ಜಿಎಸ್‍ಟಿ ಜಾರಿಗೆ ಕ್ಷಣಗಣನೆ ಆರಂಭ, ಆದಾಯ ತೆರಿಗೆ ಅಧಿಕಾರಿಗಳು ಫುಲ್ ಬ್ಯುಸಿ

ಈ ಸುದ್ದಿಯನ್ನು ಶೇರ್ ಮಾಡಿ

Program--GT

ನವದೆಹಲಿ, ಜೂ.30- ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ (ಜಿಎಸ್‍ಟಿ) ಜಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಇಡೀ ದೇಶಾದ್ಯಂತ ಜನರಲ್ಲಿ ತೀವ್ರ ಕುತೂಹಲ, ಆತಂಕ ಕಾತರಗಳು ಹೆಚ್ಚಾಗಿರುವಂತೆಯೇ ಕಾಯ್ದೆ ಅನುಷ್ಠಾನವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಆದಾಯ ತೆರಿಗೆ ಅಧಿಕಾರಿಗಳು ತೀವ್ರ ಕಸರತ್ತು ನಡೆಸಿದ್ದಾರೆ.  ದೆಹಲಿ ವಿಮಾನ ನಿಲ್ದಾಣದ ಬಳಿಯಿರುವ ಸರಕು ಮತ್ತು ಸೇವೆಗಳ ತೆರಿಗೆ ಕಾರ್ಯಪಡೆ (ಜಿಎಸ್‍ಟಿಎನ್) ಕಚೇರಿಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಹಗಲಿರುಳೆನ್ನದೆ ಕಾರ್ಯಪ್ರವೃತ್ತರಾಗಿ ಜಿಎಸ್‍ಟಿ ಸುಗಮ ಜಾರಿಗೆ ಅನುಕೂಲವಾಗುವಂತೆ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.
ನಿನ್ನೆ ಬೆಳಗಿನಿಂದಲೂ ಈ ಕಚೇರಿಯಲ್ಲಿ ಮೌನವೇ ಮನೆ ಮಾಡಿದ್ದು, ಅನೇಕ ಹಿರಿಯ ಅಧಿಕಾರಿಗಳು, ಅರ್ಥಶಾಸ್ತ್ರಜ್ಞರು, ತೆರಿಗೆ ತಜ್ಞರು ಕಂಪ್ಯೂಟರ್‍ಗಳ ಮುಂದೆ ಕುಳಿತು ತದೇಕಚಿತ್ತದಿಂದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಹಲವಾರು ಅಧಿಕಾರಿಗಳ ತಂಡ ಇಂದು ಬೆಳಗಿನವರೆಗೂ ಲೆಕ್ಕಾಚಾರದಲ್ಲಿ ತೊಡಗಿದ್ದರು. ಹಳೆ ತೆರಿಗೆ ಪದ್ಧತಿಯಿಂದ ದೇಶದ ಅರ್ಥವ್ಯವಸ್ಥೆಗೆ ಹೊಸ ಭಾಷ್ಯ ಬರೆಯಲಿರುವ ನೂತನ ತೆರಿಗೆ ಪದ್ಧತಿಗೆ ಪರಿವರ್ತಿತರಾಗುತ್ತಿರುವ ಕೋಟ್ಯಂತರ ತೆರಿಗೆದಾರರಿಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗದಂತೆ ಕಾರ್ಯಕ್ರಮ ಜಾರಿಗೊಳಿಸುವುದು ಈಗ ತೆರಿಗೆ ಅಧಿಕಾರಿಗಳ ಹೊಣೆಯಾಗಿದೆ.  ಈ ಹಿನ್ನೆಲೆಯಲ್ಲಿ ಈಗಾಗಲೇ 6.6 ಮಿಲಿಯನ್ ಹೊಸ ತೆರಿಗೆದಾರರು ಈಗಾಗಲೇ ಜಿಎಸ್‍ಟಿಯಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡಿದ್ದು, ಕಳೆದ ರಾತ್ರಿಯಿಂದ ಬೆಳಗಿನವರೆಗೆ 1.7 ಲಕ್ಷ ಹೊಸ ಜಿಎಸ್‍ಟಿ ಸೇರ್ಪಡೆ ಅರ್ಜಿಗಳು ಕಚೇರಿಗೆ ಬಂದಿವೆ.

ಈಗ ಸಮಸ್ಯೆ ಇರುವುದು ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಿಗಳಿಗೆ. ತಾವು ಹೊಸ ತೆರಿಗೆ ಜಾಲದಲ್ಲಿ ಯಾವ ರೀತಿ ನಡೆದುಕೊಳ್ಳಬೇಕು, ನಮ್ಮ ಕಂಪ್ಯೂಟರ್‍ಗಳಿಗೆ ಯಾವ ರೀತಿ ಪ್ರೋಗ್ರಾಮ್  ಅಳವಡಿಸಿಕೊಳ್ಳಬೇಕು ಮತ್ತು ಕಚೇರಿ ಅಕೌಂಟ್ಸ್ ವಿಭಾಗದವರಿಗೆ ಯಾವ ರೀತಿ ತರಬೇತಿ ಕೊಡಬೇಕು ಎಂಬುದು ಈಗ ಅವರ ಮುಂದಿರುವ ಪ್ರಶ್ನೆ.  ನೂತನ ತೆರಿಗೆ ಪದ್ಧತಿಗೆ ಸೇರ್ಪಡೆಯಾಗುವ ಯಾರೇ ಆಗಲಿ ತಾವು ಇದ್ದಲ್ಲಿಂದಲೇ ತಮ್ಮ ತೆರಿಗೆ ವ್ಯವಸ್ಥೆಯನ್ನು ಕಂಪ್ಯೂಟರ್‍ಗೆ ಆನ್‍ಲೈನ್ ಮೂಲಕ ಅಪ್‍ಲೋಡ್ ಮಾಡುವಂತೆ ಪ್ರೋಗ್ರಾಮ್  ಸಿದ್ಧಪಡಿಸಲಾಗಿದೆ ಎಂದು ಆದಾಯ ತೆರಿಗೆ ತಜ್ಞ ವಾಸುತೋಷ್ ರಾಜನ್ ಹೇಳುತ್ತಾರೆ.

ಈಗಾಗಲೇ ಈ ಪ್ರೋಗ್ರಾಮ್ ಅನ್ನು ಅಧಿಕಾರಿಗಳು ಹಲವು ಬಾರಿ ತಪಾಸಣೆಗೊಳಪಡಿಸಿ ಖಚಿತಪಡಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಏನೇ ಆದರೂ ನಾವು ಮತ್ತೊಮ್ಮೆ ನಮ್ಮ ಈ ವ್ಯವಸ್ಥೆಯನ್ನು ಸಂಪೂರ್ಣ ತಪಾಸಣೆಗೊಳಪಡಿಸಬೇಕಿದೆ ಮತ್ತು ಎಲ್ಲ ದಾಖಲೆಗಳನ್ನೂ ಪರಿಶೀಲಿಸಬೇಕಿದೆ ಎಂದು ನಿವೃತ್ತ ಬ್ಯಾಂಕ್ ಅಧಿಕಾರಿ ಜ್ಞಾನೇಂದ್ರ ಪ್ರಕಾಶ್ ದ್ವಿವೇದಿ ಹೇಳುತ್ತಾರೆ.   ಇದು ಯಾವುದೇ ರೀತಿ ಇರಲಿ. ಆದರೆ ಇದನ್ನು ನಾವು ನಮ್ಮ ಕಾರ್ಯಕ್ರಮದಲ್ಲಿ ಅಳವಡಿಸಿಕೊಳ್ಳಲೇಬೇಕು. ಇದೊಂದು ರಾಷ್ಟ್ರೀಯ ಸೇವೆ ಎನ್ನುತ್ತಾರೆ ಅವರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin