ಜಿಎಸ್‍ಟಿ ಜಾರಿಯಲ್ಲಿ ಗೊಂದಲ ತಪ್ಪಿಸಲು ಉತ್ಪನ್ನಗಳಿಗೆ ದೇಶಾದ್ಯಂತ ಏಕರೂಪ ದರ ನಿಗದಿ

ಈ ಸುದ್ದಿಯನ್ನು ಶೇರ್ ಮಾಡಿ

GST--011

ನವದೆಹಲಿ, ಏ. 17-ಕೇಂದ್ರ ಸರ್ಕಾರವು ಶೀಘ್ರದಲ್ಲೇ ಅನುಷ್ಠಾನಕ್ಕೆ ತರಲಿರುವ ಸರಕು ಮತ್ತು ಸೇವಾ ಕ್ಷೇತ್ರಗಳ ತೆರಿಗೆ(ಜಿಎಸ್‍ಟಿ) ಪದ್ಧತಿಯ ಜಾರಿಯಲ್ಲಿ ಉಂಟಾಗಬಹುದಾದ ಗೊಂದಲಗಳನ್ನು ತಪ್ಪಿಸುವ ನಿಟ್ಟಿನಲ್ಲಿ ವಿದ್ಯುನ್ಮಾನ (ಎಲೆಕ್ಟ್ರಾನಿಕ್ಸ್) ಉತ್ಪನ್ನಗಳೂ ಸೇರಿದಂತೆ ಕೆಲ ನಿರ್ದಿಷ್ಟ ಉತ್ಪನ್ನಗಳಿಗೆ ದೇಶಾದ್ಯಂತ ಏಕರೂಪ ದರ ನಿಗದಿಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.  ವಿವಿಧ ಉತ್ಪನ್ನಗಳಿಗೆ ದೇಶದಲ್ಲಿ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ದರ ಮುಂದುವರಿಯುವುದರಿಂದ ಸರಕು ಮತ್ತು ಸೇವಾ ಕ್ಷೇತ್ರಗಳ ತೆರಿಗೆ(ಜಿಎಸ್ ಟಿ) ಪದ್ಧತಿಯ ಜಾರಿಯಲ್ಲಿ ಉಂಟಾಗಬಹುದಾದ ಅನಗತ್ಯ ಗೊಂದಲ ನಿವಾರಿಸಲು ಎಲ್ಲಾ ಉತ್ಪನ್ನಗಳಿಗೆ ಏಕರೂಪ ದರ ನಿಗದಿಪಡಿಸಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಉದಾಹರಣೆಗೆ, ಎಲ್ಲಾ ವಿಧವಾದ ಪಾದರಕ್ಷೆಗಳು ಅಥವಾ ಮೊಬೈಲ್ ಫೋನ್ ಸೆಟ್‍ಗಳ ದರವನ್ನು ದೇಶಾದ್ಯಂತ ಏಕರೂಪ ಬೆಲೆಗೆ ಮಾರಾಟ ಮಾಡುವಂತೆ ಮಾಡಬಹುದು.ಒಂದು ಗುಂಪಿನ ಉತ್ಪನ್ನಗಳಿಗೆ ಏಕರೂಪ ದರವನ್ನು ನಿಗದಿಪಡಿಸಿದರೆ ತೆರಿಗೆಯ ಸ್ವರೂಪ ಸರಳವಾಗುವುದರಿಂದ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಅನುಷ್ಠಾನವೂ ಕೂಡ ಸುಲಭವಾಗುತ್ತದೆ ಎಂಬುದು ಸರ್ಕಾರದ ಚಿಂತನೆಯಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಂದೇ ಗ್ರೂಪ್‍ನ ಉತ್ಪನ್ನಗಳಿಗೆ ಬೇರೆ ಬೇರೆ ಕಡೆ ಬೇರೆ ಬೇರೆ ದರ ಇರುವುದರಿಂದ ಅದು ಅನಗತ್ಯವಾದ ವಿವಾದ ಮತ್ತು ಗೊಂದಲಗಳಿಗೆ ಕಾರಣವಾಗಬಹುದು ಎಂದೂ ಆ ಹಿರಿಯ ಅಧಿಕಾರಿ ಹೇಳಿದ್ದಾರೆ.

ಜಾಗತಿಕವಾಗಿ ತೆರಿಗೆ ದರಗಳು ಒಂದೇ ತೆರನಾಗಿವೆ. ಆದರೆ ಭಾರತದಲ್ಲಿ ತೆರಿಗೆ ಸ್ವರೂಪವು ನಾಲ್ಕು ಹಂತಗಳಲ್ಲಿ ರೂಢಿಯಲ್ಲಿದೆ. ಶೇ. 5, ಶೇ. 12, ಶೇ. 18, ಮತ್ತು ಶೆ. 28. ಬಹುತೇಕ ಉತ್ಪನ್ನಗಳಿಗೆ ಶೇ. 18ರ ತೆರಿಗೆಯೇ ಅನ್ವಯವಾಗುತ್ತದೆ. ಜಿಎಸ್‍ಟಿ ತೆರಿಗೆ ಕಾಯ್ದೆಯ ಪ್ರಕಾರ ಗರಿಷ್ಠ ಪ್ರಮಾಣದಲ್ಲಿ, ಅಂದರೆ ಶೇ. 40ರಷ್ಟು ತೆರಿಗೆಯನ್ನು ವಿಧಿಸಲು ಅವಕಾಶವಿದೆ. ಆದರೆ ಅನೇಕ ಆರ್ಥಿಕ ತಜ್ಞರು ಈ ರೀತಿ ತೆರಿಗೆ ವಿಧಿಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಾರೆ.

ಸಮಿತಿಯ ತೀರ್ಮಾನಕ್ಕೆ:

ಪ್ರಸಕ್ತ ಯಾವ ಯಾವ ಉಪ್ತನ್ನ(ವಸ್ತು)ಗಳು, ಯಾವ ಯಾವ ಸೇವೆಗಳನ್ನು ಯಾವ ಯಾವ ಕೆಟಗರಿ(ವಿಭಾಗ) ಅಡಿ ತರಬಹುದು ಎಂಬುದನ್ನು ನಿರ್ಧರಿಸುವ ಕೆಲಸವನ್ನು ಸರ್ಕಾರ ರಚಿಸಿರುವ ತಜ್ಞರ ಜಿಎಸ್‍ಟಿ ಸಮಿತಿ ಮಾಡುತ್ತಿದೆ. ಅಂತಾರಾಜ್ಯ ವಲಯದಲ್ಲಿ ವಸ್ತುಗಳ ದರ ಮತ್ತು ಸಾಗಾಣಿಕೆ ವಿಷಯದಲ್ಲಿ ಪ್ರಸ್ತುತ ಇರುವ ಅಡೆತಡೆಗಳನ್ನು ನಿವಾರಿಸಿದರೆ ದೇಶದ ಆರ್ಥಿಕ ಹಣಕಾಸು ವಲಯದಲ್ಲಿ ಶೇ. ಒಂದರಿಂದ ಎರಡರಷ್ಟು ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಹೇಳಲಾಗುತ್ತಿದೆ.

ಪ್ರಸಕ್ತ ದೇಶದಲ್ಲಿ ಮೌಲ್ಯ ವರ್ಧಿತ ತೆರಿಗೆಯ ಸ್ವರೂಪವು ರಾಜ್ಯ-ರಾಜ್ಯಗಳು ಮತ್ತು ಕೇಂದ್ರ ಸರ್ಕಾರಗಳಲ್ಲಿ ಬೇರೆ ಬೇರೆ ದರದಲ್ಲಿದ್ದು, ಒಂದೇ ಕೆಟಗರಿಯ ವಸ್ತುಗಳ ಮೇಲಿನ ತೆರಿಗೆ ಏಕರೂಪದಲ್ಲಿಲ್ಲ. ಉದಾಹರಣೆಗೆ, ಪಾದರಕ್ಷೆಗಳು, ವಿವಿಧ ಬಿಸ್ಕೆಟ್‍ಗಳು, ಎಲೆಕ್ಟ್ರಿಕ್ ಬಲ್ಬ್ಗಳು, ಕನ್ನಡಕಗಳ ಫ್ರೇಮ್‍ಗಳ ದರದಲ್ಲಿ ಭಾರೀ ವ್ಯತ್ಯಾಸವಿದೆ. ಅದೇ ರೀತಿ ಮೊಬೈಲ್ ಫೋನ್‍ಗಳೂ ಕೂಡ. ಹಾಗಾಗಿ ಇದನ್ನು ಸರಿಪಡಿಸಿದರೆ ಮುಂದೆ ಜಿಎಸ್‍ಟಿ ಅನುಷ್ಠಾನ ಸುಗಮವಾಗುತ್ತದೆ ಎಂಬುದು ಕೇಂದ್ರದೆ ಚಿಂತನೆಯಾಗಿದೆ.

ಒಂದೇ ಉತ್ಪನ್ನಕ್ಕೆ ಬಗೆಬಗೆಯ ದರಗಳನ್ನು ಗ್ರಾಹಕರು ನೀಡುವುದು ಸಾಮಾನ್ಯ. ಇದಕ್ಕೆ ಒಳ್ಳೆಯ ಉದಾಹರಣೆ ಎಂದರೆ, ಬೇಕರಿ ಉತ್ಪನ್ನಗಳು, ಬಿಸ್ಕೆಟ್‍ಗಳು ಮತ್ತು ರೊಟ್ಟಿ(ರೋಟಿ)ಗಳಿಗೆ ಶೇ. 6ರಷ್ಟು ತೆರಿಗೆ ವಿಧಿಸಲಾಗಿತ್ತಿದೆ. ಆದರೆ, ಚಾಕೋಲೇಟ್ ಮಿಶ್ರಿತ ಅಥವಾ ಚಾಕೋಲೇಟ್ ಕೋಟಿಂಗ್ ವಸ್ತುಗಳಿಗೆ ಶೇ. 12.5ರಷ್ಟು ತೆರಿಗೆ ಇದೆ. ಪ್ಯಾಕ್ ಮಾಡಿದ ಮತ್ತು ಒಂದು ಕಿಲೊಗ್ರಾಂ ಮೀರದ ಬಿಸ್ಕೇಟ್‍ಗಳಿಗೆ ಯಾವುದೇ ರೀತಿ ತೆರಿಗೆಯೂ ಇರುವುದಿಲ್ಲ. ಇದೇ ವೇಳೆ ಚರ್ಮದ ಪಾದರಕ್ಷೆಗಳ ಮೇಲೆ ಶೆ. 6 ಮತ್ತು ಇತರೆ ಮಟೀರಿಯಲ್‍ನಲ್ಲಿ ತಯಾರಿಸಿದ ಪಾದರಕ್ಷೆಗಳಿಗೆ ಶೆ. 12.5ರಷ್ಟು ತೆರಿಗೆ ಇದೆ. ಇದರೊಂದಿಗೆ ಮೌಲ್ಯಾಧಾರಿತ ದರಗಳು ಇರುತ್ತವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin