ಜೀವನದಲ್ಲಿ ಜಿಗುಪ್ಸೆ : 7 ವರ್ಷದ ಮಗನಿಗೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ತಂದೆ

ಈ ಸುದ್ದಿಯನ್ನು ಶೇರ್ ಮಾಡಿ

Suicide-0007

ಬೆಂಗಳೂರು, ನ.19– ಒಂದು ಕಡೆ ಮೊದಲನೆ ಪತ್ನಿ ವಿಚ್ಛೇದನ ನೀಡಿ ದೂರವಾದರೆ ಮತ್ತೊಂದೆಡೆ ಎರಡನೆ ಪತ್ನಿಯೂ ತೊರೆದಿದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿ ಮಗನನ್ನು ನೇಣು ಬಿಗಿದು ಸಾಯಿಸಿ ಆತನೂ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ವೈಟ್‍ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ಆಂಧ್ರ ಪ್ರದೇಶದ ಮೂತರಾಜು (28) ಎಂಬಾತನೇ ಮಗ ಮನೋಹರ್ (7)ನನ್ನು ಸಾಯಿಸಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ವೃತ್ತಿಯಲ್ಲಿ ಕಾರ್ಪೆಂಟರ್ ಆಗಿದ್ದ ಮೂತರಾಜು ಈ ಮೊದಲು ಮದುವೆಯಾಗಿದ್ದು, ಇವರಿಗೆ ಒಂದು ಹೆಣ್ಣು ಮತ್ತು ಗಂಡು ಮಗುವಿತ್ತು.

ಪತ್ನಿ ವಿಚ್ಛೇದನ ನೀಡಿ ಹೆಣ್ಣು ಮಗುವಿನೊಂದಿಗೆ ಹೋಗಿದ್ದರಿಂದ ಮೂತರಾಜು ಮಗನೊಂದಿಗೆ ವಾಸವಾಗಿದ್ದರು.  ಆರು ತಿಂಗಳ ಹಿಂದೆ ಮೂತರಾಜು ಮತ್ತೊಂದು ವಿವಾಹವಾಗಿದ್ದು, ಒಂದು ತಿಂಗಳ ಹಿಂದೆ ಎರಡನೆ ಪತ್ನಿಯೂ ಈತನನ್ನು ತೊರೆದಿದ್ದರು ಎನ್ನಲಾಗಿದೆ. ಇದರಿಂದ ನೊಂದಿದ್ದ ಮೂತರಾಜು ಜೀವನದಲ್ಲಿ ಜಿಗುಪ್ಸೆಗೊಂಡು ಆಂಧ್ರದಿಂದ ಬೆಂಗಳೂರಿನ ತುರಬನಹಳ್ಳಿಯಲ್ಲಿ ವಾಸವಾಗಿದ್ದ ತಂಗಿ ಮನೆಗೆ ಮಗನನ್ನು ಕರೆದುಕೊಂಡು ಬಂದಿದ್ದರು.

ನಿನ್ನೆ ತಂಗಿ ಮತ್ತು ಇವರ ಪತಿ ಕೆಲಸಕ್ಕೆ ಹೋಗಿದ್ದಾಗ ಮೂತರಾಜು ಮಗನನ್ನು ಸೀರೆಯಿಂದ ಫ್ಯಾನಿಗೆ ನೇಣು ಬಿಗಿದು ಕೊಲೆ ಮಾಡಿ ನಂತರ ಅದೇ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾತ್ರಿ 8 ಗಂಟೆಗೆ ತಂಗಿ ಮತ್ತು ಇವರ ಪತಿ ಮನೆಗೆ ವಾಪಸಾದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.  ಸುದ್ದಿ ತಿಳಿದ ವೈಟ್‍ಫೀಲ್ಡ್ ಪೊಲೀಸರು ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿಕೊಂಡು ಶವಗಳನ್ನು ವೈದೇಹಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin