ಜಲಾಂತರ್ಗಾಮಿಗಳಿಗೆ ಸಂಬಂಧಪಟ್ಟ ರಹಸ್ಯ ದಾಖಲೆಗಳು ಭಾರೀ ಪ್ರಮಾಣದಲ್ಲಿ ಸೋರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

S-Submarin

ನವದೆಹಲಿ, ಆ.24-ಫ್ರೆಂಚ್ ಕಂಪೆನಿಯೊಂದು ಭಾರತದ ನೌಕಾಪಡೆಗಾಗಿ ನಿರ್ಮಿಸುತ್ತಿರುವ ಸ್ಕಾರ್ಪಿನ್ ಶ್ರೇಣಿಯ ಆರು ಜಲಾಂತರ್ಗಾಮಿಗಳಿಗೆ ಸಂಬಂಧಪಟ್ಟ (ಸಬ್ ಮರೀನ್ಗಳು) ರಹಸ್ಯ ದಾಖಲೆಗಳು ಭಾರೀ ಪ್ರಮಾಣದಲ್ಲಿ ಸೋರಿಕೆಯಾಗಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ. ಈ ಕೃತ್ಯದ ಹಿಂದೆ ಭಾರತದ ನೆರೆ ದೇಶಗಳಾದ ಚೀನಾ ಮತ್ತು ಪಾಕಿಸ್ತಾನದ ಕೈವಾಡವಿದೆ ಎಂಬ ಗುಮಾನಿ ಇದ್ದು, ಇದು ದೇಶಕ್ಕೆ ಭಾರೀ ದೊಡ್ಡ ಕಳವಳಕಾರಿ ಸಂಗತಿಯಾಗಿದೆ.  ಫ್ರೆಂಚ್ ರಕ್ಷಣಾ ಗುತ್ತಿಗೆ ಸಂಸ್ಥೆಯಾದ ಡಿಸಿಎನ್ಎಸ್ ಭಾರತಕ್ಕಾಗಿ ನಿರ್ಮಿಸುತ್ತಿರುವ ಸ್ಕಾರ್ಪಿನ್ ವರ್ಗದ ಆರು ಜಲಾಂತರ್ಗಾಮಿಗಳಿಗೆ ಸಂಬಂಧಪಟ್ಟ ಸುಮಾರು 22,400 ಪುಟಗಳ ರಹಸ್ಯ ದಾಖಲೆಗಳು ಸೋರಿಕೆಯಾಗಿವೆ ಎಂದು ಆಸ್ಟ್ರೇಲಿಯಾದ ಪತ್ರಿಕೆಯೊಂದು ವರದಿ ಮಾಡಿದೆ.
ಭಾರತದ ಸ್ಕಾರ್ಪಿನ್ ದರ್ಜೆ ಸಬ್ಮರೀನ್ಗಳ ಯುದ್ಧ ಸಾಮರ್ಥ್ಯಗಳಿಗೆ ಸಂಬಂಧಪಟ್ಟ ಅತ್ಯಂತ ರಹಸ್ಯ ಮಾಹಿತಿ ಲೀಕ್ ಆಗಿದೆ ಎಂದು ದಿ ಆಸ್ಟ್ರೇಲಿಯನ್ ಪತ್ರಿಕೆ ವಿವರವಾದ ವರದಿಯನ್ನು ಪ್ರಕಟಿಸಿದೆ.

ಸೋರಿಕೆಯಾಗಿರುವ ಈ ಅತ್ಯಂತ ರಹಸ್ಯ ವರ್ಗೀಕೃತ ದಾಖಲೆ ಪತ್ರಗಳಿಗೆ ನಿರ್ಬಂಧಿತ ಸ್ಕಾರ್ಪಿನ್ ಇಂಡಿಯಾ ಎಂದು ಗುರುತು ಹಾಕಲಾಗಿತ್ತು.  ಈ ಅತಿ ಮಹತ್ವದ ದಾಖಲೆಗಳು ಚೀನಾ ಅಥವಾ ಪಾಕಿಸ್ತಾನ ತಲುಪಿರುವ ಗುಮಾನಿ ಇದೆ. ಒಂದು ವೇಳೆ ಈ ಸಂಶಯ ನಿಜವೇ ಆಗಿದ್ದರೆ ಭಾರತದ ಭದ್ರತೆಗೆ ಅತ್ಯಂತ ವಿನಾಶಕಾರಿ ಸಂಗತಿಯಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.  ಜಲಾಂತರ್ಗಾಮಿಯ ಟಾರ್ಪೆಡೊ ಉಡಾವಣೆ ವ್ಯವಸ್ಥೆ, ಅದರ ವೇಗ, ಕಾರ್ಯಕ್ಷಮತೆ, ಅದರ ಸಮುದ್ರ ಆಳದ ಸಾಮರ್ಥ್ಯ, ವೈರಿ ಪಡೆ ಮೇಲೆ ಆಕ್ರಮಣ ನಡೆಸುವ ವಿಧಾನ ಮುಂತಾದ ಮಹತ್ವ ವಿಷಯಗಳ ಸೋರಿಕೆಯಾದ ಮಾಹಿತಿಯಲ್ಲಿ ಒಳಗೊಂಡಿವೆ. ಭಾರತದ ನೌಕಾಪಡೆಯ ರಕ್ಷಣಾ ಸಾಮರ್ಥ್ಯದ ಈ ಸೋರಿಕೆಯು ಪಾಕಿಸ್ತಾನ ಮತ್ತು ಚೀನಾಗೆ ಮಹತ್ವದ ಬೇಹುಗಾರಿಕೆ ಸೋರಿಕೆಯ ಲಾಭವಾಗಲಿದೆ ಎಂದು ಬಣ್ಣಿಸಲಾಗಿದೆ. ಈ ಸೋರಿಕೆಯಿಂದ ಭಾರತಕ್ಕೆ ಮಾತ್ರವಲ್ಲದೆ ಸ್ಕಾರ್ಪಿನ್-ದರ್ಜೆಯ ಜಲಂತರ್ಗಾಮಿಗಳ ವಿವಿಧ ಮಾದರಿಗಳನ್ನು ಬಳಸುವ ಮಲೇಷ್ಯಾ ಮತ್ತು ಚಿಲಿ ದೇಶಗಳ ಭದ್ರತೆಗೂ ದೊಡ್ಡ ಮಟ್ಟದಲ್ಲಿ ಆತಂಕ ಎದುರಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin