ಜೆಡಿಎಸ್’ನ 8 ಮಂದಿ ಬಂಡಾಯ ಶಾಸಕರು ಸೇಫ್

ಈ ಸುದ್ದಿಯನ್ನು ಶೇರ್ ಮಾಡಿ

JDS-01

ಬೆಂಗಳೂರು, ಅ.23- ರಾಜ್ಯ ಸಭೆ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿ ಬೇರೆ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿದ ಆರೋಪದ ಮೇಲೆ ಅಮಾನತ್ತುಗೊಂಡಿರುವ ಪಕ್ಷದ 8 ಮಂದಿ ಶಾಸಕರ ಬಗ್ಗೆ ಜೆಡಿಎಸ್ ವರಿಷ್ಠರು ಮೃದು ಧೋರಣೆ ತಳೆದಿದ್ದು, ಶಿಸ್ತುಕ್ರಮ ಕೈಬಿಡುವ ಸಾಧ್ಯತೆಗಳಿವೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂಬ ಗುರಿ ಹೊಂದಿರುವ ಹಿನ್ನೆಲೆಯಲ್ಲಿ ಶಿಸ್ತುಕ್ರಮದಿಂದ ಹಿಂದೆ ಸರಿಯಲಾಗುತ್ತದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ಮುಂದಿನ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸಿದರೆ ಹೆಚ್ಚಿನ ಸ್ಥಾನ ಗೆಲ್ಲಲು ಅನುಕೂಲವಾಗಲಿದೆ. ಪಕ್ಷ ಒಡೆದ ಮನೆಯಂಥಾದರೆ, ಚುನಾವಣೆಯಲ್ಲಿ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದು ಲೆಕ್ಕಾಚಾರ ಹಾಕಲಾಗಿದೆ. ಅಮಾನತ್ತುಗೊಂಡಿರುವ ಶಾಸಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಪಕ್ಷದಲ್ಲಿ ತೀವ್ರ ಒತ್ತಡ ಉಂಟಾಗಿತ್ತು. ವರಿಷ್ಠರೂ ಕೂಡ ಬಂಡಾಯ ಶಾಸಕರ ವಿರುದ್ಧ ಕಠಿಣ ನಿಲುವು ತಳೆದಿದ್ದರು.

ಆದರೆ, ಕಾವೇರಿ ನದಿ ನೀರು ಹಂಚಿಕೆ ವಿಚಾರದ ಬಿಕ್ಕಟ್ಟು ಉಲ್ಬಣಿಸಿದ ನಂತರ ವರಿಷ್ಠರು ಸಹ ಬಂಡಾಯ ಶಾಸಕರ ಬಗ್ಗೆ ಮೃದು ನಿಲುವನ್ನು ತಳೆದಿದ್ದಾರೆ. ಈ ನಡುವೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‍ನಲ್ಲಿ ಆಂತರಿಕ ಭಿನ್ನಮತ ತಾರಕಕ್ಕೇರಿದೆ. ಇದರ ಲಾಭ ಪಡೆಯಲು ಎಲ್ಲರೂ ಒಗ್ಗಟ್ಟಾಗಿರುವುದು ಅಗತ್ಯ ಎಂಬ ನಿರ್ಧಾರಕ್ಕೆ ಬರಲಾಗಿದೆ.
ಜೆಡಿಎಸ್ ಹಿತೈಷಿಗಳು ಹಾಗೂ ಹಲವು ಮುಖಂಡರು ಬಂಡಾಯಗಾರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದರಿಂದ ಹೆಚ್ಚಿನ ಲಾಭವಾಗುವುದಿಲ್ಲ. ಬದಲಾಗಿ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಬೇಕು ಎಂಬ ಸಲಹೆ ಮಾಡಿದ್ದಾರೆ.

ಜೆಡಿಎಸ್ ಗುರಿ ಶಿಸ್ತುಕ್ರಮಕ್ಕಿಂತ ಮುಖ್ಯವಾಗಿ ಮುಂದಿನ ವಿಧಾನಸಭೆ ಚುನಾವಣೆ ಗೆಲ್ಲುವ ಕಡೆಗಿರಬೇಕು. ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳಿಗೆ ಆದ್ಯತೆ ನೀಡಬಾರದು. ಉತ್ತರ ಕರ್ನಾಟಕದಲ್ಲೂ ಪಕ್ಷ ಪ್ರಾಬಲ್ಯ ಮೆರೆಯಬೇಕಾದರೆ ಒಡಕಿನ ನಡೆ ಇರಬಾರದು ಎಂಬ ಸಲಹೆ ಮಾಡಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್‍ನಿಂದ ಕಾಂಗ್ರೆಸ್‍ನಲ್ಲೂ ಬಿಕ್ಕಟ್ಟು ಉಂಟಾಗಿದೆ. ಜತೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ನಡುವಿನ ಮುಸುಕಿನ ಗುದ್ದಾಟದಿಂದ ಬಿಜೆಪಿಯಲ್ಲೂ ಭಿನ್ನಮತ ಹೊಗೆಯಾಡುತ್ತಲೇ ಇದೆ.

ಸದ್ಯಕ್ಕೆ ರಾಜ್ಯದ ಜನರು ರಾಷ್ಟ್ರೀಯ ಪಕ್ಷಗಳಿಗಿಂತ ಪರ್ಯಾಯದ ಹುಡುಕಾಟದಲ್ಲಿದ್ದೂ ಅದರ ಲಾಭವನ್ನು ಜೆಡಿಎಸ್ ಪಡೆದುಕೊಳ್ಳಲು ಸಕಾಲವಾಗಿದೆ. ಈ ಸಂದರ್ಭದಲ್ಲಿ ಪಕ್ಷಕ್ಕೆ ಮರಳುವವರನ್ನು ಸೇರಿಸಿಕೊಳ್ಳಬೇಕು. ಸ್ವ ಸಾಮಥ್ರ್ಯವಿದ್ದು ಪಕ್ಷಾಂತರಗೊಳ್ಳುವರನ್ನು ಸೇರಿಸಿಕೊಳ್ಳಬೇಕು ಎಂಬ ಸಲಹೆ ನೀಡಲಾಗಿದೆ. ಈ ರೀತಿಯ ಸಲಹೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮ್ಮತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ತಕ್ಷಣಕ್ಕೆ ಭಿನ್ನಮತೀಯ ಶಾಸಕರ ವಿರುದ್ಧದ ಅಮಾನತ್ತನ್ನು ರದ್ದುಪಡಿಸುವುದಿಲ್ಲ. ಇನ್ನಷ್ಟು ದಿನ ಕಾದು ನೋಡಿ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ.

ಅಮಾನತ್ತು ರದ್ಧಾದರು ಕೆಲವರಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಲಿದೆ. ಶಾಸಕರಾದ ಜಮೀರ್ ಅಹಮದ್‍ಖಾನ್, ಎನ್.ಚಲುವರಾಯಸ್ವಾಮಿ, ಕೆ.ಗೋಪಾಲಯ್ಯ, ಅಖಂಡ ಶ್ರೀನಿವಾಸಮೂರ್ತಿ, ರಮೇಶ್ ಬಂಡಿಸಿದ್ದೇಗೌಡ, ಇಕ್ಬಾಲ್ ಅನ್ಸಾರಿ, ಭೀಮಾನಾಯಕ್ ಹಾಗೂ ಎಚ್.ಸಿ.ಬಾಲಕೃಷ್ಣ ಅವರನ್ನು ಪಕ್ಷದಿಂದ ಅಮಾನತ್ತು ಮಾಡಲಾಗಿದೆ. ಅಲ್ಲದೆ, ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಸಕತ್ವದಿಂದ ಅನರ್ಹಗೊಳಿಸುವಂತೆ ವಿಧಾನ ಸಭಾಧ್ಯಕ್ಷರಿಗೆ ದೂರು ನೀಡಲಾಗಿದೆ. ಇವರಲ್ಲಿ ಬಹುತೇಕರು ಪಕ್ಷದ ಜತೆಗೆ ಸ್ವ ಸಾಮಥ್ರ್ಯದ ಆಧಾರದ ಮೇಲೆ ಗೆದ್ದು ಬಂದಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin