ಜಿಎಸ್‍ಟಿ ವಿರೋಧಿಸಿ ಅ.9 ಮತ್ತು 10 ರಂದು ದೇಶಾದ್ಯಂತ ಲಾರಿ ಮುಷ್ಕರ

ಈ ಸುದ್ದಿಯನ್ನು ಶೇರ್ ಮಾಡಿ

lorry

ಬೆಂಗಳೂರು, ಅ.7-ಅವೈಜ್ಞಾನಿಕ ಸರಕು, ಸೇವಾ ತೆರಿಗೆ ಜಾರಿ ವಿರೋಧಿಸಿ ದೇಶಾದ್ಯಂತ ಎರಡು ದಿನಗಳ ಕಾಲ ಲಾರಿ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ. ಇದೇ ಅ.9 ಮತ್ತು 10 ರಂದು ದೇಶದೆಲ್ಲೆಡೆ ಲಾರಿಗಳ ಸೇವೆಯನ್ನು ಸ್ಥಗಿತಗೊಳಿಸಲು ಅಖಿಲ ಭಾರತ ಮೋಟಾರ್ ಟ್ರಾನ್ಸ್ಪೋರ್ಟ್ ಕಾಂಗ್ರೆಸ್ ಕರೆ ಕೊಟ್ಟಿರುವ ಮುಷ್ಕರಕ್ಕೆ ದಕ್ಷಿಣ ಭಾರತ ಮೋಟಾರ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ ಬೆಂಬಲ ನೀಡಿದೆ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಜಿ.ಎನ್.ಷಣ್ಮುಗಪ್ಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮುಷ್ಕರಕ್ಕೆ ಬೆಂಬಲ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ. ಸರಕು, ಸೇವಾ ತೆರಿಗೆಯು ಅವೈಜ್ಞಾನಿಕವಾಗಿದ್ದು, ತೆರಿಯ ಭಾರದಿಂದ ಸಾಗಾಣಿಕೆದಾರರು ಬಸವಳಿದ್ದಾರೆ.  ಸದರಿ ತೆರಿಗೆಯಲ್ಲಿ ಎರಡು ಬಾರಿ (ಮಾಲೀಕರಿಂದ ಹಾಗೂ ಬಳಕೆದಾರರಿಂದ) ತೆರಿಗೆ ಸಂಗ್ರಹಿಸಲಾಗುತ್ತಿದ್ದು, ತಕ್ಷಣ ನೋಂದಣಿಗೆ ಒತ್ತಾಯಿಸಲಾಗುತ್ತಿದೆ. ನಿರ್ದಿಷ್ಟ ರೂಪುರೇಷೆ ಇಲ್ಲದೆ ಅನಗತ್ಯ ಹೊಣೆಯೂ ಆಗಿದ್ದು, ಸಾಗಾಣಿಕೆದಾರರು ಗೊಂದಲದಲ್ಲಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಬಳಿ ಸೂಕ್ತ ಮಾಹಿತಿ ಇಲ್ಲ ಎಂದು ಅವರು ಹೇಳಿದ್ದಾರೆ.

ಡೀಸಲ್ ದರ ಕಡಿಮೆ ಮಾಡುವ ಮೂಲಕ ರಾಷ್ಟ್ರಾದ್ಯಂತ ಏಕರೂಪ ದರ ಜಾರಿ ಮಾಡಬೇಕು, ಟೋಲ್‍ದರ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ದೇಶಾದ್ಯಂತ ಈಗಾಗಲೇ 1627 ವಾಣಿಜ್ಯ ಚೆಕ್ ಪೋಸ್ಟ್  ಗಳನ್ನು ಹಿಂಪಡೆಯಲಾಗಿದೆ. ಅದೇ ಮಾದರಿಯಲ್ಲಿ 347 ಹೆದ್ದಾರಿ ಟೋಲ್‍ಗಳನ್ನು ರದ್ದುಗೊಳಿಸುವುದಲ್ಲದೆ, ನಮ್ಮ ಹಲವು ವರ್ಷಗಳ ಬೇಡಿಕೆಯಾದ ವಾರ್ಷಿಕ ಒಂದು ಟೋಲ್ ನಿಯಮ ಜಾರಿಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೊಳಿಸಿದ ಮೋಟಾರ್ ಕಾಯ್ದೆ ನಿಯಮ ಜಿಎಸ್‍ಆರ್ 1183ರ ಪ್ರಕಾರ ಕಚೇರಿ ಶುಲ್ಕಗಳು ಸೇರಿದಂತೆ ವಾಹನಗಳಿಗೆ ಅರ್ಹತಾ ಪತ್ರ ಪಡೆಯಲು ಹೆಚ್ಚಿನ ದಂಡ ವಿಧಿಸಲಾಗುತ್ತದೆ. ಅದನ್ನು ಕಡಿಮೆ ಮಾಡುವುದಾಗಿ ಕಳೆದ ಮಾರ್ಚ್‍ನಲ್ಲಿ ನಡೆದ ಮುಷ್ಕರದ ಸಂದರ್ಭದಲ್ಲಿ ರಾಜ್ಯಸರ್ಕಾರ ಲಿಖಿತ ಭರವಸೆ ನೀಡಿದ್ದರೂ ಈವರೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು. ಹಲವು ಬಾರಿ ಹೆದ್ದಾರಿಗಳಲ್ಲಿ ಸಾರಿಗೆ ಅಧಿಕಾರಿಗಳ ಕಿರುಕುಳ ತಡೆಗಟ್ಟಬೇಕೆಂದು ಒತ್ತಾಯಿಸಿದ್ದರೂಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಶಾಂತಿನಗರ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಷಣ್ಮುಗಪ್ಪ ಹೇಳಿದರು.

Facebook Comments

Sri Raghav

Admin