ಜೆಡಿಎಸ್-ಕಾಂಗ್ರೆಸ್‍ ದೋಸ್ತಿಯಲ್ಲಿ ಒಡಕು, ಬಿಬಿಎಂಪಿ ಸೂಪರ್ ಸೀಡ್..?

ಈ ಸುದ್ದಿಯನ್ನು ಶೇರ್ ಮಾಡಿ

BBMp--041

ಬೆಂಗಳೂರು, ಆ.8-ಮೇಯರ್ ಜಿ.ಪದ್ಮಾವತಿಯವರ ಅಧಿಕಾರಾವಧಿ ಸೆ.10ಕ್ಕೆ ಮುಗಿಯಲಿದ್ದು, ನೂತನ ಮೇಯರ್ ಆಯ್ಕೆಗೆ ಜಿಜ್ಞಾಸೆ ಎದುರಾಗಿದೆ. ಜೆಡಿಎಸ್-ಕಾಂಗ್ರೆಸ್‍ನ ದೋಸ್ತಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಹೊಸ ಮೇಯರ್ ಆಯ್ಕೆ ಆಗುವುದೇ ಅಥವಾ ಬಿಬಿಎಂಪಿಯನ್ನು ಸರ್ಕಾರ ಸೂಪರ್‍ಸೀಡ್ ಮಾಡುವುದೇ ಎಂಬ ಅನುಮಾನ ಉಂಟಾಗಿದೆ. ಜೆಡಿಎಸ್-ಕಾಂಗ್ರೆಸ್ ದೋಸ್ತಿಯೊಂದಿಗೆ ಎರಡು ವರ್ಷಗಳ ಕಾಲ ಬಿಬಿಎಂಪಿಯಲ್ಲಿ ಆಡಳಿತ ನಡೆಸಲಾಗಿದೆ. ಮೂರನೇ ವರ್ಷಕ್ಕೆ ಮೇಯರ್ ಆಯ್ಕೆ ಮಾಡಬೇಕಾಗಿದ್ದು, ಮೇಯರ್ ಆಯ್ಕೆ ಕಸರತ್ತು ಮುಂದುವರೆದಿರುವ ಬೆನ್ನಲ್ಲೇ ಮೈತ್ರಿಯಲ್ಲಿ ಮುನಿಸು ಉಂಟಾಗಿದೆ.

ಹಾಲಿ ಸ್ಥಾಯಿ ಸಮಿತಿಗಳ ಅಧಿಕಾರವನ್ನು ಸರ್ಕಾರ ಸಂಪೂರ್ಣವಾಗಿ ಕಸಿದುಕೊಂಡಿದೆ. ನಗರ ಯೋಜನೆ ಸ್ಥಾಯಿ ಸಮಿತಿ, ವಾರ್ಡ್ ಕಮಿಟಿ ಸ್ಥಾಯಿ ಸಮಿತಿ, ತೋಟಗಾರಿಕೆ ಸ್ಥಾಯಿ ಸಮಿತಿ ಸೇರಿದಂತೆ ಬಹುತೇಕ ಸ್ಥಾಯಿ ಸಮಿತಿಗಳ ಅಧಿಕಾರವನ್ನು ಮೊಟಕುಗೊಳಿಸಿ ಸರ್ಕಾರ ಉನ್ನತ ಮಟ್ಟದ ಸಮಿತಿಗೆ ವಹಿಸಿದೆ. ಯಾವುದೇ ಅಧಿಕಾರ ಸ್ಥಾಯಿ ಸಮಿತಿಗಳಿಗೆ ಇಲ್ಲದಂತಾಗಿದೆ. ಹಾಗಾಗಿ ಸ್ಥಾಯಿ ಸಮಿತಿ ಅಧ್ಯಕ್ಷರಾಗುವುದಕ್ಕೆ ಯಾರೂ ಮುಂದೆ ಬರುತ್ತಿಲ್ಲ. ಕಾಂಗ್ರೆಸ್-ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟರೆ ಮೇಯರ್ ಆಗಿ ಕಾಂಗ್ರೆಸ್, ಉಪಮೇಯರ್ ಆಗಿ ಜೆಡಿಎಸ್‍ನವರಾಗುತ್ತಾರೆ. ಉಳಿದಂತೆ ಜೆಡಿಎಸ್‍ನವರಿಗೆ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷ ಸ್ಥಾನ ನೀಡಲಾಗುತ್ತದೆ. ಆದರೆ ಸ್ಥಾಯಿ ಸಮಿತಿಗಳ ಪರಿಸ್ಥಿತಿ ಹಲ್ಲು ಕಿತ್ತ ಹಾವಿನಂತಾಗಿದೆ. ಯಾವುದೇ ಅಧಿಕಾರ ಸರ್ಕಾರ ಕೊಟ್ಟಿಲ್ಲ. ಹಾಗಾಗಿ ಮೈತ್ರಿ ಏರ್ಪಟ್ಟರೂ ಒಂದೇ, ಬಿಟ್ಟರೂ ಒಂದೇ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡುತ್ತಾರೆ. ಆದರೆ ಅಧಿಕಾರ ನೀಡುವುದಿಲ್ಲ. ಸರ್ಕಾರ 7300 ಕೋಟಿ ರೂ. ಅನುದಾನ ನೀಡಿದೆ. ಎಲ್ಲಾ ಕಾಮಗಾರಿಗಳ ಜವಾಬ್ದಾರಿಯನ್ನು ಹೈ ಪವರ್ ಕಮಿಟಿಗೆ ವಹಿಸಿದೆ. ಎಲ್ಲಾ ಸ್ಥಾಯಿ ಸಮಿತಿಗಳು ನಿಷ್ಕ್ರಿಯವಾಗಿದೆ. ಈ ಸಂಬಂಧ ಸರ್ಕಾರ ಜಾಣಕುರುಡು, ಕಿವುಡು ಪ್ರದರ್ಶಿಸುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ.  ಇತ್ತ ಬಿಜೆಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಎಂಎಲ್‍ಸಿಗಳ ವಿರುದ್ಧ ಪ್ರವಾಸ ಭತ್ಯೆ ಪಡೆದಿರುವ ದೂರು ನೀಡಿದ್ದಾರೆ. ಹಾಗಾಗಿ ಬಹುತೇಕ ಅವರು ಈ ಬಾರಿ ಮೇಯರ್ ಚುನಾವಣೆಯಲ್ಲಿ ಭಾಗವಹಿಸುವುದು ಅನುಮಾನ. ಇದು ಕೂಡ ಮೇಯರ್ ಆಯ್ಕೆಗೆ ತೊಡರುಗಾಲಾಗುತ್ತದೆ.

ಕಾಂಗ್ರೆಸ್ ಪಕ್ಷಕ್ಕೆ ಪ್ರಸ್ತುತ ಪರಿಸ್ಥಿತಿ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಮೇಯರ್ ಸ್ಥಾನ ಬಿಟ್ಟುಕೊಟ್ಟರೆ ಮುಖಭಂಗವಾಗುತ್ತದೆ. ಹಾಗಾಗಿ ಒಂದೇ ಕಲ್ಲಿನಲ್ಲಿ ಎರಡೆರಡು ಹಕ್ಕಿಗಳನ್ನು ಒಡೆಯುವ ತಂತ್ರಕ್ಕೆ ಮುಂದಾಗಿದೆ ಎಂದು ತಿಳಿದುಬಂದಿದೆ. ಸುಲಭವಾಗಿ ಅಧಿಕಾರ ಸಿಕ್ಕರೆ ಸಿಗಲಿ, ಇಲ್ಲದಿದ್ದರೆ ಬಿಬಿಎಂಪಿಯನ್ನು ಸೂಪರ್ ಸೀಡ್ ಮಾಡಿ ಆಡಳಿತಾಧಿಕಾರಿಯನ್ನು ನೇಮಕ ಮಾಡುವ ಇರಾದೆ ಸರ್ಕಾರಕ್ಕಿದೆ. ಈ ರೀತಿ ಮಾಡಲು ಮುಂದಾದರೆ ಎಲ್ಲ ಸದಸ್ಯರ ಅಧಿಕಾರ ಅಂತ್ಯವಾಗುತ್ತದೆ. ಇನ್ನೂ ಮೂರು ವರ್ಷಗಳು ಇರುವಂತೆಯೇ ಪಾಲಿಕೆ ಸದಸ್ಯರು ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ. ಬಹುಶಃ ಇದಕ್ಕೆ ಯಾರೂ ಮುಂದಾಗುವುದಿಲ್ಲ. ಬಿಬಿಎಂಪಿಯನ್ನು ವಿಭಜನೆ ಮಾಡಬೇಕೆಂಬ ತಂತ್ರಗಾರಿಕೆಯು ಸರ್ಕಾರದ ಮುಂದಿದೆ.

ಮೇಯರ್ ಚುನಾವಣೆಗೆ ಈ ಪರಿಸ್ಥಿತಿ ಅಡ್ಡಿಯಾದರೆ ಸೂಪರ್‍ಸೀಡ್/ವಿಭಜನೆ ದಾಳವನ್ನು ಸರ್ಕಾರ ಉರುಳಿಸುವ ಸಾಧ್ಯತೆ ಇದೆ. ಬಿಬಿಎಂಪಿ ವ್ಯಾಪ್ತಿಯ 8 ವಲಯವನ್ನು 10 ವಲಯವನ್ನಾಗಿ ಮಾಡಲಾಗಿತ್ತಾದರೂ ಆ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ವಲಯ ವಿಸ್ತರಣೆ ಕೈಗೆತ್ತಿಕೊಳ್ಳದಿರುವುದು ಜೆಡಿಎಸ್ ಪಕ್ಷದ ಮುನಿಸು, ಬಿಜೆಪಿಯವರ ಒತ್ತಡ ತಂತ್ರ ಹಾಗೂ ವಿಧಾನಪರಿಷತ್ ಸದಸ್ಯರ ಮೇಲೆ ನೀಡಿರುವ ದೂರು ಸೇರಿದಂತೆ ಹಲವು ತಾಂತ್ರಿಕ ಕಾರಣಗಳು ಹಾಗೂ ರಾಜಕೀಯ ಕಾರಣಗಳ ನಡುವೆ ಈ ಬಾರಿಯ ಮೇಯರ್ ಚುನಾವಣೆ ನಡೆಯುವುದೇ ಅನುಮಾನ ಎಂಬಂತಾಗಿದೆ. ಮೇಯರ್ ಚುನಾವಣೆ ನಡೆಯುವುದರ ಬಗ್ಗೆ ಜಿಜ್ಞಾಸೆ ಉಂಟಾಗಿದೆ. ಏನಾಗಲಿದೆ ಎಂಬುದಕ್ಕೆ ಸೆ.10ರವರೆಗೆ ಕಾದುನೋಡಬೇಕು.

Facebook Comments

Sri Raghav

Admin