ಜೀವಕ್ಕೆ ಬೆಲೆ ಕಟ್ಟುವ ಕೆಲಸ ಮಾಡಿದರೆ ಸಾಲದು

ಈ ಸುದ್ದಿಯನ್ನು ಶೇರ್ ಮಾಡಿ

Deviprasad

ಡಾ.ದೇವಿಪ್ರಸಾದ್ ಶೆಟ್ಟಿ , (ನಾರಾಯಣ ಹೃದಯಾಲಯ)
ನಾನೊಬ್ಬ ಹಾರ್ಟ್ ಸರ್ಜನ್. ಇದು ನನ್ನ ವೃತ್ತಿ. ಇದು ತುಂಬಾ ಕುತೂಹಲಕರವಾದ ವೃತ್ತಿ. ಮನುಷ್ಯನ ಜೀವಕ್ಕೆ ಬೆಲೆ ಕಟ್ಟುವಂತಹ ಕೆಲಸ. ಇದೆಂಥ ಕೆಲಸ ಅಂತ ನಿಮಗೆ ಅಚ್ಚರಿಯಾಗಿರಬಹುದು. ಪ್ರತಿದಿನ ನನ್ನ ಕ್ಲಿನಿಕ್‍ನಲ್ಲಿ 50-60 ರೋಗಿಗಳನ್ನು ನೋಡುತ್ತೇವೆ. ಈ ಪೈಕಿ ಮಕ್ಕಳೇ ಜಾಸ್ತಿ. ಅವು ತಮ್ಮ ತಾಯಿಯ ತೊಡೆಯ ಮೇಲೆ ಕುಳಿತಿರುತ್ತವೆ. ಪರೀಕ್ಷೆ ಮಾಡಿದ ನಾನು ಮಗುವಿನ ಹೃದಯದಲ್ಲಿ ರಂಧ್ರವಿದೆ, ಅದಕ್ಕೆ ಶಸ್ತ್ರ ಚಿಕಿತ್ಸೆ ಆಗಬೇಕು ಅಂತ ತಾಯಿಗೆ ಹೇಳುತ್ತೇನೆ. ಆಗ ಅವಳು ಒಂದು ಪ್ರಶ್ನೆ ಕೇಳುತ್ತಾಳೆ. ಎಂಥ ಪ್ರಶ್ನೆ ಅಂತ ಗೊತ್ತಾ? ಆಪರೇಷನ್‍ಗೆ ಎಷ್ಟು ಖರ್ಚಾಗುತ್ತದೆ ಅಂತ ಕೇಳುತ್ತಾಳೆ. ಇದಕ್ಕೆ 80,000 ರೂ. ಬೇಕಾಗಬಹುದು ಅಂತ ನಾನು ಹೇಳುತ್ತೇನೆ. ಆಕೆಯ ಬಳಿ ಅಷ್ಟು ಹಣ ಇಲ್ಲ, ಇದು ನಾವು ಮಗುವಿನ ಜೀವಕ್ಕೆ ಕಟ್ಟುವ ಬೆಲೆ. ಆ ಮಗುವಿನ ಮನೆಯವರು 80,000 ರೂ. ತಂದರೆ ಅದರ ಜೀವ ಉಳಿಸಹಬಹುದು ಇಲ್ಲದಿದ್ದರೆ?

ವೈದ್ಯರು ಪ್ರತಿದಿನ ಬೆಳಗಿನಿಂದ ಸಂಜೆವರೆಗೆ ಇದನ್ನೇ ಮಾಡುವುದು. ಮನುಷ್ಯನ ಜೀವಕ್ಕೆ ಬೆಲೆ ಕಟ್ಟುವುದು. ಇಂದು ಸ್ಥಳೀಯವಾಗಿ ಭಾರತೀಯರು ಹೃದಯಾಘಾತಕ್ಕೆ ಮೂರು ಪಟ್ಟು ಹೆಚ್ಚು ಸಂಖ್ಯೆಯಲ್ಲಿ ತುತ್ತಾಗುತ್ತಾರೆ. ಚಿಕ್ಕ ವಯಸ್ಸಿನವರಿಗೇ ಹೃದಯಾಘಾತವಾಗುತ್ತಿದೆ. ಮೊದಲು ತರುಣನೊಬ್ಬ ಹೃದಯಾWತಕ್ಕೊಳಗಾದ ತನ್ನ ತಂದೆಯನ್ನು ಚಿಕಿತ್ಸೆಗೆ ಕರೆತರುತ್ತಿದ್ದ. ಈಗ ವಯಸ್ಸಾದ ತಂದೆಯು ತನ್ನ ಮಗನನ್ನು ಕರೆತರುತ್ತಾನೆ.   ಭಾರತದಲ್ಲಿ ವರ್ಷಕ್ಕೆ ಇಪ್ಪತ್ತು ಲಕ್ಷ ಹಾರ್ಟ್ ಆಪರೇಷನ್ ಮಾಡುವ ಅಗತ್ಯವಿದೆ. ನಾವು 1,20,000 ಆಪರೇಷನ್‍ಗಳನ್ನು ಮಾತ್ರ ಮಾಡುತ್ತಿದ್ದೇವೆ. ಉಳಿದ 19 ಲಕ್ಷ ಜನರ ಗತಿ? ಚಿಕಿತ್ಸೆಯಿಲ್ಲದೆ ಕಾಲಕ್ರಮೇಣ ಅವರು ವಿಧಿವಶರಾಗುತ್ತಾರೆ. ಇದರಿಂದ ಅತಿಹೆಚ್ಚು ಸಂಖ್ಯೆಯ ಹೆಣ್ಣು ಮಕ್ಕಳು ವಿಧವೆಯಾಗುತ್ತಾರೆ. ಎಷ್ಟು ದಿನ ಇದನ್ನು ಸಹಿಸಿಕೊಂಡಿರುವುದು? ಎಷ್ಟು ದಿನ ಇದು ಹೀಗೆ ಮುಂದುವರಿಯಲು ಸಾಧ್ಯ? ಈ ದುಃಸ್ಥಿತಿಗೆ ಕಾರಣವೇನು? ನಮ್ಮ ರಾಷ್ಟ್ರೀಯ ಆದಾಯದ ಶೇ.1.1ರಷ್ಟು ಹಣವನ್ನು ಸರ್ಕಾರವು ಆರೋಗ್ಯ ವಲಯದ ಮೇಲೆ ಖರ್ಚು ಮಾಡುತ್ತಿದೆ.

ಹತ್ತು ವರ್ಷಗಳ ಹಿಂದೆ ನಾವು ಒಂದು ಯೋಜನೆಯನ್ನು ಕರ್ನಾಟಕ ಸರ್ಕಾರದ ಮುಂದೆ ಪ್ರಸ್ತುತಪಡಿಸಿದೆವು. ಇದನ್ನು ಜಾರಿಗೊಳಿಸುವಂತೆ ಸರ್ಕಾರದ ಮನವೊಲಿಸಿದೆವು. ಈ ಯೋಜನೆಯ ಹೆಸರು ಯಶಸ್ವಿನಿ ಆರೋಗ್ಯ ವಿಮಾ ಯೋಜನೆ. ಇದರ ಅನ್ವಯ ರಾಜ್ಯದ ಒಂದು ಕೋಟಿ ಎಪ್ಪತ್ತು ಲಕ್ಷ ರೈತರು ತಿಂಗಳಿಗೆ ಐದು ರೂ. ವಂತಿಗೆ ಕೊಡಬೇಕು. ಇದರ ಬಾಧ್ಯತೆ ಹೊರಲು ಸರ್ಕಾರ ಸಮ್ಮತಿಸಿತು. ಹತ್ತು ವರ್ಷಗಳ ಅವಧಿಯಲ್ಲಿ ನಾಲ್ಕೂವರೆ ಲಕ್ಷ ರೈತರು ವಿಧವಿಧವಾದ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಅದರತ್ತ ಸಾವಿರ ರೈತರು ಹಾರ್ಟ್ ಆಪರೇಷನ್ ಮಾಡಿಸಿಕೊಂಡಿದ್ದಾರೆ. ಇದು ತಿಂಗಳಿಗೆ ಐದು ರೂ. ವಂತಿಗೆ ನೀಡಿದ್ದರ ಫಲ.

ಈಗ ನಾವು ಸರ್ಕಾರದ ಮುಂದೆ ಇನ್ನೊಂದು ಯೋಜನೆ ಇಟ್ಟಿದ್ದೇವೆ. ನಮ್ಮ ರಾಜ್ಯದಲ್ಲಿ 85 ಲಕ್ಷಕ್ಕೂ ಹೆಚ್ಚು ಜನ ಮೊಬೈಲ್ ಬಳಸುತ್ತಿದ್ದು, ಅವರು ಮೊಬೈಲ್‍ನಲ್ಲಿ ಮಾತನಾಡುವುದಕ್ಕೆಂದೇ ತಿಂಗಳಿಗೆ ಸುಮಾರು 150 ರೂ. ಖರ್ಚು ಮಾಡುತ್ತಾರೆ. ಮೊಬೈಲ್ ಬಳಕೆದಾರರಿಂದ ತಿಂಗಳಿಗೆ 20 ರೂ. ಕಂತು ಪಡೆದು ಅದನ್ನು ಆರೋಗ್ಯ ವಿಮೆಯಾಗಿ ಪರಿವರ್ತಿಸುವುದು. ಇದರಿಂದ 85 ಲಕ್ಷ ಜನರಿಗೆ ಆಸ್ಪತ್ರೆಗಳ ಸಕಲ ಸೌಲಭ್ಯಗಳೂ ದೊರೆಯುತ್ತವೆ. ಜನರು ಒಂಟಿಯಾಗಿದ್ದರೆ ದುರ್ಬಲರ ಹಾಗೆ ಕಾಣಬಹುದು. ಒಟ್ಟಿಗೆ ಸೇರಿದಂತೆ ಅವರು ಅತ್ಯಂತ ಶಿಕ್ಷಕರಾಗುತ್ತಾರೆ. ಇದರಿಂದ ಆರೋಗ್ಯ ರಕ್ಷಣೆ ವಿಷಯದಲ್ಲಿ ಮಹತ್ವವಾದ ಬದಲಾವಣೆ ಆಗುತ್ತದೆ.   ಹನ್ನೆರಡು ವರ್ಷಗಳ ಹಿಂದೆ ನಾವು ಬೆಂಗಳೂರಿನಲ್ಲಿ ಹೆಲ್ತ್ ಸಿಟಿ ಪರಿಕಲ್ಪನೆ ಪ್ರಾರಂಭಿಸಿದೆವು. ಒಂದೇ ಆವರಣದಲ್ಲಿ ಐದು ಸಾವಿರ ಹಾಸಿಗೆಗಳ ಆಸ್ಪತ್ರೆ ಹಾಗೂ ದಿನಕ್ಕೆ 10ರಿಂದ ಹನ್ನೆರಡು ಸಾವಿರ ಹೊರರೋಗಿಗಳ ತಪಾಸಣೆ ಮಾಡುವ ಸೌಲಭ್ಯ ಕಲ್ಪಿಸುವುದೇ ಈ ಪರಿಕಲ್ಪನೆ. ನಮ್ಮ ಹೆಲ್ತ್ ಸಿಟಿಯ ಆವರಣದ ಮುಂಭಾಗದಲ್ಲಿ ಇರುವ ಕಟ್ಟಡ ಹೃದ್ರೋಗ ಚಿಕಿತ್ಸಾ ಆಸ್ಪತ್ರೆ. ಇಲ್ಲಿ ದಿನವೊಂದಕ್ಕೆ 60 ಹಾರ್ಟ್ ಆಪರೇಷನ್ ಮಾಡಲಾಗುತ್ತಿದೆ. ಐದರಿಂದ ಹತ್ತು ಲಕ್ಷ ಜನಸಂಖ್ಯೆಯಿಂದ ಕೂಡಿದ ಸುಮಾರು ನೂರು ಪಟ್ಟಣಗಳು ಭಾರತದಲ್ಲಿವೆ. ಈ ಎಲ್ಲ ಪಟ್ಟಣಗಳಲ್ಲೂ ಇಂತಹ ಹೆಲ್ತ್ ಸಿಟಿ ಮಾಡಲು ಸಾಧ್ಯವಿಲ್ಲ. ಅಲ್ಲಿ ಚಿಕ್ಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಡಬಹುದು. ಆರು ತಿಂಗಳೊಳಗೆ 72 ಆಸ್ಪತ್ರೆ ಕಟ್ಟುವುದು ನಮ್ಮ ಗುರಿ. ಮೈಸೂರಿನಲ್ಲಿ ಒಂದು ಹೃದ್ರೋಗ ಚಿಕಿತ್ಸಾ ಆಸ್ಪತ್ರೆ ಬಂದಿದೆ.

ರೋಗಿಗೆ ಹೃದಯದ ಆಪರೇಷನ್ ಆದ ಮೇಲೆ ನರ್ಸ್‍ಗಳೇ ಆತನ ಆರೈಕೆ ಮಾಡಬೇಕು ಅನ್ನುವುದು ಒಂದು ರೂಢಿ. ಬಂಧುಗಳನ್ನು ಬಿಡುವುದಿಲ್ಲ, ನಾವು ಈಗ ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ. ಹೃದಯದ ಆಪರೇಷನ್ ಮಾಡಿಸಿಕೊಂಡ ರೋಗಿಯನ್ನು ಬಿಡುಗಡೆ ಮಾಡುವಾಗ ನಾವು ಅವನ ಹೆಂಡತಿಯನ್ನು ಕರೆದು ಔಷಧದಿಂದ ಕೂಡಿದ ಕವರನ್ನು ಆಕೆಯ ಕೈಗಿಟ್ಟು ಕಳಿಸುತ್ತೇನೆ. ಪಾಪ… ಆಕೆಗೆ ಏನು ಮಾಡಬೇಕು ಅಂತ ತಿಳಿದಿರುವುದಿಲ್ಲ. ರೋಗಿಯು ಆಸ್ಪತ್ರೆಯಲ್ಲಿದ್ದಾಗಲೇ ಸಂಬಂಧಿಕರಿಗೆ ಅವನನ್ನು ನೋಡಿಕೊಳ್ಳುವ ಅಭ್ಯಾಸ ಮಾಡಿಸಿದರೆ ಗೊಂದಲ ಇರುವುದಿಲ್ಲ.   21ನೇ ಶತಮಾನವು ಆರೋಗ್ಯ ಕ್ಷೇತ್ರಕ್ಕೆ ಮೀಸಲು ಎಂದು ನನ್ನ ಅನಿಸಿಕೆ. ಏಕೆಂದರೆ ಇದು ತುಂಬಾ ಮುಖ್ಯವಾಗುತ್ತಿದೆ. ಸರ್ಕಾರಿ ನೆರವು ಪಡೆಯುವ ಸಿಟಿ ಕಂಪನಿಗಳು ವಾರ್ಷಿಕ ಹದಿನೈದು ಕೋಟಿ ವಹಿವಾಟು ನಡೆಸಿದರೆ ಅದು ಏಳರಿಂದ ಹತ್ತು ಜನರಿಗೆ ಮಾತ್ರ ಉದ್ಯೋಗವಕಾಶ ಕಲ್ಪಿಸಬಹುದು.

ಆದರೆ, ಅದೇ ಮೊತ್ತದ ವಹಿವಾಟು ಮಾಡುವ ಆರೋಗ್ಯ ರಕ್ಷಣಾ ಸಂಸ್ಥೆಯು 250 ಜನರಿಗೆ ಉದ್ಯೋಗ ನೀಡುತ್ತದೆ. ಈ 250 ಜನರ ಪೈಕಿ ಉನ್ನತ ತಾಂತ್ರಿಕ ಕೌಶಲ್ಯ ಪಡೆದಿರುವವರು ಬೆರಳಣಿಕೆಯಷ್ಟು ಜನ ಮಾತ್ರ. ಉಳಿದವರು ತಾಂತ್ರಿಕ ಕೌಶಲ್ಯಹೀನರು. ಸಮಾಜವನ್ನು ಸಬಲೀಕರಣ ಗೊಳಿಸಬೇಕಾದರೆ ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ನೀಡಬೇಕು.
ನಮ್ಮಲ್ಲಿರುವ ಸಿಬ್ಬಂದಿಯ ಪೈಕಿ ಮಹಿಳೆಯರೇ ಹೆಚ್ಚು. ಮಹಿಳೆಯರಿಗೇಕೆ ಉದ್ಯೋಗ? ಆಸ್ಪತ್ರೆಯ ನೆಲ ಗುಡಿಸುವ ಕೆಲಸಕ್ಕೆ ಗಂಡನೊಬ್ಬನನ್ನು ನೇಮಿಸಿಕೊಂಡು ಅವನಿಗೆ 6000 ರೂ. ಸಂಬಳ ನಿಗದಿ ಮಾಡುತ್ತೇವೆ ಅನ್ನಿ. ಅವನು ಅದರಲ್ಲಿ 3000 ರೂ.ಗಳನ್ನು ತನಗೋಸ್ಕರ ಬಳಸಿಕೊಂಡು ಉಳಿದ 3000 ರೂ.ಗಳನ್ನು ಕುಟುಂಬ ನಿರ್ವಹಣೆಗೆ ಖರ್ಚು ಮಾಡುತ್ತಾನೆ. ಹೆಂಗಸನ್ನು ನೇಮಿಸಿಕೊಂಡರೆ ಆಕೆ ಇಡೀ 6000 ರೂ.ಗಳನ್ನು ಕುಟುಂಬಕ್ಕೆ ಖರ್ಚು ಮಾಡುತ್ತಾಳೆ.

ಆರ್ಥಿಕವಾಗಿ ಹಿಂದುಳಿದ ಹೆಣ್ಣು ಮಕ್ಕಳಿಗೆ ಉದ್ಯೋಗ ನೀಡಿದರೆ ಮಹಿಳಾ ಸಬಲೀಕರಣ ಮಾಡಿದಂತಾಗುತ್ತದೆ. ಸಬಲೀಕರಣಗೊಂಡ ಹೆಂಗಸರು ತಮ್ಮ ಮಕ್ಕಳನ್ನು ಶಿಸ್ತಿನಿಂದ ಬೆಳೆಸುತ್ತಾರೆ. ಹೀಗೆ ಬೆಳೆದ ಮಕ್ಕಳು ರಾಷ್ಟ್ರದ ಶಕ್ತಿಯಾಗುತ್ತಾರೆ. ಹೆಣ್ಣು ಮಕ್ಕಳಿಗೆ ಉದ್ಯೋಗ ನೀಡುವುದರ ಹಿಂದೆ ಅಡಗಿರುವ ಶಕ್ತಿ ಇದು. ಆಸ್ಪತ್ರೆಗಳು ರೋಗಿಗಳಿಗೆ ಕ್ಷೇಮಕರವನ್ನಾಗಿ ಮಾಡಬೇಕು. ಅಮೆರಿಕದ ಆಸ್ಪತ್ರೆಗಳು ಭೂಮಿಯ ಮೇಲಿನ ಇತರ ಆಸ್ಪತ್ರೆಗಳಿಗೆ ಹೋಲಿಸಿದರೆ ರೋಗಿಗಳ ಸಾಲಿಗೆ ಅತ್ಯಂತ ಕ್ಷೇಮಕರ ಎಂಬ ಕಾಲವಿತ್ತು. ಈಗ ಅಮೆರಿಕದ ಆಸ್ಪತ್ರೆಗಳು ಸ್ಕೈ ಡೈವ್ ಮಾಡುವುದಕ್ಕಿಂತ ಹತ್ತು ಪಟ್ಟು ಅಪಾಯಕಾರಿ. ಆಸ್ಪತ್ರೆಯನ್ನು ಕ್ಷೇಮಕರಗೊಳಿಸಬೇಕಾದರೆ ನಾವು ಮಾಹಿತಿ ತಂತ್ರಜ್ಞಾನ ವಲಯದ ನೆರವು ಪಡೆಯಬೇಕು. ಬಡವರ ಕೈಗೆಟುಕದಂತಹ ಪರಿಹಾರವು ಪರಿಹಾರವೇ ಅಲ್ಲ.  ನಾವೀಗ ತಂತ್ರಜ್ಞಾನದ ಮೇಲೆ ಹೆಚ್ಚು ಅವಲಂಬಿತರಾಗಿದ್ದೇವೆ. ರಾಷ್ಟ್ರವೊಂದರ ಸಂಸತ್ತಿಗೂ ಹೆಲ್ತ್‍ಕೇರ್‍ಗೂ ಸಂಬಂಧವೇ ಇಲ್ಲ. ಬಡವ ಬಲ್ಲದರಾದಿಯಾಗಿ ಎಲ್ಲರಿಗೂ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ದೊರಕಬೇಕು. ವಿಶ್ವದಲ್ಲೇ ಅತಿಹೆಚ್ಚು ಸಂಖ್ಯೆಯ ವೈದ್ಯರು ಮತ್ತು ನರ್ಸ್‍ಗಳು ಭಾರತದಿಂದ ಬರುತ್ತಾರೆ. ಜೆಟ್ ಪೈಲಟ್‍ಗಳಿಗೆ ತರಬೇತಿ ನೀಡುವ ನಾವು ನರ್ಸ್‍ಗಳಿಗೆ ಕ್ರಿಟಿಕಲ್ ಕೇರ್ ತರಬೇತಿ ನೀಡಲಾರೆನೆ?  ನನ್ನ ದೇಶವು ಆರೋಗ್ಯ ಸೇವೆ ಕ್ಷೇತ್ರದಲ್ಲಿ ಇಡೀ ವಿಶ್ವದಲ್ಲೇ ಅಗ್ರಸ್ಥಾನ ಗಳಿಸಲಿದೆ. ಎಲ್ಲಿದ ಕೈಗೆಟುಕುವಂತಹ ಉನ್ನತ ಮಟ್ಟದ ಆರೋಗ್ಯಸೇವೆ ದೊರಕಲಿದೆ.

Facebook Comments

Sri Raghav

Admin