ಜಿಎಸ್‍ಟಿ ಮಸೂದೆಗೆ ಲೋಕಸಭೆಯಲ್ಲಿ ಅನುಮೋದನೆ, ಜುಲೈ 1 ರಿಂದ ಜಾರಿ

ಈ ಸುದ್ದಿಯನ್ನು ಶೇರ್ ಮಾಡಿ

GST-Tax

ನವದೆಹಲಿ, ಮಾ.30-ದೇಶದ ತೆರಿಗೆ ಸುಧಾರಣೆಯಲ್ಲಿ ಮಹತ್ವದ ಮೈಲಿಗಲ್ಲಾಗಿರುವ ಬಹು ನಿರೀಕ್ಷಿತ ಸರಕುಗಳು ಮತ್ತು ಸೇವಾ ತೆರಿಗೆಗಳ (ಜಿಎಸ್‍ಟಿ) ಪೂರಕ ಮಸೂದೆಗೆ ಲೋಕಸಭೆಯಲ್ಲಿ ಅನುಮೋದನೆ ಲಭಿಸಿದೆ. ಜುಲೈ 1 ರಿಂದ ಜಾರಿಗೆ ಬರಲಿರುವ ಜಿಎಸ್‍ಟಿಗೆ ಹಾದಿ ಸುಗಮವಾಗಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಯನ್ನು ಅಭಿನಂದಿಸಿದ್ದಾರೆ. ಜಿಎಸ್‍ಟಿ ಪೂರಕ ವಿಧೇಯಕಗಳಿಗೆ ಅನುಮೋದನೆ ಲಭಿಸಿರುವ ಈ ಸಂದರ್ಭದಲ್ಲಿ ದೇಶದ ಪ್ರತಿಯೊಬ್ಬರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ಹೊಸ ವರ್ಷ, ಹೊಸ ಕಾನೂನು, ಹೊಸ ಭಾರತ ಎಂದು ಮಸೂದೆಗೆ ಅಂಗೀಕಾರ ದೊರೆತ ನಂತರ ಟ್ವೀಟರ್‍ನಲ್ಲಿ ರಾಷ್ಟ್ರದ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಸಂಸತ್ತಿನಲ್ಲಿ ಜಿಎಸ್‍ಟಿ ಮಸೂದೆಗೆ ಸಮ್ಮತಿ ಲಭಿಸುವುದರೊಂದಿಗೆ ಸಂವಿಧಾನದ ಶಿಲ್ಪಿಗಳ ದೂರದೃಷ್ಟಿಗೆ ಅನುಗುಣವಾಗಿ ಏಕೀಕೃತ ಮಾರುಕಟ್ಟೆ ವ್ಯವಸ್ಥೆಯತ್ತ ಭಾರತ ದಾಪುಗಾಲು ಹಾಕುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಲೋಕಸಭೆ ಅನುಮೋದನೆ :

ದೇಶದ ಅತಿದೊಡ್ಡ ತೆರಿಗೆ ಸುಧಾರಣೆ ಜಾರಿಗಾಗಿ ಭಾರತಕ್ಕೆ ಇನ್ನೊಂದು ಹೆಜ್ಜೆ ಮಾತ್ರ ಬಾಕಿ ಇದೆ. ಸರಕುಗಳು ಮತ್ತು ಸೇವಾ ತೆರಿಗೆಯಲ್ಲಿ ಗರಿಷ್ಠ ಪಾರದರ್ಶಕತ್ವ ಮತ್ತು ತೆರಿಗೆ ವಂಚನೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಜಿಎಸ್‍ಟಿ ಮಸೂದೆ ಜುಲೈ 1 ರಿಂದ ಜÁರಿಗೆ ಬರುವುದು ನಿಶ್ಚಿತವಾಗಿದೆ.
ಯುಗಾದಿ ಹಬ್ಬದ ದಿನವಾದ ಲೋಕಸಭೆಯಲ್ಲಿ ಎಂಟು ಗಂಟೆಗಳ ಸುದೀರ್ಘ ಚರ್ಚೆ ಬಳಿಕ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಿದ್ದ ನಾಲ್ಕು ಪೂರಕ ಜಿಎಸ್‍ಟಿ ಮಸೂದೆಗಳಿಗೆ ಸದನ ಅಂಗೀಕಾರ ನೀಡಿತು. ಸಮಗ್ರ ಜಿಎಸ್‍ಟಿ ಮಸೂದೆ, ಪರಿಹಾರ ಜಿಎಸ್‍ಟಿ ಮಸೂದೆ, ರಾಜ್ಯ ಜಿಎಸ್‍ಟಿ ಮಸೂದೆ ಮತ್ತು ಕೇಂದ್ರಾಡಳಿತ ಪ್ರದೇಶದ ಜಿಎಸ್‍ಟಿ ಮಸೂದೆಗಳಿಗೆ ಅನುಮೋದನೆ ನೀಡುವ ಮೂಲಕ ಜುಲೈ 1 ರಿಂದ ಏಕರೂಪದ ಪರೋಕ್ಷ ಏಕ ತೆರಿಗೆಯ ಜಿಎಸ್‍ಟಿ ಜಾರಿಗೊಳ್ಳಲು ದಿನಗಣನೆ ಆರಂಭವಾಗಿದೆ.

ಸೇವಾ ತೆರಿಗೆಗಳು, ಅಬಕಾರಿ ಸುಂಕ, ಆಕ್ಟ್ರಾಯ್ ಮತ್ತು ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಇತ್ಯಾದಿಯಂಥ ಕೇಂದ್ರ ಮತ್ತು ರಾಜ್ಯಗಳ ವಿವಿಧ ಪರೋಕ್ಷ ತೆರಿಗೆಗಳು ಮತ್ತು ಕರಭಾರಗಳ ಬದಲಿಗೆ ಜಿಎಸ್‍ಟಿ ಅನುಷ್ಠಾನಕ್ಕೆ ಬರಲಿದೆ.   ಅಂತರ್-ರಾಜ್ಯ ಸರಕುಗಳು ಮತ್ತು ಸೇವೆಗಳ ಪೂರೈಕೆ ಮೇಲಿನ ಸುಂಕ ಮತ್ತು ತೆರಿಗೆಗಳು ಅಥವಾ ಇವೆರಡರ ಮೇಲೆ ಕೇಂದ್ರ ಸರ್ಕಾರ ವಿಧಿಸುವ ಕರಭಾರಗಳನ್ನು ಜಿಎಸ್‍ಟಿ ಸರಳಗೊಳಿಸಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin