ಜಿಎಸ್ ಟಿ ಎಫೆಕ್ಟ್ : ಮೆಡಿಕಲ್ ಸ್ಟೋರ್‍ಗಳಲ್ಲಿ ಔಷಧಿಗಳು ನೋ ಸ್ಟಾಕ್

ಈ ಸುದ್ದಿಯನ್ನು ಶೇರ್ ಮಾಡಿ

medical

ಬೆಂಗಳೂರು,ಜು.10-ದೇಶಾದ್ಯಂತ ಕಳೆದ ಜುಲೈ 1ರಿಂದ ಸರಕು ಸೇವಾ ತೆರಿಗೆ(ಜಿಎಸ್‍ಟಿ) ಜಾರಿ ಬಂದ ನಂತರ ದರದಲ್ಲಿ ವ್ಯತ್ಯಯ ಉಂಟಾಗಿರುವ ಪರಿಣಾಮ ಅನೇಕ ಔಷಧಿ ಅಂಗಡಿಗಳಲ್ಲಿ( ಮೆಡಿಕಲ್‍ಶಾಪ್) ಔಷಧಿ ಸಿಗದೆ ರೋಗಿಗಳು ಪರದಾಡುವಂತಾಗಿದೆ.  ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ವೈದ್ಯರು ಶಿಫಾರಸು ಮಾಡುವ ಔಷಧಿಗಳು ಲಭ್ಯವಾಗುತ್ತಿಲ್ಲ. ಎಲ್ಲೇ ಕೇಳಿದರೂ ನೋ ಸ್ಟಾಕ್ ಎಂಬ ಮಾತುಗಳು ಕೇಳಿಬರುತ್ತಿವೆ.  ಕಳೆದ ಒಂದು ವಾರದಿಂದಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದ್ದು , ಔಷಧಗಳು ಸಿಗದ ಪರಿಣಾಮ ರೋಗಿಗಳು ಹಿಡಿಶಾಪ ಹಾಕುತ್ತಿದ್ದಾರೆ.

ಜುಲೈ 1ರಂದು ಕೇಂದ್ರ ಸರ್ಕಾರ ದೇಶಾದ್ಯಂತ ಒಂದೇ ರಾಷ್ಟ್ರ , ಒಂದೇ ತೆರಿಗೆ ಎಂಬ ನೀತಿಯನ್ನು ಜಾರಿ ಮಾಡಿತು. ತದನಂತರ ಔಷಧಿಗಳು ಸೇರಿದಂತೆ ಬಹುತೇಕ ಎಲ್ಲ ವಸ್ತಗಳಲ್ಲೂ ದರದಲ್ಲಿ ಏರುಪೇರು ಉಂಟಾಯಿತು.  ಎಲೆಕ್ಟ್ರಾನಿಕ್ ವಸ್ತುಗಳು, ತಿಂಡಿತಿನಿಸು, ಬಟ್ಟೆ, ಚಪ್ಪಲಿ ಸೇರಿದಂತೆ ಮತ್ತಿತರ ವಸ್ತುಗಳ ಬೆಲೆ ಏರಿಕೆಯಾದರೆ ರಸಗೊಬ್ಬರ ಸೇರಿದಂತೆ ಕೆಲವು ಅಗತ್ಯ ವಸ್ತುಗಳ ಬೆಲೆ ಇಳಿಮುಖವಾಯಿತು.

ಯಾವ ವಸ್ತುಗಳ ಬೆಲೆ ಏರಿಕೆಯಾಗಿದೆ, ಮತ್ತ್ಯಾವ ವಸ್ತುಗಳ ಬೆಲೆ ಇಳಿಕೆಯಾಗಿದೆ ಎಂಬುದರ ಬಗ್ಗೆ ಅಂಗಡಿ ಮಾಲೀಕರಿಗೂ ಗೊಂದಲ ಉಂಟಾಗಿದೆ. ಹಳೇ ದರದಲ್ಲೇ ಮಾರಾಟ ಮಾಡಬೇಕೊ ಇಲ್ಲವೆ ಹೊಸ ದರದಲ್ಲಿ ಗ್ರಾಹಕರಿಗೆ ನೀಡಬೇಕೊ ಎಂಬ ಗೊಂದಲದಲ್ಲಿದ್ದಾರೆ.  ಗ್ರಾಹಕರಿಗೆ ನೀಡುವ ಯಾವುದೇ ವಸ್ತುಗಳಿಗೆ ಕಡ್ಡಾಯವಾಗಿ ರಸೀದಿ ನೀಡಬೇಕೆಂದು ಕೇಂದ್ರ ಸರ್ಕಾರ ಅಂಗಡಿ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ. ಹಳೇದರದಲ್ಲಿ ನೀಡಿದರೆ ನಮಗೆ ನಷ್ಟ ಉಂಟಾಗುತ್ತದೆ ಎಂಬುದು ಮಾಲೀಕರ ವಾದ.  ಇನ್ನು ಹೊಸ ದರದಲ್ಲಿ ನೀಡಿದರೆ ಎಂಆರ್‍ಪಿ ದರದಲ್ಲೇ ನೀಡಬೇಕೆಂದ ಕೆಲವರು ಪಟ್ಟು ಹಿಡಿಯುತ್ತಾರೆ. ಹೀಗಾಗಿ ಯಾವ ದರದಲ್ಲಿ ನೀಡಬೇಕೆಂಬುದು ನಮಗೆ ತೋಚುತ್ತಿಲ್ಲ ಎಂದು ಅನೇಕರು ಗೊಂದಲಕ್ಕೆ ಸಿಲುಕಿದ್ದಾರೆ.

ಔಷಧಿಗಳು ಅಂಗಡಿಗಳಲ್ಲಿ ಲಭ್ಯವಿದ್ದರೂ ದರದ ವ್ಯತ್ಯಾಸದ ಪರಿಣಾಮ ಕೆಲವರು ನೀಡಲು ಮೀನಾಮೇಷ ಎಣಿಸುತ್ತಿದ್ದಾರೆ. ಹೊಸ ದರ ಬಂದರೆ ನಮಗೆ ಒಂದಿಷ್ಟು ಲಾಭವಾಗಬಹುದೆಂಬ ಲೆಕ್ಕಾಚಾರದಲ್ಲಿದ್ದಾರೆ.  ಈಗಾಗಲೇ ಕೇಂದ್ರ ಸರ್ಕಾರ ಜಿಎಸ್‍ಟಿ ದರಗಳ ಬಗ್ಗೆ ಹೊಸ ಆ್ಯಪ್ ಬಿಡುಗಡೆ ಮಾಡಿದ್ದರೂ ಔಷಧಿ ಅಂಗಡಿಯವರು ಮಾತ್ರ ನಾವು ಕಂಪನಿಗಳಿಗೆ ಔಷಧಿ ನೀಡುವಂತೆ ಹಲವು ದಿನಗಳಿಂದ ಮನವಿ ಮಾಡಿಕೊಳ್ಳುತ್ತಿದ್ದೇವೆ ಆದರೂ ದರದ ಗೊಂದಲದಿಂದ ವಿತರಣೆ ಮಾಡಿಲ್ಲ. ಹೀಗಾಗಿ ನಮ್ಮಲ್ಲಿ ಸ್ಟಾಕ್ ಇಲ್ಲ ಎಂದು ಸಿದ್ದ ಉತ್ತರ ಹೇಳುತ್ತಾರೆ.
ಕನಿಷ್ಠವೆಂದರೆ ಇನ್ನು ಒಂದುವಾರ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇದ್ದು , ರೋಗಿಗಳು ಒಂದಿಷ್ಟು ಅನಾನುಕೂಲವಾದರೂ ಅನುಸರಿಸಿಕೊಂಡು ಹೋಗುವಂತೆ ಮಾಲೀಕರು ಮನವಿ ಮಾಡಿಕೊಳ್ಳುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin