ಜಲಾಶಯಗಳನ್ನು ಪ್ರವಾಸಿ ತಾಣಗಳನ್ನಾಗಿಸಲು ಸರ್ಕಾರ ಮಾಸ್ಟರ್ ಪ್ಲಾನ್

ಈ ಸುದ್ದಿಯನ್ನು ಶೇರ್ ಮಾಡಿ

Dam

ಬೆಂಗಳೂರು, ಅ.3-ರಾಜ್ಯದ ಜಲಾಶಯಗಳು ಇನ್ನು ಮುಂದೆ ಪ್ರವಾಸಿ ತಾಣಗಳಾಗಿ ಬದಲಾಗಲಿವೆ. ದೇಶ-ವಿದೇಶಗಳ ಪ್ರವಾಸಿಗರನ್ನು ಸೆಳೆಯುವ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ರಾಜ್ಯ ಸರ್ಕಾರ ಜಲಾಶಯಗಳನ್ನು ಬಳಸಿಕೊಳ್ಳಲು ಮುಂದಾಗಿದೆ. ವಿಶ್ವ ಪಾರಂಪರಿಕ ತಾಣಗಳು, ಜಲಪಾತಗಳು, ಮಲೆನಾಡ ವನಸಿರಿ, ಗಿರಿಧಾಮಗಳು ಸೇರಿದಂತೆ ಎಲ್ಲಾ ರೀತಿಯ ಪ್ರೇಕ್ಷಣೀಯ ಸ್ಥಳಗಳಿದ್ದರೂ ನೆರೆಯ ಗೋವಾ, ಕೇರಳದಂತೆ ಪ್ರವಾಸಿಗರನ್ನು ಸೆಳೆಯುತ್ತಿಲ್ಲ. ಅದಕ್ಕಾಗಿ ರಾಜ್ಯ ಸರ್ಕಾರ ಮಾಸ್ಟರ್ ಪ್ಲಾನ್ ರೂಪಿಸುತ್ತಿದೆ. ಅದುವೇ ಡ್ಯಾಂ ಟೂರಿಸಂ. ಇದೇನು ಡ್ಯಾಂ ಟೂರಿಸಂ ಅಂತೀರಾ? ರಾಜ್ಯದಲ್ಲಿ ಹರಿಯುವ ತುಂಗಭದ್ರ, ಕಾವೇರಿ, ಕೃಷ್ಣ ಮಲಪ್ರಭಾ, ಘಟಪ್ರಭಾ ಸೇರಿದಂತೆ ಹಲವು ನದಿಗಳಿಗೆ ಹತ್ತು ಹಲವು ಜಲಾಶಯಗಳನ್ನು ನಿರ್ಮಿಸಲಾಗಿದೆ. ಈ ಜಲಾಶಯಗಳ ವ್ಯಾಪ್ತಿಯಲ್ಲಿ ಥೀಮ್ ಪಾರ್ಕ್, ಸಾಂಸ್ಕೃತಿಕ ಕೇಂದ್ರ, ವಸ್ತು ಸಂಗ್ರಹಾಲಯ, ರೆಸ್ಟೋರೆಂಟ್, ಡಾರ್ಮೆಟರಿ, ರೆಸಾರ್ಟ್‍ಗಳು ತಲೆ ಎತ್ತಲಿದ್ದು, ಅಡ್ವೆಂಚರ್ ಆಕ್ಟಿವಿಟೀಸ್, ಪರಿಸರ ಪ್ರವಾಸೋದ್ಯಮ ಪ್ರಾರಂಭಗೊಳ್ಳಲಿದೆ.

ಇದಕ್ಕೆ ರಾಜ್ಯ ಸರ್ಕಾರದ ಉನ್ನತ ಮಟ್ಟದ ಸಮಿತಿ ತಾತ್ವಿಕ ಒಪ್ಪಿಗೆ ನೀಡಿದೆ. ಜಲಸಂಪನ್ಮೂಲ ಸಚಿವರ ನೇತೃತ್ವದಲ್ಲಿ ನಡೆದ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ನೀರಾವರಿ ನಿಗಮಗಳ ಅಧಿಕಾರಿಗಳ ಸಭೆಯಲ್ಲಿ ಜಲಾಶಯಗಳ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ಈಗಾಗಲೇ ಐಡೆಕ್ ಸಂಸ್ಥೆಯಿಂದ ಕಾರ್ಯ ಸಾಧ್ಯತಾ ವರದಿಯನ್ನು ಪಡೆದುಕೊಳ್ಳಲಾಗಿದ್ದು, ಸಾರ್ವಜನಿಕ ಸಹಭಾಗಿತ್ವದಲ್ಲಿ ಈ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತದೆ.

ಯಾವ ಜಲಾಶಯದಲ್ಲಿ ಯಾವ ಯೋಜನೆ?

ಆಲಮಟ್ಟಿ, ನಾರಾಯಣಪುರ ಜಲಾಶಯ:ಈ ಜಲಾಶಯಗಳ ಹಿನ್ನೀರಿನಲ್ಲಿ ಫೆರ್ರಿ (ಲಾಂಚ್ ಮಾದರಿ) ವ್ಯವಸ್ಥೆ, ಬಜೆಟ್ ಹೋಟೆಲ್ ನಿರ್ಮಾಣಕ್ಕೆ ಹಾಗೂ ಪರಿಸರ ಸ್ನೇಹಿ ಚಟುವಟಿಕೆಗಳಿಗೆ ಹಾಗೂ ಅರಣ್ಯ ಇಲಾಖೆಯ ಜಂಗಲ್ ರೆಸಾರ್ಟ್ ನಿರ್ಮಾಣಕ್ಕೆ ಶಿಫಾರಸು ಮಾಡಲಾಗಿದೆ.

ಭದ್ರಾ ಜಲಾಶಯ:

ಭದ್ರಾ ಜಲಾಶಯ ಪ್ರದೇಶದಲ್ಲಿ 87.3 ಕೋಟಿ ಅಂದಾಜು ವೆಚ್ಚದಲ್ಲಿ 105 ಎಕರೆಗಳ ಭೂಮಿಯಲ್ಲಿ ಅಡ್ವೆಂಚರ್ ಥೀಮ್ ಪಾರ್ಕ್, ರೆಸ್ಟೋರೆಂಟ್, ಗಾಲ್, ಲೈಟ್ ಶೋ ಹಾಗೂ ಕೃಷಿ ಪ್ರವಾಸೋದ್ಯಮ ಉದ್ಯಾನ, ಸಾರ್ವಜನಿಕ ಉದ್ಯಾನ ಹಾಗೂ ಶೈಕ್ಷಣಿಕ ಸಂಸ್ಥೆಗಳ ಸಹಯೋಗದಲ್ಲಿ ವಿವಿಧ ಸೌಲಭ್ಯ ಕಲ್ಪಿಸಲು ತಾತ್ವಿಕ ಒಪ್ಪಿಗೆ ನೀಡಲಾಗಿದೆ.

ಮಲಪ್ರಭಾ:

ಮಲಪ್ರಭಾ ಯೋಜನಾ ಪ್ರದೇಶದಲ್ಲಿ 12.83 ಕೋಟಿ ಅಂದಾಜು ವೆಚ್ಚದಲ್ಲಿ ಐದು ಎಕರೆ ಭೂಮಿಯಲ್ಲಿ ಅಡ್ವೆಂಚರ್, ಜಲ ಕ್ರೀಡೆಗಳು, ಹೊರಾಂಗಣ ಚಟುವಟಿಕೆ, ಮಧ್ಯಮ ಗಾತ್ರದ ಹೋಟೆಲ್, ಸಾರ್ವಜನಿಕ ಉದ್ಯಾನ ನಿರ್ಮಾಣ.

ಹಿಡಕಲ್:

ಘಟಪ್ರಭಾ ಯೋಜನಾ ಪ್ರದೇಶದಲ್ಲಿ ಮೊದಲ ಹಂತದಲ್ಲಿ 45.18 ಕೋಟಿ ಅಂದಾಜು ವೆಚ್ಚದಲ್ಲಿ 80 ಎಕರೆಯಲ್ಲಿ ಅಡ್ವೆಂಚರ್ ಥೀಮ್ ಪಾರ್ಕ್, ರೆಸಾರ್ಟ್, ಸಾರ್ವಜನಿಕ ಉದ್ಯಾನ ಹಾಗೂ ಶೈಕ್ಷಣಿಕ ಸಂಸ್ಥೆಗಳ ಸಹಯೋಗದಲ್ಲಿ ವಿವಿಧ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ. ಎರಡನೇ ಹಂತದಲ್ಲಿ ಸ್ನೋ ಪಾರ್ಕ್, ಕೌಟುಂಬಿಕ ಮನೋರಂಜನಾ ಕೇಂದ್ರ ನಿರ್ಮಿಸುವ ಪ್ರಸ್ತಾಪವಿದೆ.

ಕಬಿನಿ:

ಕಬಿನಿ ಜಲಾಶಯ ಪ್ರವಾಸೋದ್ಯಮ ಸೌಲಭ್ಯ ಅಭಿವೃದ್ಧಿಪಡಿಸಲು 54.57 ಕೋಟಿ ರೂ. ಪ್ರಸ್ತಾಪಕ್ಕೆ ಒಪ್ಪಿಗೆ ಸಿಕ್ಕಿದೆ. ನಿರ್ದಿಷ್ಟ ಕಾಲಮಿತಿಯೊಳಗೆ ಅನುಷ್ಠಾನ ಮಾಡಲು ತಾತ್ವಿಕವಾಗಿ ಒಪ್ಪಿಗೆ ನೀಡಲಾಗಿದೆ. ಕಬಿನಿ ಅಣೆಕಟ್ಟೆಯ ಕೆಳ ಭಾಗದ ಎಡ ಭಾಗದಲ್ಲಿ 50 ಎಕರೆ ಪ್ರದೇಶದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಅಭಿವೃದ್ಧಿಪಡಿಸಲು ಉದ್ದೇಶಿಸಿದ್ದು, ಸಾಧ್ಯತಾ ವರದಿ ಮತ್ತು ಯೋಜನಾ ರೂಪುರೇಷೆ ವರದಿಯನ್ನು ಐಡೆಕ್ ಸಿದ್ಧಪಡಿಸಿದೆ.

ಸಣ್ಣಪುಟ್ಟ ಜಲಾಶಯಗಳ ಬಳಿಯೂ ಅಭಿವೃದ್ಧಿ ಭಾಗ್ಯ:

ಮಂಚನಬೆಲೆ ಜಲಾಶಯದ ಕೆಳ ಭಾಗದಲ್ಲಿ ಉದ್ಯಾನವನ ನಿರ್ಮಿಸಲು 8.25 ಕೋಟಿ ರೂ. ವೆಚ್ಚದಲ್ಲಿ ಯೋಜನಾ ವರದಿಗೆ ಒಪ್ಪಿಗೆ ನೀಡಿದ್ದರೆ, ಸುವರ್ಣಾವತಿ, ಚಿಕ್ಕಹೊಳೆ ಜಲಾಶಯ, ನುಗು ಅಣೆಕಟ್ಟೆ ಪ್ರದೇಶ ಕೆಳ ಭಾಗದಲ್ಲಿ ಉದ್ಯಾನ, ಫುಡ್ ಕೋರ್ಟ್ ನಿರ್ಮಾಣ, ಗುಂಡಾಲ್ ಜಲಾಶಯ ನಿರ್ಮಿಸಲು ಉದ್ದೇಶಿಸಲಾಗಿದೆ.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin