ಜಲಗಡಿಯಲ್ಲಿ ಮುಂದುವರಿದ ಸಂಘರ್ಷ : 3,500 ಬೆಸ್ತರನ್ನು ಬೆದರಿಸಿ ಓಡಿಸಿದ ಶ್ರೀಲಂಕಾ ನೌಕಾಪಡೆ

ಈ ಸುದ್ದಿಯನ್ನು ಶೇರ್ ಮಾಡಿ

Tamil-Fishermen-Srilanka

ರಾಮೇಶ್ವರ, ಜ.5-ಭಾರತ ಮತ್ತು ಶ್ರೀಲಂಕಾ ಜಲಗಡಿ ಬಳಿ ತಮಿಳುನಾಡು ಮೀನುಗಾರರು ಮತ್ತು ದ್ವೀಪರಾಷ್ಟ್ರದ ನೌಕಾಪಡೆ ನಡುವೆ ಸಂಘರ್ಷ ಮುಂದುವರಿದಿದೆ. ಒಂದು ಕಡೆ ದ್ವೀಪರಾಷ್ಟ್ರದ ನೌಕಾದಳದವರು 3,500 ಮೀನುಗಾರರನ್ನು ಬೆದರಿಸಿ ಓಡಿದ್ದರೆ, ಇನ್ನೊಂದು ಘಟನೆಯಲ್ಲಿ 10 ಮಂದಿ ಬೆಸ್ತರನ್ನು ಬಂಧಿಸಿದ್ದಾರೆ. ಪುದುಕೊಟ್ಟೈ ಜಿಲ್ಲೆಯ ಜಗದಪಟ್ಟಿಣಂನ ಸುಮಾರು 3,500 ಮೀನುಗಾರರು 584 ದೋಣಿಗಳಲ್ಲಿ ಕಚ್ಚಿತೀವು ಕರಾವಳಿ ಪ್ರದೇಶದಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಆಗ ಅಲ್ಲಿಗೆ ಬಂದ ನೌಕಾಪಡೆ ಸಿಬ್ಬಂದಿ 30 ಯಾಂತ್ರೀಕೃತ ದೋಣಿಗಳ ಬಲೆಗಳನ್ನು ಹರಿದು ಹಾಕಿ, ಎಲ್ಲ ಮೀನುಗಾರರಿಗೆ ಬೆದರಿಕೆ ಹಾಕಿ ಅಲ್ಲಿಂದ ಓಡಿಸಿದರು. ಇದರಿಂದ ಬೆಸ್ತರು ಬರಿಗೈನಲ್ಲಿ ಹಿಂದಿರುಗಿದ್ಧಾರೆ ಎಂದು ರಾಮೇಶ್ವರಂ ಮೀನುಗಾರರ ಸಂಘದ ನಾಯಕ ಎಸ್. ಎಮೆನಿಟ್ ಹೇಳಿದ್ದಾರೆ.

ಇನ್ನೊಂದೆಡೆ, ನೆಡುಂತೀವು ಸಾಗರ ಪ್ರದೇಶದಲ್ಲಿ ನಿನ್ನೆ ರಾತ್ರಿ ಮೀನು ಹಿಡಿಯುತ್ತಿದ್ದ ತಮಿಳುನಾಡಿನ 10 ಜನ ಬೆಸ್ತರನ್ನು ದ್ವೀಪರಾಷ್ಟ್ರದ ನೌಕಾ ಸಿಬ್ಬಂದಿ ಬಂಧಿಸಿ ಎರಡು ದೋಣಿಗಳನ್ನು ವಶಪಡಿಸಿಕೊಂಡಿದೆ. ಬಂಧಿತ ಬೆಸ್ತರನ್ನು ಶ್ರೀಲಂಕಾದ ಉತ್ತರ ಭಾಗದಲ್ಲಿರುವ ಕನಕೇಶನ್‍ತುರೈಗೆ ಕರೆದೊಯ್ಯಲಾಗಿದೆ ಎಂದು ಪುದುಕೊಟ್ಟೈ ವಿಭಾಗದ ಮೀನುಗಾರಿಕೆ ಸಹಾಯಕ ನಿರ್ದೇಶಕ ಶೇಖರ್ ಆರೋಪಿಸಿದ್ದಾರೆ.  ತನ್ನ ವಶದಲ್ಲಿರುವ 51 ಮಂದಿ ತಮಿಳುನಾಡಿನ ಬೆಸ್ತರನ್ನು ಬಿಡುಗಡೆಗೊಳಿಸುವುದಾಗಿ ಶ್ರೀಲಂಕಾ ಹೇಳಿತ್ತು. ಇದರ ಬೆನ್ನಲ್ಲೇ 10 ಜನರನ್ನು ಬಂಧಿಸಿರುವುದು ತಮಿಳು ಮೀನುಗಾರರನ್ನು ಕರೆಳಿಸಿದೆ

ಜಲಗಡಿಯಲ್ಲಿ ನಿಲ್ಲದ ಸಂಘರ್ಷ :

ಡಿ.15ರಂದು ಕಚ್ಚತೀವು ಕರಾವಳಿ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಯಾಂತ್ರಿಕೃತ ದೋಣಿಗಳ ಬಲೆಗಳನ್ನು ಕತ್ತರಿಸಿದ ಶ್ರೀಲಂಕಾ ನೌಕಾ ಸಿಬ್ಬಂದಿ ಮೀನುಗಾರಿಕೆಯಲ್ಲಿ ತೊಡಗಿದ್ದ 2,500ಕ್ಕೂ ಹೆಚ್ಚು ಬೆಸ್ತರನ್ನು ಶ್ರೀಲಂಕಾ ಬೆನ್ನಟ್ಟಿ ಚದುರಿಸಿರುವ ಘಟನೆ ನಡೆದಿತ್ತು.  ಕಳೆದ ಕೆಲವು ದಿನಗಳಿಂದ ರಾಮೇಶ್ವರ ಕರಾವಳಿ ಪ್ರದೇಶದಲ್ಲಿ ಶ್ರೀಲಂಕಾ ನೌಕಾಪಡೆ ತಮಿಳುನಾಡು ಬೆಸ್ತರಿಗೆ ಮೀನುಗಾರಿಕೆಗೆ ಅಡ್ಡಿಯುಂಟು ಮಾಡಿ ದೋಣಿಗಳು ಮತ್ತು ಬಲೆಗಳಿಗೆ ಹಾನಿ ಮಾಡಿತ್ತು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin