ಜಾದವ್ ಭೂ ಹಗರಣ ಪ್ರಕರಣ ಕುರಿತು ಇನ್ನೂ ವರದಿ ಬಂದಿಲ್ಲ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

S-Siddaramaiha

ಬೆಂಗಳೂರು, ಆ.25- ಸರ್ಕಾರದ ಮುಖ್ಯಕಾರ್ಯದರ್ಶಿ ಅರವಿಂದ್ಜಾದವ್ ಅವರ ವಿರುದ್ಧ ಕೇಳಿಬಂದಿರುವ ಭೂ ಕಬಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯಿಂದ ಈವರೆಗೂ ವರದಿ ಸಲ್ಲಿಕೆಯಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.  ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈವರೆಗೂ ವರದಿ ಕೈ ಸೇರಿಲ್ಲ. ವರದಿ ಕೈ ಸೇರಿದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ವರದಿ ನೀಡಲು ಕಂದಾಯ ಇಲಾಖೆಗೆ ಯಾವುದೇ ಕಾಲಮಿತಿ ವಿಧಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಆನೇಕಲ್ ಸಮೀಪ ಸುಮಾರು 5.3 ಎಕರೆ ಭೂಮಿಯನ್ನು 14 ವರ್ಷಗಳ ಹಿಂದೆ ಮುಖ್ಯಕಾರ್ಯದರ್ಶಿ ಅರವಿಂದ್ ಜಾದವ್ ಅವರ ತಾಯಿ ತಾರಾಬಾಯಿ ಅವರ ಹೆಸರಿನಲ್ಲಿ ಖರೀದಿ ಮಾಡಲಾಗಿತ್ತು. ಅನಂತರ ಅದನ್ನು ಪೋಡಿ ಮಾಡಿಸಲು ಮುಖ್ಯಕಾರ್ಯದರ್ಶಿಯವರು ಅಧಿಕಾರಿಗಳ ಮೇಲೆ ಒತ್ತಡ ಹೇರಿದರು. ಇದರಲ್ಲಿ ಸಾಕಷ್ಟು ನಿಯಮ ಬಾಹಿರ ಚಟುವಟಿಕೆಗಳು ನಡೆದಿವೆ ಎಂಬ ಆರೋಪ ಕೇಳಿ ಬಂದಿವೆ.

ವಿವಾದ ಬೆಳಕಿಗೆ ಬರುತ್ತಿದ್ದಂತೆ ವ್ಯಾಪಕ ಚರ್ಚೆಗಳು ನಡೆಯುವ ಜತೆಗೆ ಮುಖ್ಯಕಾರ್ಯದರ್ಶಿಗಳ ರಾಜೀನಾಮೆಗಾಗಿ ಪ್ರತಿಪಕ್ಷಗಳು ಪಟ್ಟು ಹಿಡಿದಿವೆ.  ಆರ್ಟಿಐ ಕಾರ್ಯಕರ್ತ ಭಾಸ್ಕರ್ ಎಂಬುವರು ಭ್ರಷ್ಟಾಚಾರ ನಿಗ್ರಹ ದಳಕ್ಕೂ ದೂರು ನೀಡಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಕಾರ್ಯದರ್ಶಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು ಎಂದು ಹೇಳಲಾಗಿತ್ತು.  ಈ ಎಲ್ಲದರ ಜತೆಗೆ ವಿವಾದದ ಕುರಿತು ವಾಸ್ತವದ ವರದಿ ನೀಡುವಂತೆ ಮುಖ್ಯಮಂತ್ರಿ ಕಂದಾಯ ಇಲಾಖೆಗೆ ಸೂಚಿಸಿದ್ದರು. ಉಪವಿಭಾಗಾಧಿಕಾರಿ ದಾಖಲಾತಿಗಳನ್ನು ಪರಿಶೀಲನೆ ನಡೆಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ಅವರಿಗೆ ನಿನ್ನೆ ವರದಿ ನೀಡಿದ್ದಾರೆ ಎಂದು ಹೇಳಲಾಗಿದೆ.

ಜಿಲ್ಲಾಧಿಕಾರಿಯವರು ಕಂದಾಯ ಇಲಾಖೆಯ ಪ್ರಧಾನಕಾರ್ಯದರ್ಶಿ ರಮಣರೆಡ್ಡಿ ಅವರಿಗೆ, ರಮಣರೆಡ್ಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸುವ ಸಾಧ್ಯತೆ ಇದೆ. ಆದರೆ, ಆ ವರದಿ ಇನ್ನೂ ನನ್ನ ಕೈ ಸೇರಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin