ಜಲ್ಲಿಕಟ್ಟು ನಿಷೇಧ ತೆರವಿಗೆ ಸುಪ್ರೀಂಕೋರ್ಟ್ ನಕಾರ : ತಮಿಳುನಾಡು ಸರ್ಕಾರಕ್ಕೆ ಹಿನ್ನಡೆ

ಈ ಸುದ್ದಿಯನ್ನು ಶೇರ್ ಮಾಡಿ

Jellikattu

ನವದೆಹಲಿ, ಜ.12-ನಿಷೇಧಿತ ಜಲ್ಲಿಕಟ್ಟು (ಹೋರಿ ಬೆದರಿಸುವ) ಕ್ರೀಡೆ ಕುರಿತು ಸಂಕ್ರಾಂತಿ ಹಬ್ಬದ ಒಳಗೆ ತಾನು ತೀರ್ಪು ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಇಂದು ಹೇಳುವ ಮೂಲಕ ಪೊಂಗಲ್ ದಿನದಂದು ಈ ಸ್ಪರ್ಧೆ ನಡೆಸುವುದು ಅಕ್ರಮ ಮತ್ತು ಕಾನೂನು ಬಾಹಿರ ಎನ್ನುವುದನ್ನು ಸೂಚ್ಯವಾಗಿ ತಿಳಿಸಿದೆ. ಇದರಿಂದಾಗಿ ತಮಿಳುನಾಡು ಸರ್ಕಾರಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ.  ಜಲ್ಲಿಕಟ್ಟು ಮೇಲೆ ವಿಧಿಸಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸುವಂತೆ ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಕುರಿತು ಇಂದು ಸುಪ್ರೀಂಕೋರ್ಟ್ ವಿಚಾರಣೆ ನಡೆಸಿತು. ಆದರೆ ಜನವರಿ 14ರ ಪೊಂಗಲ್ ಹಬ್ಬದ ಒಳಗೆ ಈ ಕುರಿತು ತೀರ್ಪು ನೀಡಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿತು.

ಜಲ್ಲಿಕಟ್ಟು ಸ್ಪರ್ಧೆ ಮೇಲೆ ಹೇರಿರುವ ನಿಷೇಧ ತೆರವುಗೊಳಿಸುವ ಕುರಿತು ಸುಪ್ರೀಂಕೋರ್ಟ್‍ನಿಂದ ಆದೇಶ ಹೊರ ಬಿದ್ದಿಲ್ಲವಾದರೂ, ಸಂಕ್ರಾಂತಿ ದಿನ ತಮಿಳುನಾಡಿನಲ್ಲಿ ಈ ಕ್ರೀಡೆ ನಡೆದರೆ ಅದು ಅಕ್ರಮ ಮತ್ತು ಕಾನೂನುಬಾಹಿರವಾಗುತ್ತದೆ. ಅಲ್ಲದೇ ನ್ಯಾಯಾಲಯ ನಿಂದನೆಗೂ ಒಳಗಾಗಬೇಕಾಗುತ್ತದೆ ಎಂಬುದನ್ನು ಸೂಚ್ಯವಾಗಿ ತಿಳಿಸಿದೆ. ಈ ಕುರಿತ ತೀರ್ಪಿನ ಕರಡು ಸಿದ್ದವಾಗಿದೆಯಾದರೂ ಶನಿವಾರದ ಒಳಗೆ ಅದನ್ನು ಪ್ರಕಟಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಸ್ಪಷ್ಪಪಡಿಸಿದೆ. ಈ ಕುರಿತು ನಿನ್ನೆ ಹೇಳಿಕೆ ನೀಡಿದ್ದ ತಮಿಳುನಾಡು ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ, ಸುಪ್ರೀಂಕೋರ್ಟ್ ನಿಷೇಧವನ್ನು ತೆರವುಗೊಳಿಸಿ ಜಲ್ಲಿಕಟ್ಟು ಆಚರಣೆಗೆ ಅವಕಾಶ ನೀಡುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು.

ತಮಿಳುನಾಡಿನಲ್ಲಿ ಭುಗಿಲೆದ್ದ ಪ್ರತಿಭಟನೆ :

ಸುಪ್ರೀಂಕೋರ್ಟ್‍ನಿಂದ ನಿರ್ಬಂಧ ತೆರವುಗೊಳಿಸುವ ಬಗ್ಗೆ ಸ್ಪಷ್ಟ ಆದೇಶ ಹೊರಬೀಳದಿರುವ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಮದುರೈ ಜಿಲ್ಲೆಯಲ್ಲಿ ಜಲ್ಲಿಕಟ್ಟು ಕ್ರೀಡಾಳುಗಳು ಮತ್ತು ವಿದ್ಯಾರ್ಥಿಗಳು ರಾಜ್ಯ ಸರ್ಕಾರವೇ ಈ ಬಗ್ಗೆ ಅಧಿಸೂಚನೆ ಹೊರಡಿಬೇಕೆಂದು ಆಗ್ರಹಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin