ಜಾತಿ ಹೆಸರಿನಲ್ಲಿ ಯಾರೂ ರಾಜಕಾರಣ ಮಾಡಬಾರದು : ಡಿಸಿಎಂ ಪರಂ

ಈ ಸುದ್ದಿಯನ್ನು ಶೇರ್ ಮಾಡಿ

Parameshwar--01
ಬೆಂಗಳೂರು, ಅ.25-ಜಾತಿ ಹೆಸರಿನಲ್ಲಿ ಯಾರೂ ರಾಜಕಾರಣ ಮಾಡಬಾರದು. ಬಳ್ಳಾರಿಯಲ್ಲಿ ಜಾತಿಯನ್ನು ಮುಂದಿಟ್ಟುಕೊಂಡು ಮತಯಾಚನೆ ನಡೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು. ಸದಾಶಿವನಗರದ ಬಿಡಿಎ ಕ್ವಾಟ್ರ್ರಸ್‍ನಲ್ಲಿರುವ ತಮ್ಮ ಕಚೇರಿಯಲ್ಲಿಂದು ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದ ಅವರು, ಬಳ್ಳಾರಿ ಪರಿಶಿಷ್ಟ ವರ್ಗಕ್ಕೆ ಮೀಸಲಾಗಿರುವ ಕ್ಷೇತ್ರ. ಅಲ್ಲಿ ನಾಯಕ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಅದರ ಹೊರತಾಗಿ ಜಾತಿಯನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಬಾರದು.

ಪ್ರಜಾಪ್ರಭುತ್ವ ಎಂದರೆ ಎಲ್ಲಾ ಸಮುದಾಯಗಳನ್ನು ಒಳಗೊಳ್ಳುವುದಾಗಿದೆ. ಕಾಂಗ್ರೆಸ್ ಮೊದಲಿನಿಂದಲೂ ಎಲ್ಲಾ ವರ್ಗಗಳನ್ನು ಜೊತೆಯಾಗಿಟ್ಟುಕೊಂಡು ರಾಜಕಾರಣ ಮಾಡುತ್ತಿದೆ. ಚುನಾವಣೆ ಸಂದರ್ಭದಲ್ಲಿ ಜಾತಿ ಹೆಸರಿನಲ್ಲಿ ಮತ ಯಾಚನೆ ಮಾಡುವುದು ಒಳ್ಳೆಯದಲ್ಲ ಎಂದರು. ನಿನ್ನೆ ಬೆಂಗಳೂರಿನಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸದೆ ಇರುವುದಕ್ಕೆ ಕ್ಷಮೆ ಕೇಳಿದ ಪರಮೇಶ್ವರ್ ಅವರು, ನಾನು ಜಮಖಂಡಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯವರಿಗೆ ಅನಿರೀಕ್ಷಿತವಾಗಿ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಅವರೂ ಸಹ ಹೋಗಲಾಗಿಲ್ಲ. ಇದು ಉದ್ದೇಶಪೂರ್ವಕವಾಗಿ ಆದ ತಪ್ಪಲ್ಲ. ವಾಲ್ಮೀಕಿ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ ಎಂದು ಅವರು ಹೇಳಿದರು.

ಜಮಖಂಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಗೆಲ್ಲುವುದು ಖಚಿತ. ಆ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿರುವ ನಾನು ಮೂರ್ನಾಲ್ಕು ದಿನ ಅಲ್ಲಿ ಪ್ರಚಾರ ನಡೆಸಿದ್ದೇನೆ. ಉತ್ತಮ ವಾತಾವರಣ ಇದೆ. ಈ ಹಿಂದೆ ಶಾಸಕರಾಗಿದ್ದ ಸಿದ್ದು ನ್ಯಾಮೇಗೌಡ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಇದೆ. ಯುವಕರಾಗಿರುವ ಅವರ ಪುತ್ರ ಆನಂದ್ ಅವರನ್ನು ಕಣಕ್ಕಿಳಿಸಲಾಗಿದೆ. ತಂದೆಯ ಮಾರ್ಗದಲ್ಲೇ ಆನಂದ್ ಕೂಡ ಜನಪರವಾದ ನಿಲುವುಗಳನ್ನು ಹೊಂದಿದ್ದು, ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಬಡತನದ ಹಿನ್ನೆಲೆಯಲ್ಲಿ ಬಂದ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕ ಪಡೆದಿದ್ದಾರೆ. ಅವರನ್ನು ಗುರುತಿಸಿ ಇಸ್ಕಾನ್ ಸಂಸ್ಥೆ ವಿದ್ಯಾರ್ಥಿ ವೇತನ ನೀಡುತ್ತಿದೆ. ಇದು ಉತ್ತಮ ಕೆಲಸ. ಇಂದು ಸಾಂಕೇತಿಕವಾಗಿ 10 ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಗಿದೆ. ಇಸ್ಕಾನ್ ಸಂಸ್ಥೆ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ವಿದ್ಯಾರ್ಥಿ ವೇತನ ಹಂಚಿಕೆ ಮಾಡಲಿದೆ. ಇಂದು ವಿದ್ಯಾರ್ಥಿ ವೇತನ ಪಡೆದ ಮಕ್ಕಳ ಪೈಕಿ ಪೆÇಲೀಸ್ ಕಾನ್ಸ್‍ಟೆಬಲ್ ಮಕ್ಕಳು, ದಿನಗೂಲಿ ಕಾರ್ಮಿಕರ ಮಕ್ಕಳು, ಹೂ ಮಾರಿ ಜೀವನ ನಡೆಸುವವರ ಮಕ್ಕಳಿದ್ದಾರೆ. ವಿದ್ಯಾರ್ಥಿಗಳು ಈ ಸೌಲಭ್ಯ ಪಡೆದುಕೊಂಡು ಇನ್ನಷ್ಟು ಚೆನ್ನಾಗಿ ಓದಿ ತಂದೆ-ತಾಯಿಗಳ ಕನಸನ್ನು ಈಡೇರಿಸುವಂತೆ ಅವರು ಸಲಹೆ ನೀಡಿದರು.

Facebook Comments