ಜಾದವ್ ಭೂ ವಿವಾದ : ಕಂದಾಯ ಇಲಾಖೆಯ ದಾಖಲೆಗಳನ್ನು ಜಾಲಾಡುತ್ತಿರುವ ಎಸಿಬಿ

ಈ ಸುದ್ದಿಯನ್ನು ಶೇರ್ ಮಾಡಿ

Arvind-Jadav

ಬೆಂಗಳೂರು, ಆ.30– ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾದವ್ ವಿರುದ್ಧದ ಭೂ ಕಬಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕಂದಾಯ ಇಲಾಖೆ ದಾಖಲೆಗಳನ್ನು ಪರಿಶೀಲಿಸಿದೆ.  ಕಂದಾಯ ಇಲಾಖೆಯ ಕೆಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿರುವ ಎಸಿಬಿ ಅಧಿಕಾರಿಗಳು ಆರೋಪಕ್ಕೆ ಸಂಬಂಧಿಸಿದಂತೆ ಪರಿಶೀಲನೆ ಕೈಗೊಂಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಕಂದಾಯ ಇಲಾಖೆಯ ದಾಖಲೆಗಳ ಕೊಠಡಿಯಲ್ಲಿರುವ ಮೂಲ ದಾಖಲೆಗಳನ್ನು ಪರಿಶೀಲನೆ ನಡೆಸಿ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆರ್ಟಿಐ ಕಾರ್ಯಕರ್ತ ಎಸ್.ಭಾಸ್ಕರನ್ ನೀಡಿರುವ ದೂರಿನ ಮೇರೆಗೆ ಎಸಿಬಿಯು ಮುಖ್ಯ ಕಾರ್ಯದರ್ಶಿ ಅವರ ಮೇಲಿರುವ ಭೂ ಕಬಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದೆ. ದೂರುದಾರ ಭಾಸ್ಕರ್ ಅವರನ್ನು ಕೂಡ ಎಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.  ದೂರಿಗೆ ಪೂರಕವಾಗಿ ಕೆಲವು ಮಾಹಿತಿಗಳನ್ನು ಅರ್ಜಿದಾರರಿಂದ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಆನೇಕಲ್ ತಾಲೂಕಿನ ಸರ್ಜಾಪುರ ಹೋಬಳಿಯ ರಾಮನಾಯ್ಕನಹಳ್ಳಿ ಗ್ರಾಮಕ್ಕೆ ಸೇರಿದ ಜಮೀನಿನಲ್ಲಿ 8.3 ಎಕರೆ ಜಮೀನನ್ನು ತಮ್ಮ ತಾಯಿ ತಾರಾಬಾಯಿ ಅವರು ಖರೀದಿಸಿರುವುದಾಗಿ ಜಾದವ್ ಅವರು ಹೇಳಿದ್ದರು.

ಅಕ್ರಮವಾಗಿ ದಾಖಲೆ ಸೃಷ್ಟಿಸಿ ವಿವಿಧ ಫಲಾನುಭವಿಗಳಿಗೆ 66 ಎಕರೆ ಜಮೀನು ಮಂಜೂರು ಮಾಡಲು ಸಿದ್ಧತೆ ನಡೆಸಿತ್ತು. ಅದಕ್ಕೆ ಸರ್ವೆ ಇಲಾಖೆ ಅಧಿಕಾರಿಗಳು ಸಹಕರಿಸಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಮುಖ್ಯ ಕಾರ್ಯದರ್ಶಿ ಆ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದರು ಎಂದು ಎಸಿಬಿಗೆ ನೀಡಿರುವ ದೂರಿನಲ್ಲಿ ಭಾಸ್ಕರನ್ ತಿಳಿಸಿದ್ದರು ಎನ್ನಲಾಗಿದೆ.  ಮುಖ್ಯ ಕಾರ್ಯದರ್ಶಿ ಮೇಲೆ ಭೂ ಕಬಳಿಕೆ ಆರೋಪ ಕೇಳಿಬಂದು ವಾರ ಕಳೆದರೂ ರಾಜ್ಯ ಸರ್ಕಾರದಿಂದ ಯಾವುದೇ ನಿರ್ದಿಷ್ಟ ಕ್ರಮ ಕೈಗೊಂಡಿಲ್ಲ. ಕಂದಾಯ ಇಲಾಖೆಯಿಂದ ಈ ಸಂಬಂಧ ಸರ್ಕಾರಕ್ಕೆ ವರದಿ ಕೂಡ ಸಲ್ಲಿಕೆಯಾಗಿದೆ. ಆದರೂ ಕೂಡ ಸರ್ಕಾರ ಇನ್ನೂ ಮೀನಾಮೇಷ ಎಣಿಸತೊಡಗಿದೆ.

ಈ ನಡುವೆ ಆರೋಪಕ್ಕೆ ಪೂರಕವಾಗಿ ದಿನಕ್ಕೊಂದು ಅವ್ಯವಹಾರದ ಆರೋಪ ಮುಖ್ಯಕಾರ್ಯದರ್ಶಿ ಮೇಲೆ ಕೇಳಿಬರುತ್ತಲೇ ಇದೆ. ಮಾಧ್ಯಮಗಳಲ್ಲಿ ಸರಣಿ ರೂಪದಲ್ಲಿ ಆರೋಪಗಳ ಪಟ್ಟಿ ಬೆಳೆಯತೊಡಗಿದೆ. ಇದು ರಾಜ್ಯ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin