ಜೂ.18ರಿಂದ ಅನಿರ್ಧಿಷ್ಟಾವಧಿವರೆಗೂ ರಸ್ತೆಗಿಳಿಯಲ್ಲ ಸರಕು-ಸಾಗಣೆ ವಾಹನಗಳು

ಈ ಸುದ್ದಿಯನ್ನು ಶೇರ್ ಮಾಡಿ

Lorry---01

ಬೆಂಗಳೂರು, ಮೇ 25- ಪೆಟ್ರೋಲ್, ಡೀಸೆಲ್ ದರ ಏರಿಕೆ, ವಾಹನಗಳ ಥರ್ಡ್ ಪಾರ್ಟಿ (ಮೂರನೆ ವ್ಯಕ್ತಿ) ಪಾಲಿಸಿ ಪ್ರೀಮಿಯಂ ದರ ಹೆಚ್ಚಳ ಸೇರಿದಂತೆ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜೂ.18ರಿಂದ ದೇಶಾದ್ಯಂತ ಎಲ್ಲ ಸರಕು-ಸಾಗಣೆ ವಾಹನಗಳ ಸೇವೆಯನ್ನು ಅನಿರ್ದಿಷ್ಟ ಕಾಲ ಸ್ಥಗಿತಗೊಳಿಸಲು ಸರಕು-ಸಾಗಣೆ ವಾಹನಗಳ ಮಾಲೀಕರ ಸಂಘ ನಿರ್ಧರಿಸಿದೆ ಎಂದು ಸಂಘದ ಅಧ್ಯಕ್ಷ ಬಿ.ಚನ್ನಾರೆಡ್ಡಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಹನಗಳ ಮೂರನೆ ವ್ಯಕ್ತಿ ಪಾಲಿಸಿ ಪ್ರೀಮಿಯಂಅನ್ನು 2002ರಿಂದಲೂ ನಿರಂತರವಾಗಿ ಏರಿಕೆ ಮಾಡಿಕೊಂಡು ಬಂದಿದೆ. ಈವರೆಗೆ ಶೇ.1117ರಷ್ಟು ಆಗಿದ್ದು, ಈ ನಿರಂತರ ಏರಿಕೆ ತಡೆಗಾಗಿ ಮಾಡಿದ ಮನವಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲದ ಕಾರಣ ಅನಿರ್ದಿಷ್ಟ ಕಾಲ ಸೇವೆ ಸ್ಥಗಿತಗೊಳಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಶೇ.80ರಷ್ಟು ಲಾರಿ ಮಾಲೀಕರು ಒಂದು ಅಥವಾ ಎರಡು ವಾಹನಗಳನ್ನು ಹೊಂದಿರುತ್ತಾರೆ.

ಬ್ಯಾಂಕ್‍ನಿಂದ ಸಾಲ ಪಡೆದು ವಾಹನಗಳನ್ನು ಖರೀದಿ ಮಾಡಿರುತ್ತಾರೆ. ಬಡ್ಡಿ ಸಮೇತ ಕಂತಿನ ರೂಪದಲ್ಲಿ ಸಾಲ ಮರುಪಾವತಿ ಮಾಡಬೇಕಿದೆ. ಇದರೊಂದಿಗೆ ಮಾಲೀಕರು ಡೀಸೆಲ್‍ಗಾಗಿ ಮಾಡುವ ವೆಚ್ಚವನ್ನು ಬಾಡಿಗೆ ರೂಪದಲ್ಲಿ ಪಡೆಯಲಾಗುತ್ತಿಲ್ಲ. ಪ್ರತಿನಿತ್ಯ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಭರಿಸಬೇಕಾಗುತ್ತದೆ. ಸರ್ಕಾರ ಲಾರಿ ಮಾಲೀಕರ ಈ ಯಾವ ಸಮಸ್ಯೆಗಳನ್ನೂ ಪರಿಗಣಿಸದೆ ಹಲವು ನಿರ್ಧಾರಗಳನ್ನು ಕೈಗೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೂರನೆ ವ್ಯಕ್ತಿ ಪಾಲಿಸಿ ವಹಿವಾಟನ್ನು ಸರ್ಕಾರ ಮತ್ತು ಖಾಸಗಿ ಕಂಪೆನಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಖಾಸಗಿ ಕಂಪೆನಿಗಳಿಗೆ ಪ್ರೀಮಿಯಂ ದರ ನಿಗದಿಪಡಿಸಲು ಸ್ವಾತಂತ್ರ್ಯ ನೀಡಿದ್ದಾರೆ. ಸ್ಪರ್ಧಾತ್ಮಕ ವ್ಯವಹಾರ ನಡೆಸಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಪ್ರೀಮಿಯಂ ದರ ಹೆಚ್ಚಳ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಜೂ.18ರೊಳಗೆ ಈಡೇರಿಸದಿದ್ದರೆ ದೇಶವ್ಯಾಪಿ ಅನಿರ್ದಿಷ್ಟ ಕಾಲ ಸರಕು-ಸಾಗಣೆ ವಾಹನಗಳ ಓಡಾಟವನ್ನು ಸ್ಥಗಿತಗೊಳಿಸಲಾಗುವುದು. ಈಗಾಗಲೇ ಪ್ರಧಾನಮಂತ್ರಿಗಳು, ಕೇಂದ್ರ ಭೂ ಸಾರಿಗೆ ಸಚಿವರು, ಭಾರತ ಸರ್ಕಾರ ಮತ್ತು ಛೇರ್ಮನ್ ಐಆರ್‍ಡಿಎಐ ಸಂಸ್ಥೆಗೆ ಮನವಿ ನೀಡಿ ತಮ್ಮ ನಿರ್ಧಾರಗಳನ್ನು ತಿಳಿಸುವುದಾಗಿ ವಿವರಿಸಿದರು.

Facebook Comments

Sri Raghav

Admin