ಜಿಲ್ಲಾಧಿಕಾರಿ ದಿಢೀರ ದಾಳಿಗೆ ಬೆಚ್ಚಿಬಿದ್ದ ಕೋಲಾರ ಮರಳು ಮಾಫಿಯಾ

ಈ ಸುದ್ದಿಯನ್ನು ಶೇರ್ ಮಾಡಿ

DC-011

ಕೋಲಾರ, ಫೆ.24- ಅಕ್ರಮ ಮರಳು ಅಡ್ಡೆ ಮೇಲೆ ದಿಢೀರ್ ದಾಳಿ ನಡೆಸಿರುವ ಜಿಲ್ಲಾಧಿಕಾರಿ ಸತ್ಯವತಿ ಅವರು ದಂಧೆಕೋರರು ಮತ್ತು ತಾಲೂಕು ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ.   ಬಂಗಾರಪೇಟೆ ತಾಲೂಕಿನ ಟಿಸಿ ಹಳ್ಳಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಅಡ್ಡೆ ಮೇಲೆ ದಾಳಿ ನಡೆಸಿದ ಸತ್ಯವತಿ ಅವರು 50 ಲಾರಿ, ನೂರಾರು ಲೋಡ್ ಮರಳನ್ನು ವಶಪಡಿಸಿಕೊಂಡಿದ್ದಾರೆ.

ಮಾತ್ರವಲ್ಲ, ಅಕ್ರಮ ಮರಳು ದಂಧೆಗೆ ಅವಕಾಶ ಮಾಡಿಕೊಟ್ಟ ತಾಲೂಕು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಖುದ್ದು ರೆವಿನ್ಯೂ, ಪಿಡಬ್ಲ್ಯೂಡಿ ಮತ್ತುಗಣಿ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಛೀಮಾರಿ ಹಾಕಿದ್ದಾರೆ. ಡಿಸಿ ಅವರು ಕರೆ ಮಾಡಿದ ಅಧಿಕಾರಿ ಬೆಂಗಳೂರಿನಲ್ಲಿ ಇದ್ದೇನೆ ಎಂದು ಸಬೂಬು ಹೇಳಲು ಮುಂದಾದಾಗ ಕೆಂಡಾಮಂಡಲರಾದ ಸತ್ಯವತಿ ಅವರು ಏನ್ರೀ ಕಥೆ ಹೇಳ್ತಿದ್ದೀರಾ… ಮಾಡೋ ಕೆಲಸ ಬಿಟ್ಟು ಬೆಂಗಳೂರಿಗೆ ಹೋಗಿ ಮೋಜು-ಮಸ್ತಿ ಮಾಡುತ್ತಿದ್ದೀರಾ… ನಾನೇ ಇಲ್ಲಿಗೆ ಬಂದು ಅಕ್ರಮ ಮರಳು ದಂಧೆಯನ್ನು ಪತ್ತೆ ಹಚ್ಚಿದ್ದೇನೆ ಅಂದ್ರೆ ನೀವು ಇಲ್ಲಿಯವರೆಗೂ ಏನು ಮಾಡುತ್ತಿದ್ದೀರಾ ಎಂದು ತಪರಾಕಿ ಹಾಕಿದರು.

ರೆವಿನ್ಯೂ, ಲೋಕೋಪಯೋಗಿ ಹಾಗೂ ಗಣಿ ಇಲಾಖೆ ಅಧಿಕಾರಿಗಳು ಈ ಕೂಡಲೇ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯನ್ನು ಮಟ್ಟ ಹಾಕಬೇಕು. ಇಲ್ಲದಿದ್ದಲ್ಲಿ ಯಾವುದೇ ಮುಲಾಜಿಲ್ಲದೆ ಅಮಾನತುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.  ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿರುವವರನ್ನು ಪತ್ತೆ ಹಚ್ಚಬೇಕು. ಶಪಡಿಸಿಕೊಂಡಿರುವ ಲಾರಿಗಳನ್ನು ಯಾವುದೇ ಕಾರಣಕ್ಕೂ ಬಿಡಬಾರದು. ಸ್ಥಳದಲ್ಲಿ ಸಿಕ್ಕಿರುವ ನೂರಾರು ಲೋಡ್ ಮರಳನ್ನು ಸೀಜ್ ಮಾಡಿ ಸಂಜೆ ವೇಳೆಗೆ ನನಗೆ ವರದಿ ನೀಡಬೇಕು ಎಂದು ಸತ್ಯವತಿ ತಾಕೀತು ಮಾಡಿದ್ದಾರೆ.

ಜಿಲ್ಲೆಯಲ್ಲಿ ಪ್ರಭಾವಿ ವ್ಯಕ್ತಿಗಳ ನೆರಳಿನಲ್ಲೇ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವ ಧೈರ್ಯ ಯಾರಿಗೂ ಇರಲಿಲ್ಲ. ಆದರೆ, ದಕ್ಷ ಅಧಿಕಾರಿ ಎಂದು ಗುರುತಿಸಿಕೊಂಡಿರುವ ಸತ್ಯವತಿ ಅವರ ಈ ದಾಳಿ ಅಕ್ರಮ ಮರಳು ಸಾಗಾಣಿಕೆದಾರರು ಹಾಗೂ ದಂಧೆಗೆ ಬೆಂಬಲ ನೀಡುತ್ತಿದ್ದವರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin