ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಶೂನ್ಯ ಮಾಸ ಅಡ್ಡಿ, ಸಂಕ್ರಾಂತಿಗೆ ಮೊದಲ ಪಟ್ಟಿ ಪ್ರಕಟ

ಈ ಸುದ್ದಿಯನ್ನು ಶೇರ್ ಮಾಡಿ

JDS--01

ಬೆಂಗಳೂರು, ಡಿ.24-ಮುಂಬರುವ ವಿಧಾನಸಭೆ ಚುನಾವಣೆಯ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ಶೂನ್ಯ ಮಾಸ ಅಡ್ಡಿಯಾಗಿದೆ. ಜೆಡಿಎಸ್ ವರಿಷ್ಠರು 130 ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಅಂತಿಮಗೊಳಿಸಿದ್ದರು. ಅಧಿಕೃತವಾಗಿ ಬಿಡುಗಡೆ ಮಾಡುವುದನ್ನು ಮುಂದೂಡುತ್ತಲೇ ಬಂದಿದ್ದಾರೆ. ಕಳೆದ ಒಂದು ವರ್ಷದಿಂದಲೂ ಪಟ್ಟಿ ಬಿಡುಗಡೆ ದಿನಾಂಕ ಮುಂದೂಡುತ್ತಲೇ ಇದ್ದು ಮಕರ ಸಂಕ್ರಾಂತಿಯ ನಂತರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ ಎಂದು ಜೆಡಿಎಸ್‍ನ ಉನ್ನತ ಮೂಲಗಳು ತಿಳಿಸಿವೆ.

2018ರ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಜೆಡಿಎಸ್ ವರಿಷ್ಠರು ಈಗಾಗಲೇ ಎಲ್ಲ ರೀತಿಯ ಚುನಾವಣಾ ಸಿದ್ಧತೆಗಳನ್ನು ಕೈಗೊಂಡಿದ್ದಾರೆ. ಪ್ರಾದೇಶಿಕ ಜಾತಿವಾರು ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆಯನ್ನು ಮಾಡಿರುವುದರ ಜೊತೆಗೆ ಗೆಲ್ಲುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.  ಬೆಂಗಳೂರು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಜೆಡಿಎಸ್ ಟಿಕೆಟ್ ಪಡೆಯಲು ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು , ಭಿನ್ನಮತ ಉಂಟಾಗದಂತೆ ಸರ್ವಸಮ್ಮತ ಅಭ್ಯರ್ಥಿ ಆಯ್ಕೆ ಮಾಡುವ ಕಸರತ್ತು ನಿರಂತರವಾಗಿ ನಡೆಯುತ್ತಿದೆ. ಇದು ಕೂಡ ಪಟ್ಟಿ ಬಿಡುಗಡೆ ವಿಳಂಬಕ್ಕೆ ಒಂದು ಪ್ರಮುಖ ಕಾರಣವಾಗಿದೆ. ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ ಸೇರಿದಂತೆ ವಿಧಾನಸಭಾ ವಾರು ಸಭೆಗಳನ್ನು ನಡೆಸುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿದ್ದಾರೆ.

ಬೆಂಗಳೂರು, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿ ವಿಧಾನಸಭಾ ಕ್ಷೇತ್ರವಾರು ಸಭೆ ನಡೆಸಿ ಸರ್ವ ಸಮ್ಮತ ಅಭ್ಯರ್ಥಿ ಆಯ್ಕೆ ಮಾಡುವ ಪ್ರಯತ್ನ ಮಾಡಿದ್ದಾರೆ. ಇತ್ತೀಚೆಗೆ ನಡೆದ ಪಕ್ಷದ ಕೋರ್ ಕಮಿಟಿ ಸಭೆ ಹಾಗೂ ಶಾಸಕಾಂಗ ಪಕ್ಷದ ಸಭೆಯಲ್ಲೂ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸಮಾಲೋಚನೆ ನಡೆಸಲಾಗಿದ್ದು, ರಾಷ್ಟ್ರೀಯ ಪಕ್ಷಗಳ ಪಟ್ಟಿ ಬಿಡುಗಡೆವರೆಗೂ ಕಾಯದೆ ಮೊದಲ ಪಟ್ಟಿ ಬಿಡುಗಡೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.

ಸ್ವತಃ ಕುಮಾರಸ್ವಾಮಿ ಅವರೇ ಡಿಸೆಂಬರ್ ಅಂತ್ಯದೊಳಗೆ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಬಿಡುಗಡೆಗೆ ಎರಡು ದಿನಾಂಕಗಳು ನಿಗದಿಯಾಗಿ ಮುಂದೂಡಲ್ಪಟ್ಟಿವೆ. ರಾಷ್ಟ್ರೀಯ ಪಕ್ಷಗಳಿಗಿಂತ ಮುಂಚೆ ನಮ್ಮ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಧಾರ್ಮಿಕ ಆಚರಣೆ ಸಂಪ್ರದಾಯಗಳಲ್ಲಿ ನಂಬಿಕೆ ಇಟ್ಟಿರುವ ಜೆಡಿಎಸ್ ವರಿಷ್ಠರು ಶೂನ್ಯ ಮಾಸದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದು ಸಮಂಜಸವಲ್ಲ ಎಂದು ಪಟ್ಟಿ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದು, ಮಕರ ಸಂಕ್ರಾಂತಿ ಹಬ್ಬದ ನಂತರ ಮೊದಲ ಪಟ್ಟಿ ಬಿಡುಗಡೆಗೆ ನಿರ್ಧರಿಸಿದ್ದಾರೆ.

ಈಗಾಗಲೇ ಹಲವು ಆಕಾಂಕ್ಷಿಗಳಿಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಟಿಕೆಟ್ ನೀಡುವ ಖಾತ್ರಿ ನೀಡಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಚುನಾವಣೆ ಸಿದ್ದತೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಪಕ್ಷದ ಎಲ್ಲ 33 ಮಂದಿ ಶಾಸಕರಿಗೂ ಟಿಕೆಟ್ ನೀಡುವ ಖಾತ್ರಿ ಕೂಡ ನೀಡಲಾಗಿದೆ.

Facebook Comments

Sri Raghav

Admin