ಜೆಡಿಎಸ್‍ಗೆ ಅಡ್ಡಿಪಡಿಸಲು ಕಾಂಗ್ರೆಸ್ ಇಲ್ಲಸಲ್ಲದ ಅಪಪ್ರಚಾರ : ಜಿಲ್ಲಾಧ್ಯಕ್ಷ ರಂಜನ್ ಅಜಿತ್‍ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

jds-congress
ಚಿಕ್ಕಮಗಳೂರು ಮಾ.6– ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಾತ್ಯಾತೀತ ಜನತಾದಳ ಅಧಿಕಾರಕ್ಕೆ ಬರುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ನಾಯಕರು ಜೆಡಿಎಸ್ ವರಿಷ್ಠರ ವಿರುದ್ದ ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಜಿಲ್ಲಾಧ್ಯಕ್ಷ ರಂಜನ್ ಅಜಿತ್‍ಕುಮಾರ್ ಆರೋಪಿಸಿದ್ದಾರೆ.ಕಡೂರು ತಾಲ್ಲೂಕಿನ ನಾಗೇನಹಳ್ಳಿಯಲ್ಲಿ ನಡೆದ ಜೆ.ಡಿ.ಎಸ್ ಹೋಬಳಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿಯ ದುರಾಡಳಿತ, ಮಿತಿಮೀರಿದ ಭ್ರಷ್ಟಾಚಾರದಿಂದ ರಾಜ್ಯದ ಜನತೆ ಬೇಸತ್ತಿದ್ದು, ಆ ಪಕ್ಷಗಳಿಂದ ವಿಮುಖರಾಗುತ್ತಿದ್ದಾರೆ, ಇದರಿಂದಾಗಿ ನಾಡಿನೆಲ್ಲೆಡೆ ಜೆ.ಡಿ.ಎಸ್. ಪರ ಒಲವು ವ್ಯಕ್ತವಾಗುತ್ತಿದ್ದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆ ಪಕ್ಷ ಅಧಿಕಾರಕ್ಕೆ ಬರುವುದು ನಿಚ್ಚಳವಾಗಿ ಕಾಣುತ್ತಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಬರನಿರ್ವಹಣೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ವಿಫಲವಾಗಿದೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆ ಪಕ್ಷಕ್ಕೆ ಸೋಲುವ ಭೀತಿ ಕಾಡುತ್ತಿದೆ ಎಂದ ಅವರು ಈ ಹಿನ್ನೆಲೆಯಲ್ಲಿ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಹಾಗೂ ಜಾತ್ಯಾತೀತ ಜನತಾದಳ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಹುನ್ನಾರ ನಡೆಸುತ್ತಿದ್ದಾರೆ.ರಾಜ್ಯಕ್ಕೆ ಅಚ್ಚೆ ದಿನ್ ಬರಬೇಕಾದರೆ ನಾಡಿನ ಜನ ಮುಂಬರುವ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ ಪ್ರಾದೇಶಿಕ ಪಕ್ಷಗಳನ್ನು ಅಧಿಕಾರಕ್ಕೆ ತರಬೇಕು ಎಂದು ಕಿವಿಮಾತು ಹೇಳಿದರು.

ಜೆ.ಡಿ.ಎಸ್ ಮುಖಂಡ ಎಸ್.ಎಲ್.ಭೋಜೇಗೌಡ ಮಾತನಾಡಿ, ಮಳೆ ಕೊರತೆಯಿಂದಾಗಿ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಇದುವರೆಗೂ ಬಿಡಿಗಾಸೂ ಪರಿಹಾರ ನೀಡಿಲ್ಲ, ಉದ್ಯೋಗ ಸೃಷ್ಟಿಸುವ ಕೆಲಸ ಮಾಡಿಲ್ಲ ಬರದಿಂದ ಕಂಗೆಟ್ಟು ನಗರಗಳತ್ತ ರೈತರು ವಲಸೆ ಹೋಗುತ್ತಿದ್ದರೂ ಅತ್ತ ತಿರುಗಿ ನೋಡುತ್ತಿಲ್ಲ ಎಂದು ದೂರಿದರು.ಇದೇ ವೇಳೆ ಕಾಂಗ್ರೆಸ್ ಮತ್ತು ಬಿ.ಜೆ.ಪಿ ತೊರೆದು 50ಕ್ಕೂ ಹೆಚ್ಚು ಗ್ರಾಮಸ್ಥರು ಜೆ.ಡಿ.ಎಸ್. ಪಕ್ಷಕ್ಕೆ ಸೇರ್ಪಡೆಗೊಂಡರು, ಹಾರಹಾಕಿ ಪಕ್ಷದ ಬಾವುಟ ನೀಡಿ ಸ್ವಾಗತಿಸಲಾಯಿತು.ಮುಖಂಡರಾದ ಬಸವರಾಜು, ಗಿಡ್ಡಪ್ಪ, ಕುಮಾರ್, ಪದ್ಮಾವತಿ, ಜೆ.ಡಿ.ಎಸ್. ಮುಖಂಡ ಸುನೀಲ್ ಜೋಶಿ, ಮೂಡಿಗೆರೆ ತಾಲ್ಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಝಕಾರಿಯಾ ಜಾಕೀರ್ ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin