ಜೀವನದ ಜರ್ನಿಯನ್ನು ಸುಂದರವಾಗಿಸುವ ಸೂಪರ್ ಸೂತ್ರಗಳು

ಈ ಸುದ್ದಿಯನ್ನು ಶೇರ್ ಮಾಡಿ

Lifestyle-01

ಬದುಕಿನ ಸ್ಥಿತ್ಯಂತರಗಳು ಹಲವು ಆದರೆ ಅದರಿಂದ ನಿಜವಾದ ಬದುಕಿನ ಅರ್ಥ ಕಳೆದುಕೊಳ್ಳುವುದರಲ್ಲಿ ಯಾವುದೇ ಲಾಭವಿಲ್ಲ. ಬದಲಿಗೆ ಜೀವನ ಸ್ಪೂರ್ತಿಯ ಸೆಲೆಯಾದಾಗ ಬದುಕು ಹಸನಾಗುವುದರಲ್ಲಿ ಸಂಶಯವೂ ಇಲ್ಲ. ಸಾಮಾನ್ಯವಾಗಿ ನಮಗೆಲ್ಲ ತಿಳಿದಿರುವಂತೆ ಆರೋಗ್ಯವೇ ಭಾಗ್ಯ ಎಂಬ ವಿಚಾರ ನಮ್ಮ ಬದುಕಿನಲ್ಲಿ ಕೇವಲ ತತ್ವವನ್ನಾಗಿಸದೆ ಅದನ್ನು ಪಾಲಿಸಿದಾಗ ನಿಜವಾದ ಜೀವನ ಮೌಲ್ಯಗಳು ನಮ್ಮದಾಗುತ್ತವೆ.   ಬಹಳಷ್ಟು ಮಂದಿ ಪ್ರಕಾರ ನಿಜವಾದ ಜೀವನ ಆರಂಭವಾಗುವುದೇ 45ರ ನಂತರ ಅಂದರೆ ಅದಕ್ಕೂ ಮುನ್ನ ಬಾಲ್ಯ, ಯೌವ್ವನವನ್ನು ದಾಟಿ ಒಬ್ಬ ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ಪರ್ವ ಕಾಲ. ಈ ಹಂತದಲ್ಲಿ ನಮ್ಮ ಭವಿಷ್ಯದ ಹೊಂಗನಸಿನೊಂದಿಗೆ ವಾಸ್ತವವನ್ನು ಅರಿತು ಸ್ಥಿತಿಗತಿಗಳನ್ನು ಅರ್ಥ ಮಾಡಿಕೊಳ್ಳುತ್ತಾ ಸಾಗುವ ದಾರಿ ಹೂವಿನದಲ್ಲ.

ಹಾಗಾಗಿಯೇ ಆ ಬದುಕನ್ನು ಸೂಕ್ತ ರೀತಿಯಲ್ಲಿ ರೂಪಿಸಿಕೊಳ್ಳಬೇಕಿದೆ. ಇದಕ್ಕಾಗಿ ಕೆಲವೊಂದು ಸೂತ್ರಗಳಿವೆ. ಇದರಲ್ಲಿ ಪ್ರಮುಖವಾಗಿ ವಯಸ್ಸಾಯಿತು ಎಂದು ಕೊರಗದಿರುವುದು, ಆರ್ಥಿಕವಾಗಿ ಸದೃಢಗೊಳ್ಳುವುದು, ಸಮಾಧಾನಚಿತ್ತರಾಗಿ ದಿನದೂಡುವುದು, ಸ್ವಾರ್ಥ ಬಿಟ್ಟು ನಿಸ್ವಾರ್ಥದೆಡೆಗೆ ಸಾಗುವುದು, ತಪ್ಪುಗಳನ್ನು ಕ್ಷಮಿಸುತ್ತಾ ಬೇರೆಯವರ ತಪ್ಪನ್ನು ಮನ್ನಿಸುತ್ತಾ ಸಾಗುವುದು, ನಿಶ್ಚಿತ ಗುರಿಯೆಡೆಗೆ ಪಯಣಿಸುವುದು ರೂಢಿಸಿಕೊಳ್ಳಬೇಕು ಎಂಬುದು ಸೂತ್ರಗಳ ಒಳತಿರುಳು. ವಯಸ್ಸಾಯಿತ್ತೆಂದು ಕೊರಗುವುದರಿಂದಲೇ ನಮ್ಮ ಜೀವನೋತ್ಸಾಹ ಮರುಟಿ ಹೋಗುತ್ತದೆ. ಇದರಿಂದ ಉತ್ಸಾಹವಿಲ್ಲದ ಜೀವನದಲ್ಲಿ ಯಾಂತ್ರಿಕತೆ ನೆಲೆನಿಂತು ಎಲ್ಲವೂ ಕಾಲ ಕಾಲಕ್ಕೆ ನಡೆದರೂ ಅದನ್ನು ಅನುಭವಿಸುವ, ಆಸ್ವಾದಿಸುವ ಮನಸ್ಸಿಲ್ಲದೆ ದಿನದೂಡಿಡಬೇಕಾಗುತ್ತದೆ.

ಹಾಗಾಗಿ ಋಣಾತ್ಮಕ ಚಿಂತನೆಗಳನ್ನು ಬದಿಗೊತ್ತಿ ಧನಾತ್ಮಕ ಆಲೋಚನೆಗಳನ್ನು ರೂಢಿಸಿಕೊಳ್ಳಬೇಕಿದೆ. ಮೊದಲ 10-15 ವರ್ಷ ಬಾಲ್ಯ ಕಳೆದ ನಾವು ಯವ್ವನದಲ್ಲಿ ಓದು, ಉದ್ಯೋಗದ ಹಿಂದೆ ಓಡುತ್ತಿರುವಾಗ ಒಂದಿಷ್ಟು ಆರೋಗ್ಯವನ್ನು ನಿರ್ಲಕ್ಷಿಸುತ್ತೇವೆ. ಆದರೆ 2ನೇ ಹಂತದಲ್ಲಿ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡುವುದರಿಂದ ಭವಿಷ್ಯಕ್ಕೆ ಭದ್ರ ಬುನಾದಿ ಒದಗುತ್ತದೆ.
ಉತ್ತಮ ಆರೋಗ್ಯವೇ ಉತ್ಸಾಹದ ಸಂಕೇತವೂ ಹೌದು. ಇದನ್ನು ಅರಿತು ಪ್ರೀತಿ, ಪ್ರೇಮ, ವಿಶ್ವಾಸವನ್ನು ಹಂಚುತ್ತಾ ಬೆಳೆಯಬೇಕಿದೆ. ಜೊತೆ ಜೊತೆಗೆ ಒಬ್ಬರಿಗೆ ಹೊರೆಯಾಗದಂತೆ ಬದುಕುವ ಸಾಮಥ್ರ್ಯವನ್ನು ಗಳಿಸುತ್ತಾ ಮುನ್ನಡೆ ಇಡಬೇಕಾಗಿದೆ.

ಉದ್ಯೋಗ ಪಡೆದ ನಾವು ಒಂದು ರೀತಿಯಲ್ಲಿ ಸ್ವಾವಲಂಬಿಗಳಾಗಿರುತ್ತೇವೆ. ಇದು ಅಹಂಕಾರ ಅಥವಾ ಅಹಂಗೆ ದಾರಿಯಾಗಬಾರದಷ್ಟೆ . ಈ ಘಟ್ಟದಲ್ಲಿ ಭವಿಷ್ಯದ ಹೊಂಗನಸು ಸಾಕಾರಗೊಳ್ಳುವ ಜೊತೆಗೆ ವೃದ್ಧಾಪ್ಯದಲ್ಲಿ ಕಷ್ಟ ಪಡದಂತೆ ಜೀವನ ನಡೆಸಲು ವಿಮೆಯಂತಹ ಭದ್ರತೆ ಮತ್ತು ಬದ್ದತೆಗಳನ್ನು ಅನುಸರಿಸಬೇಕಿದೆ.  ವಿಮೆ ಸ್ವಯಂ ನಿವೃತ್ತಿ ನಂತರದ ಜೀವನಕ್ಕೆ ಬೆಂಗಾವಲಾದರೆ ನಮ್ಮ ಸಂಗಾತಿ, ಮಕ್ಕಳಿಗೆ ಭದ್ರತೆ ಒದಗಿಸುವ ಬದ್ಧತೆಯು ಇರಲೇಬೇಕು. ಈ ಘಟ್ಟದಲ್ಲಿ ಮಾತ್ರವಲ್ಲದೆ ಜೀವನದ ಪ್ರತಿ ಘಟ್ಟದಲ್ಲೂ ಹಣ ಅತಿಮುಖ್ಯವಾಗಿರುತ್ತದೆ. ಆದರೆ ಹಣವೇ ಜೀವನ ಆಗದಂತೆ ಎಚ್ಚರಿಕೆ ವಹಿಸಬೇಕು. ಈ ದಿಸೆಯಲ್ಲಿ ಹಣ ಗಳಿಕೆಗೆ ಉದ್ಯೋಗದಲ್ಲಿ ಅಷ್ಟೇ ಕ್ರಿಯಾಶೀಲರಾಗಿ ಪಾಲ್ಗೊಳ್ಳುವುದು ಎಷ್ಟು ಮುಖ್ಯವೋ ಇದಕ್ಕೆ ಬೆನ್ನಲುಬಾಗಿ ನಿಲ್ಲುವುದು ನಮ್ಮ ಆರೋಗ್ಯವೇ ಎಂಬುದನ್ನು ಮರೆಯುವಂತಿಲ್ಲ.

ಕೇವಲ ನಮ್ಮೊಬ್ಬರಿಗಾಗಿ ನಾವು ದುಡಿಯುತ್ತಿರುವುದಿಲ್ಲ, ಕುಟುಂಬದ ನಿರ್ವಹಣೆ, ಮಕ್ಕಳ ಪಾಲನೆ ಪೋಷಣೆ ನಮ್ಮ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿರುತ್ತದೆ. ಇವೆಲ್ಲವನ್ನೂ ಸುಸೂತ್ರವಾಗಿ ನಿರ್ವಹಿಸುವಾಗ ಬೆಳಗಿನಿಂದ ಸಂಜೆಯವರೆಗೂ ವಿವಿಧ ಕಾರ್ಯ ಚಟುವಟಿಕೆಗಳಲ್ಲಿ ನಿರತವಾಗುವ ಮನಸಿಗೆ ರಿಲಾಕ್ಸೇಷನ್ ಬೇಕೇ ಬೇಕು.  ಅದಕ್ಕಾಗಿ ದಿನದ ಒಂದಿಷ್ಟು ಸಮಯವನ್ನು ಮನಸ್ಸನ್ನು ಮುದಗೊಳಿಸಲು ಮೀಸಲಿಡಬೇಕು. ಇದು ಕಷ್ಟವಾದರೂ ಸಾಧ್ಯವಾಗಿಸಿಕೊಳ್ಳುವ ಮೂಲಕ ಯೋಗ, ಧ್ಯಾನ, ನಿಮಗೆ ಇಷ್ಟವಾದ ಸಂಗೀತವನ್ನು ಆಲಿಸುವುದು, ಮಕ್ಕಳೊಂದಿಗೆ ಬೆರೆತು ನಲಿಯುವುದು, ಆಟೋಟಗಳಲ್ಲಿ ಆಸಕ್ತಿ ಇದ್ದರೆ ಭಾಗವಹಿಸುವುದು, ಕರಕುಶಲ ಕಲೆ ಇನ್ನಿತರ ಹವ್ಯಾಸಗಳನ್ನು ರೂಢಿಸಿಕೊಂಡಾಗ ಎಷ್ಟೇ ಶ್ರಮವಹಿಸಿ ದುಡಿದಿದ್ದರೂ ಎಲ್ಲವೂ ಮಂಜಿನಂತೆ ಕರಗಿ ನವೋಲ್ಲಾಸ ಮೂಡುತ್ತದೆ.

ನಿನ್ನೆ ದಿನ ಒಂದು ಕ್ಯಾನ್ಸಲ್ಡ್ ಚೆಕ್ ಇದ್ದಂತೆ ನಾಳೆ ಪ್ರಾಮಿಷರಿ ನೋಟ್ ಇದ್ದಂತೆ ಅಂದರೆ ಹಿಂದಿನ ದಿನ ಕಳೆದ ಕೊರಗಿಲ್ಲದೆ ಮುಂದಿನ ದಿನವನ್ನು ಆಶಾಭಾವದೊಂದಿಗೆ ಎದುರಿಸುವ ಮನಸ್ಥಿತಿ ನಮ್ಮದಾಗಬೇಕಿದೆ. ಬದಲಾವಣೆಗಳು ಬದುಕಿನ ಅವಿಭಾಜ್ಯ ಅಂಗಗಳು. ಕಾಲಘಟ್ಟ , ಪರಿಸ್ಥಿತಿ ಹೀಗೆ ಹಲವಾರು ಕಾರಣಗಳಿಗೆ ಬದಲಾವಣೆಗಳಾದರೂ ಅದು ಒಂದು ಪ್ರಕ್ರಿಯೆ. ಯಾವುದೂ ಜಗತ್ತಿನಲ್ಲಿ ಶಾಶ್ವತವಲ್ಲ ಎಂದಾಗ ಇಂತಹ ಬದಲಾವಣೆಗಳನ್ನು ಸ್ವೀಕರಿಸಿ ಅದರೊಂದಿಗೆ ಜೀವನವನ್ನು ಕಟ್ಟಿಕೊಳ್ಳಬೇಕಾಗುತ್ತದೆ.  ಇನ್ನು ಸ್ವಾರ್ಥ. ಎಲ್ಲರೂ ಒಂದಲ್ಲ ಒಂದು ಸ್ವಾರ್ಥಿಗಳೆ. ಆದರೆ ನಿಜವಾದ ಸಂತೋಷ ಅಡಗಿರುವುದು ನಿಸ್ವಾರ್ಥದಲ್ಲಿ. ಯಾರಿಗೋ ಮಾಡಿದ ಸಹಾಯ, ಅವರ ಕೃತಜ್ಞತಾ ಭಾವದಿಂದ ಸಿಕ್ಕ ಸಂತೋಷಕ್ಕೆ ಬೆಲೆಯೇ ಕಟ್ಟಲಾಗದು.

ಯಾರಿಂದ ಏನನ್ನೂ ಬಯಸದೆ ಸಹಾಯ ಮಾಡುವ ಗುಣ ಬೆಳೆಯಬೇಕಿದೆ. ನಾವು ದುಡಿದ ಪ್ರತಿಫಲ, ಮಾಡುವ ಕಾರ್ಯ ಎಲ್ಲವೂ ಸ್ವಾರ್ಥಕ್ಕಾಗಿಯೇ. ಆದರೂ ಅದರ ನಡುವೆ ಪರರ ನೋವುಗಳಿಗೆ ಸ್ಪಂದಿಸಿ ಅರಿತು ಸಹಾಯ ಮಾಡುವುದು ಉತ್ತಮ ನಡವಳಿಕೆಗಳಲ್ಲಿ ಒಂದಾಗಿದೆ. ಇದರಿಂದ ನೆಮ್ಮದಿಯಿಂದ ದಿನ ಕಳೆಯಲು ಸಾಧ್ಯ. ಜೀವನದ ಪ್ರತಿ ಗಳಿಗೆಯಲ್ಲಿ ಮತ್ತೊಬ್ಬರ ಜೊತೆ ಒಡನಾಟ ಇದ್ದೇ ಇರುತ್ತದೆ. ಅಂತಹ ಸಂದರ್ಭದಲ್ಲಿ ಬೇರೆಯವರ ತಪ್ಪುಗಳನ್ನು ಎಣಿಸುವ ಬದಲಿಗೆ ಅವರಲ್ಲಿನ ಒಳ್ಳೆಯದನ್ನು ಗುರುತಿಸುತ್ತಾ ನಾವು ಬೆಳೆಯಬೇಕಿದೆ. ನಮ್ಮ ಆರೋಗ್ಯ ಮತ್ತು ಆನಂದ ಅಡಗಿರುವುದೇ ಇಂತಹ ವಿಷಯಗಳಲ್ಲಿ.

ತಪ್ಪು ಮಾಡಿದವರನ್ನು ಕ್ಷಮಿಸುತ್ತಾ, ತಪ್ಪುಗಳನ್ನು ಮರೆತು ಸರಿಯಾದ ದಾರಿಯಲ್ಲಿ ನಡೆಯುವುದೇ ಒಂದು ಕಲೆ. ಇದನ್ನು ಕರಗತ ಮಾಡಿಕೊಳ್ಳುವವರು ನಾವಾಗಬೇಕು. ಪ್ರತಿಯೊಬ್ಬರಲ್ಲೂ ಒಂದೊಂದು ವೈಶಿಷ್ಟ್ಯವಿರುತ್ತದೆ. ಅವರವರ ದಾರಿಯಲ್ಲಿ ಅವರವರು ಸರಿಯಾಗಿರುತ್ತಾರೆ. ಆದರೆ ಮಾನವರಾದ ನಾವೆಲ್ಲರೂ ಈ ಜಗತ್ತು ಬಿಡುವವರೆ. ಹಾಗಿದ್ದು ಈ ಬಗ್ಗೆ ಅನುದಿನವೂ ಅಂಜುತ್ತಾ ಬದುಕುವುದು ತರವಲ್ಲ.  ಜೊತೆಗೆ ಜೀವನದಲ್ಲಿ ಜೊತೆಯಾಗಿ ಬಂದ ಸಂಗಾತಿ, ಮಕ್ಕಳು ನಮಗಾದ ನಷ್ಟವನ್ನು ಭರಿಸಿಕೊಡುತ್ತಾರೆ ಎಂಬ ಆಕಾಂಕ್ಷೆಯೂ ಸರಿಯಲ್ಲ. ಅವರು ಖಿನ್ನರಾಗಿದ್ದಾಗ ಸಂತೈಸಲು ಅದನ್ನು ಅರಿಯುವ ಮನಸ್ಸಿರಬೇಕು ಇಂತಹ ಸೂಕ್ಷ್ಮತೆಗಳನ್ನು ಅರಿಯಲು ಸಹ ಓದುವ ಹವ್ಯಾಸ ಸಹಕಾರಿ.  ಒಟ್ಟಾರೆ ಮನುಷ್ಯನ ಆಂತರಿಕ ಬೆಳವಣಿಗೆ ಬದುಕಿನಲ್ಲಿ ಹಲವಾರು ಸೂತ್ರಗಳನ್ನು ಅಳವಡಿಸಿಕೊಂಡು ಹೆಜ್ಜೆ ಇಟ್ಟು ಯಶಸ್ವಿಯಾಗಬಹುದು. ಆದರೆ ಇದಕ್ಕೆ ಮನೋಇಚ್ಚೆ ಅತಿ ಅವಶ್ಯಕ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin