ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಐವರು ಕುಪ್ರಸಿದ್ಧ ಕೈದಿಗಳು ಬುಕ್ಸರ್ ಜೈಲಿನಿಂದ ಎಸ್ಕೇಪ್

ಈ ಸುದ್ದಿಯನ್ನು ಶೇರ್ ಮಾಡಿ

Buxer-Jail

ಬುಕ್ಸರ್ (ಬಿಹಾರ), ಡಿ.31-ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ನಾಲ್ವರು ಕುಖ್ಯಾತ ಅಪರಾಧಿಗಳೂ ಸೇರಿದಂತೆ ಐವರು ಕೈದಿಗಳು ಸಿನಿಮೀಯ ರೀತಿಯಲ್ಲಿ ಪರಾರಿಯಾಗಿರುವ ಘಟನೆ ನಿನ್ನೆ ಮಧ್ಯರಾತ್ರಿ ಬಿಹಾರದ ಅತಿಭದ್ರತೆಯ ಬುಕ್ಸರ್ ಸೆಂಟ್ರಲ್ ಜೈಲಿನಲ್ಲಿ ನಡೆದಿದೆ. ನಿನ್ನೆ ಮಧ್ಯರಾತ್ರಿ 12 ರಿಂದ ಮುಂಜಾನೆ 3 ಗಂಟೆ ನಡುವೆ ಐವರು ಕೈದಿಗಳು ಜೈಲಿನ ಗೋಡೆ ಏರಿ ಆಚೆಗೆ ಜಿಗಿದು ಪರಾರಿಯಾಗಿದ್ದಾರೆ ಎಂದು ಜಿಲ್ಲಾ ದಂಡಾಧಿಕಾರಿ ರಮಣ್ ಕುಮಾರ್ ತಿಳಿಸಿದ್ದಾರೆ.   ಜೈಲಿನ ಗೋಡೆ ಬಳಿ ಕಬ್ಬಿಣದ ಸರಳು, ಪೈಪ್ ಮತ್ತು ಧೋತಿ ಪತ್ತೆಯಾಗಿದೆ. ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮೋತಿಹರಿಯ ಪ್ರಜೀತ್ ಸಿಂಗ್, ಛಾಪ್ರಾದ ಗಿರಿಧರಿ ರಾಯ್, ಆರಾದ ಸೋನು ಪಾಂಡೆ ಮತ್ತು ಉಪೇಂದ್ರ ಸಹ ಹಾಗೂ 10 ವರ್ಷ ಕಠಿಣ ಸಜೆಗೆ ಒಳಗಾಗಿದ್ದ ಬುಕ್ಸರ್‍ನ ಬ್ರಹ್ಮಪುರ್‍ನ ಸೋನು ಸಿಂಗ್ ಪರಾರಿಯಾಗಿರುವ ಕುಖ್ಯಾತ ಕೈದಿಗಳಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಉಪೇಂದ್ರ ಶರ್ಮ ತಿಳಿಸಿದ್ದಾರೆ.

ಪರಾರಿಯಾದ ಕೈದಿಗಳಲ್ಲಿ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೇ ವೇಳೆ ಸಮಯ ಸಾಧಿಸಿ ಪರಾರಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಭದ್ರತಾ ಲೋಪದೊಂದಿಗೆ ಜೈಲಿನಲ್ಲಿ ದಟ್ಟ ಮಂಜು ಆವರಿಸಿದ್ದ ಕಾರಣ ಕೈದಿಗಳು ಪರಾರಿಯಾಗಲು ನೆರವಾಗಿದೆ ಎಂಬುದನ್ನು ಪೊಲೀಸ್ ಹಿರಿಯ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಜೈಲಿಗೆ ಉನ್ನತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ತಪಾಸಣೆ ನಡೆಸಿದ್ದಾರೆ. ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥರನ್ನು ಹೊಣೆಗಾರನ್ನಾಗಿ ಮಾಡಲಾಗುವುದು ಎಂದು ಡಿಸ್ಟ್ರಿಕ್ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ. ಪರಾರಿಯಾಗಿರುವ ಕೈದಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದ್ದು, ಶೋಧಕಾರ್ಯ ಮುಂದುವರಿದಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin