್ನು ಕೈಬಿಟ್ಟಿರುವ ತೀರ್ಪನ್ನು ಮರುಪರಿಶೀಲನೆ ನಡೆಸುವಂತೆ ಕೋರಿ ಕರ್ನಾಟಕ ಸರ್ಕಾರವು ಸುಪ್ರೀಂಕೋರ್ಟ್‍ಗೆ ನಿನ್ನೆ ಪರಾಮರ್ಶೆ ಮೇಲ್ಮನವಿ ಸಲ್ಲಿಸಿದೆ.  ಒಂದು ವೇಳೆ ವಿರುದ್ಧ ಕಾನೂನು ಕ್ರಮಗಳನ್ನು ಕೈಬಿಟ್ಟಿರೆ, ಈ ಪ್ರಕರಣದಲ್ಲಿ ಅವರಿಗೆ ವಿಧಿಸಲಾಗಿದ್ದ 100 ಕೋಟಿ ರೂ.ಗಳನ್ನು ವಸೂಲಿ ಮಾಡಲು ಸಾಧ್ಯವಾಗದು ಎಂದು ರಾಜ್ಯ ವಾದಿಸಿದೆ.

ಜಯಾ ಮುಖ್ಯ ಆರೋಪಿಯಾಗಿದ್ದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯವು ಫೆ.14ರಂದು ನೀಡಿದ್ದ ತೀರ್ಪಿನಲ್ಲಿ ಎಐಎಡಿಎಂಕೆ ಪ್ರಧಾನಕಾರ್ಯದರ್ಶಿಯಾಗಿದ್ದ ವಿ.ಕೆ.ಶಶಿಕಲಾ ಮತ್ತು ಇನ್ನಿಬ್ಬರು ಸಹ ಆರೋಪಿಗಳನ್ನು ದೋಷಿಗಳೆಂದು ಆದೇಶ ನೀಡಿತ್ತು. ಅದರೆ ಜಯಾಲಲಿತಾ ನಿಧನರಾಗಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧದ ಕಾನೂನು ಕಲಾಪಗಳನ್ನು ಕೈಬಿಡಲಾಗಿತ್ತು. ಸುಪ್ರೀಂಕೋರ್ಟ್ ತೀರ್ಪು ಕಾದಿರಿಸಿದ ಬಳಿಕ ಜಯಲಲಿತಾ ನಿಧನರಾಗಿದ್ದಾರೆ. ಹೀಗಾಗಿ ಪ್ರಕರಣದಲ್ಲಿ ಅವರ ಹೆಸರು ಕೈಬಿಟ್ಟಿರುವುದು ಸರಿಯಲ್ಲವೆಂದು ರಾಜ್ಯ ಸರ್ಕಾರ ವಾದಿಸಿದೆ. ಅವರಿಗೆ ವಿಚಾರಣಾ ನ್ಯಾಯಾಲಯವು ವಿಧಿಸಿದ್ದ 100 ಕೋಟಿ ರೂ. ದಂಡವನ್ನು ತಾನು ವಸೂಲಿ ಮಾಡಲು ಸಾಧ್ಯವೇ ಎಂಬುದನ್ನು ಪುನರ್‍ಪರಿಶೀಲಿಸುವಂತೆ ಸುಪ್ರೀಂಕೋರ್ಟ್‍ಗೆ ಮನವಿ ಮಾಡಲಾಗಿದೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತೀರ್ಪು ನೀಡಿದ್ದ ರಾಜ್ಯದ ವಿಚಾರಣಾ ನ್ಯಾಯಾಲಯವು ಜಯಾ ದೋಷಿ ಎಂದು ಪರಿಗಣಿಸಿ, 4 ವರ್ಷ ಜೈಲು ಶಿಕ್ಷೆ ಮತ್ತು 100 ಕೋಟಿ ರೂ. ದಂಡ ವಿಧಿಸಿತ್ತು. ಸಹ ಆರೋಪಿಗಳಾದ ವಿ.ಕೆ.ಶಶಿಕಲಾ, ಸುಧಾಕರನ್ ಹಾಗೂ ಇಳವರಿಸಿ ಅವರಿಗೂ ನಾಲ್ಕು ವರ್ಷ ಕಾರಾಗೃಹ ಸಜೆ ತೀರ್ಪು ನೀಡಲಾಗಿತ್ತು.   ಆ ನಂತರ ರಾಜ್ಯ ಹೈಕೋರ್ಟ್ ನಾಲ್ವರೂ ಆರೋಪಿಗಳನ್ನು ದೋಷಮುಕ್ತಗೊಳಿಸಿತ್ತು. ಬಳಿಕ ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಫೆ. 14ರಂದು ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿತ್ತು. ಆದರೆ ಜಯಲಲಿತಾ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅವರು ವಿರುದ್ಧದ ಕಾನೂನು ಕಲಾಪಗಳನ್ನು ಕೈಬಿಟ್ಟಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin