ಜೆಡಿಎಸ್ ಅಧಿಕಾರಕ್ಕೆ ಬಂದರೆ 24 ತಾಸುಗಳಲ್ಲಿ ರೈತರ ಸಾಲಮನ್ನಾ : ಕುಮಾರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

HDK
ರಾಯಚೂರು, ಮೇ 17- ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪುನರುಚ್ಚರಿಸಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಸಾಲಮನ್ನಾ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಟವಾಡುತ್ತಿವೆ. ಪಕ್ಷ ಅಧಿಕಾರಕ್ಕೆ ಬಂದರೆ ಜನರಿಗೆ ಹೊರೆಯಾಗದಂತೆ ಸಾಲ ಮನ್ನಾ ಮಾಡಲಾಗುವುದು ಎಂದು ಹೇಳಿದರು.  ಮೂರು ವರ್ಷಗಳಿಂದ ರಾಜ್ಯದಲ್ಲಿ ತೀವ್ರ ಬರಗಾಲವಿದೆ. ರೈತರ ಬೆಳೆ ನಷ್ಟದ ಪ್ರಮಾಣ 65 ಸಾವಿರದಷ್ಟು ಹೆಚ್ಚಾಗಿದೆ. ರೈತರಿಗೆ ಬರ ಪರಿಹಾರ ನೀಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಮಾಜಿ ಸಚಿವ ಎಚ್.ವಿಶ್ವನಾಥ್ ಅವರು ಜೆಡಿಎಸ್‍ಗೆ ಬರುವುದಕ್ಕೆ ತೀರ್ಮಾನಿಸಿದ್ದಾರೆ. ಪಕ್ಷಕ್ಕೆ ಬಂದರೆ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಲಾಗುವುದು ಎಂದರು.ಜೆಡಿಎಸ್ ಪಕ್ಷವನ್ನು ಅಪ್ಪ-ಮಕ್ಕಳ ಪಕ್ಷ ಎಂದು ಎಲ್ಲರೂ ಟೀಕೆ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಂಗ್ರೆಸ್ ವರಿಷ್ಠರನ್ನು ಟೀಕೆ ಮಾಡಿದ್ದರು. ಈಗ ಕಾಂಗ್ರೆಸ್‍ಗೆ ಹೋಗಿ ಮುಖ್ಯಮಂತ್ರಿಯಾಗಿದ್ದಾರೆ ಎಂದು ವ್ಯಂಗ್ಯವಾಡಿದರು.  ರಾಜ್ಯ ಸರ್ಕಾರವು ಹಣ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದರ ಬಗ್ಗೆ ಪ್ರಕರಣ ದಾಖಲಿಸಿದರೆ ಮುಚ್ಚಿಹಾಕುತ್ತಾರೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಇಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಂತಕಲ್ ಮೈನಿಂಗ್ ಪ್ರಕರಣ ಸಂಬಂಧ ಈಗಾಗಲೇ ಮೂರು ಬಾರಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದೇನೆ. ಮತ್ತೊಂದು ಬಾರಿ ಜಾಮೀನಿಗೆ ಅರ್ಜಿ ಹಾಕುತ್ತೇನೆ. ಪ್ರಕರಣ ಸಂಬಂಧ ಯಾವುದೇ ತನಿಖೆಗೂ ಸಿದ್ಧ. ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಮೇಲೆ ಒತ್ತಡ ತಂದಿದ್ದಾರೆ, ಈ ಬಗ್ಗೆ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತರಬೇಕಿತ್ತು ಎಂದು ಹೇಳಿದ್ದಾರೆ.  ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ದುರ್ಬಳಕೆ ಮಾಡಿಕೊಳ್ಳುತ್ತಿದೆ. ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ಸಿಎಂ ಸಿದ್ದರಾಮಯ್ಯನವರು ಬರ ಪ್ರವಾಸ ಮಾಡುವಲ್ಲಿ ವಿಫಲವಾಗಿದ್ದಾರೆ ಎಂದು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin