ಜಯಾ ಹುಟ್ಟುಹಬ್ಬವಾದ ಇಂದು ‘ಅಮ್ಮಾ ಡಿಎಂಕೆ’ ಪಕ್ಷ ಅಸ್ತಿತ್ವಕ್ಕೆ, ಶೀಘ್ರದಲ್ಲೇ ಲಾಂಛನ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

Deepa-Jayakumar--01

ಚೆನ್ನೈ, ಫೆ.24-ದಿವಂಗತ ಜಯಲಲಿತಾರ ಜನ್ಮದಿನವಾದ ಇಂದು ತಮಿಳುನಾಡಿನಲ್ಲಿ ಹೊಸ ರಾಜಕೀಯ ಪಕ್ಷವೊಂದು ಉದಯವಾಗಿದೆ. ಜಯಾರ ಅಣ್ಣನ ಮಗಳು ದೀಪಾ ಜಯಕುಮಾರ್ ಚೆನ್ನೈನ ತಮ್ಮ ನಿವಾಸದಲ್ಲಿ ಇಂದು ಹೊಸ ಪಕ್ಷದ ಕಚೇರಿಯನ್ನು ವಿಧ್ಯುಕ್ತವಾಗಿ ಉದ್ಘಾಟಿಸುವ ಮೂಲಕ ಡ್ರಾವಿಡ ರಾಜ್ಯ ರಾಜಕಾರಣಕ್ಕೆ ಅರಗ್ರೇಟಂ (ರಂಗಪ್ರವೇಶ) ಮಾಡಿದ್ದಾರೆ.
ಜಯಾರ ಹುಟ್ಟು ಹಬ್ಬದಂದು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಈ ಹಿಂದೆ ಪ್ರಕಟಿಸಿದ್ದ ದೀಪಾ ತಮ್ಮ ಕನಸನ್ನು ಇಂದು ಸಾಕಾರಗೊಳಿಸಿದ್ದಾರೆ. ರಾಜಕೀಯ ಪಕ್ಷವನ್ನು ಇಂದು ಅವರು ಅಸ್ತಿತ್ವಕ್ಕೆ ತಂದರಾದರೂ ಅದರ ಹೆಸರು, ಲಾಂಛನ ಮತ್ತು ಧ್ವಜದ ಬಗ್ಗೆ ಸಂಜೆ ಘೋಷಿಸುವುದಾಗಿ ಹೇಳಿದ್ದಾರೆ.

ಅವರ ನಿವಾಸದಲ್ಲಿ ನಡೆದ ಪಕ್ಷದ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಜಯಾ ನಿಷ್ಠರು, ಎಐಎಡಿಎಂಕೆ ಪಕ್ಷದಿಂದ ಸಿಡಿದು ಹೊರಬಂದವರು ಹಾಗೂ ಹಿರಿಯ ಮುಖಂಡರು ಹಾಜರಿದ್ದು, ದೀಪಾಗೆ ಬೆಂಬಲ ಸೂಚಿಸಿದರು.   ದೀಪಾ ಜಯಕುಮಾರ್ ತಮ್ಮ ಪಕ್ಷಕ್ಕೆ ಅಮ್ಮಾ ಡಿಎಂಕೆ ಎಂದು ಹೆಸರಿಡುವ ಸಾಧ್ಯತೆ ಇದೆ.  ಜಯಲಲಿತಾ ನಿಧನಾನಂತರ ಎಐಡಿಎಂಕೆ ಪಕ್ಷ ಇಬ್ಭಾಗವಾಗಿರುವುದರಿಂದ ದೀಪಾ ರಾಜಕೀಯ ಪ್ರವೇಶವು ಕುತೂಹಲ ಕೆರಳಿಸಿದೆ. ಒಂದೆಡೆ ಮಾಜಿ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ರಾಜಕೀಯ ಅಸ್ತಿತ್ವಕ್ಕೆ ಹೆಣಗಾಡುತ್ತಿದ್ದು, ಈ ಬೆಳವಣೆಗೆ ಅವರಿಗೆ ಅನುಕೂಲವಾಗಲಿದ ಎಂದು ವಿಶ್ಲೇಷಿಸಲಾಗುತ್ತಿದೆ.

ರಾಜ್ಯದಾದ್ಯಂತ  ಜಯಾ ಜನ್ಮದಿನ :

ತಮಿಳುನಾಡಿನಾದ್ಯಂತ ಇಂದು ಜಯಲಲಿತಾ ಅವರ ಜನ್ಮದಿನವನ್ನು ಅವರು ಅಪಾರ ಬೆಂಬಲಿಗರು ಮತ್ತು ಎಐಎಡಿಎಂಕೆ ಕಾರ್ಯಕರ್ತರು ಆಚರಿಸಿದರು. ಮರೀನಾ ಬೀಚ್‍ನಲ್ಲಿರುವ ಅವರ ಸಮಾಧಿಗೆ ಮುಂಜಾನೆಯಿಂದಲೇ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಧಾವಿಸಿ ಪುಷ್ಪನಮನ ಸಲ್ಲಿಸಿದರು. ಚೆನ್ನೈ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪುರುಚ್ಚಿ ತಲೈವಿ ಹುಟ್ಟುಹಬ್ಬನ್ನು ಆಚರಿಸಲಾಗಿದೆ.

ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಜೈಲು ಪಾಲಾಗಿರುವ ಶಶಿಕಲಾ ನಟರಾಜನ್ ನಿನ್ನೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಜಯಲಲಿತಾ ಜನ್ಮದಿನದ ಸಂದೇಶ ರವಾನಿಸಿದ್ದಾರೆ. ಅವರನ್ನು ಕಳೆದುಕೊಂಡ ವೇದನೆ ತಮ್ಮನ್ನು ತೀವ್ರವಾಗಿ ಕಾಡುತ್ತಿದೆ. ಅವರ ಕನಸನ್ನು ಸಾಕಾರಗೊಳಿಸಲು ಪಕ್ಷದ ಎಲ್ಲರೂ ಶ್ರಮಿಸಬೇಕೆಂದು ಅವರು ಸಂದೇಶದಲ್ಲಿ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin