ಜೂನಿಯರ್ ರಸಿಕ ‘ಬೃಹಸ್ಪತಿ’ಯಾಗಿ ಎಂಟ್ರಿ

ಈ ಸುದ್ದಿಯನ್ನು ಶೇರ್ ಮಾಡಿ

bruha-1
ಸ್ಯಾಂಡಲ್‍ವುಡ್‍ನ ಕನಸುಗಾರ, ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸುಪುತ್ರ ಮನೋರಂಜನ್ ಅವರ ಅಭಿನಯದ 2ನೇ ಚಿತ್ರ ಬೃಹಸ್ಪತಿ ಈ ವಾರ ರಾಜ್ಯಾದ್ಯಂತ ತೆರೆ ಕಾಣಲಿದೆ. ಈ ಹಿಂದೆ ಬಂದಂತಹ ಸಾಹೇಬ ಚಿತ್ರದಲ್ಲಿ ಗಮನಾರ್ಹ ಪಾತ್ರವನ್ನು ನಿರ್ವಹಿಸುವ ಮೂಲಕ ಪ್ರೇಕ್ಷಕರ ಮನಗೆದಿದ್ದ ಮನೋರಂಜನ್ ತಮ್ಮ 2ನೇ ಪ್ರಯತ್ನದಲ್ಲಿ ಯಶಸ್ಸಿನ ಮೆಟ್ಟಿಲು ಏರಲಿದ್ದಾರೆ ಎಂಬ ಮಾತು ಗಾಂಧಿನಗರದಲ್ಲಿ ಕೇಳಿಬರುತ್ತಿದೆ.  ಹೆಸರಾಂತ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಸಿದ್ದವಾಗಿರುವ ಈ ಚಿತ್ರವನ್ನು ಯಶಸ್ವಿ ನಿರ್ದೇಶಕ ಎಂದೇ ಕರೆಯಲ್ಪಡುವ ನಂದಕಿಶೋರ್ ಈ ಬೃಹಸ್ಪತಿಯನ್ನು ಕರೆ ತರುತ್ತಿದ್ದಾರೆ.  ಚಿತ್ರದಲ್ಲಿ ದಕ್ಷಿಣ ಭಾರತದ ಖ್ಯಾತನಟಿ ಮಿಶ್ತಿ ಚಕ್ರವರ್ತಿ ನಟಿಸುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ. ಉಳಿದಂತೆ, ಸಿತಾರಾ, ಅವಿನಾಶ್, ಸಾಧು ಕೋಕಿಲ, ಪ್ರಕಾಶ್ ಬೆಳವಾಡಿ ಮುಂತಾದವರು ಪ್ರಮುಖ ತಾರಾಗಣದಲ್ಲಿದ್ದು, ಸಾಹೇಬ ಚಿತ್ರದ ನಂತರ ಮನೋರಂಜನ್ ಈ ಚಿತ್ರದಲ್ಲಿ ಮತ್ತೊಂದು ಹೊಸ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ತಮಿಳಿನಲ್ಲಿ ರಜನಿಕಾಂತ್ ಅಳಿಯ ಧನುಷ್ ಅಭಿನಯಿಸಿದ ಸೂಪರ್‍ಹಿಟ್ ಚಿತ್ರ ವಿಐಪಿ ಸಿನಿಮಾದ ರಿಮೇಕ್ ಅವತರಣಿಕೆ ಇದಾಗಿದ್ದು, ಕನ್ನಡಕ್ಕೆ ತಕ್ಕಂತೆ ಒಂದಿಷ್ಟು ಬದಲಾವಣೆ ಮಾಡಿಕೊಂಡು ಬೃಹಸ್ಪತಿಗೆ ಹೊಸರೂಪವನ್ನು ನೀಡಿದ್ದಾರಂತೆ. ಚಿತ್ರಕ್ಕೆ ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ. ಈ ಚಿತ್ರದ ಹಾಡುಗಳಿಗೆ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಈ ಚಿತ್ರದ ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು , ಟೀಸರ್ ಕೂಡ ಸಿನಿಪ್ರಿಯರ ಗಮನವನ್ನು ಸೆಳೆದಿದೆ. ಎಲ್ಲ ಅಂದುಕೊಂಡಂತೆ ರಾಜ್ಯಾದ್ಯಂತ ಅದ್ಧೂರಿ ಪ್ರಚಾರದೊಂದಿಗೆ ಸುಮಾರು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ವಾರ ಬೃಹಸ್ಪತಿ ಬರುತ್ತಿದ್ದಾನೆ. ಈ ಯುವ ಪ್ರತಿಭೆಯ ಅಭಿನಯವನ್ನು ಪ್ರೇಕ್ಷಕರು ಯಾವ ರೀತಿ ಇಷ್ಟಪಡುತ್ತಾರೆ ಎಂಬುದನ್ನು ಕಾದು ನೋಡಬೇಕು.

Facebook Comments

Sri Raghav

Admin