ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ

ಈ ಸುದ್ದಿಯನ್ನು ಶೇರ್ ಮಾಡಿ

10

ಮುದ್ದೇಬಿಹಾಳ,ಜ.3- ತಾಲೂಕಿನ ತಾಳಿಕೋಟಿ ಎಪಿಎಂಸಿ ಚುನಾವಣೆಯಲ್ಲಿ ತಂಗಡಗಿ ಮತಕ್ಷೇತ್ರದಿಂದ ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರ ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳುವ ವಿಷಯವಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಬಿರುಸಿನ ವಾಗ್ವಾದ ನಡೆದ ಘಟನೆ ಇಲ್ಲಿನ ತಹಸೀಲ್ದಾರ್ ಕಛೇರಿಯಲ್ಲಿ ನಿನ್ನೆ ನಡೆದಿದೆ.ತಾಲೂಕಿನ ತಂಗಡಗಿ ಹಿಂದುಳಿದ ವರ್ಗ ಅ ಮೀಸಲಾತಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ಬಾಪುಗೌಡ ನಿಂಗನಗೌಡ ಪಾಟೀಲ ಉರ್ಫ ಬಿರಾದಾರ ಅವರು ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳಲು ತಮ್ಮ ಹಿಂಬಾಲಕರೊಂದಿಗೆ ತಹಸೀಲ್ದಾರ್ ಕಛೇರಿಗೆ ಆಗಮಿಸಿದ್ದರು. ಆಗ ಸಮಯ 3 ಗಂಟೆ ದಾಟಿತ್ತು.

ಈ ವೇಳೆ ಚುನಾವಣಾಧಿಕಾರಿಯೂ ಆಗಿರುವ ತಹಸೀಲ್ದಾರ್ ಎಂ.ಎಸ್. ಬಾಗವಾನ ಅವರ ಮೂಲಕ ತಮ್ಮ ಬೆಂಬಲಿಗರಿಂದ ದೂರವಾಣಿ ಕರೆ ಮಾಡಿಸಿದ ಅಭ್ಯರ್ಥಿ ಬಾಪುಗೌಡ ಪಾಟೀಲ ಅವರು, ತಾವು ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳುವುದಾಗಿ ಹೇಳಿದ್ದಾರೆ. ಆದರೆ ತಹಸೀಲ್ದಾರ್ ಇದಕ್ಕೊಪ್ಪದೇ ಅಭ್ಯರ್ಥಿ ಅಥವಾ ಸೂಚಕರು ಬಂದು ಖುದ್ದಾಗಿ ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.  ತಮ್ಮ ತಮ್ಮ ಅಭ್ಯರ್ಥಿಗಳ ನಾಮಪತ್ರಗಳನ್ನು ಹಿಂದಕ್ಕೆ ಪಡೆಯದಂತೆ ನೋಡಿಕೊಳ್ಳುವ ಸಲುವಾಗಿ ಜೆಡಿಎಸ್ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ, ಶಾಂತಗೌಡ ಮಂಗ್ಯಾಳ ಹಾಗೂ ಕಾಂಗ್ರೆಸ್ ಮುಖಂಡ ಹಾಲಿ ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಎನ್.ಎಸ್. ದೇಶಮುಖ ಕುಂಚಗನೂರ, ಬ್ಲಾಕ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಗುರು ತಾರನಾಳ, ವೈ.ಎಚ್. ವಿಜಯಕರ್, ಬಿ.ಎಸ್.ಶಿರೋಳ ಮತ್ತಿತರರು ತಹಸೀಲ್ದಾರ್‍ರ ಕಛೇರಿಯಲ್ಲಿದ್ದರು.

ಆಗ ಕಾಂಗ್ರೆಸ್ ಮುಖಂಡರ ಬೆಂಬಲದೊಂದಿಗೆ ಆಗಮಿಸಿದ ನೆಬಗೇರಿ ಗ್ರಾಮದ ಬಾಪುಗೌಡ ನಿಂಗನಗೌಡ ಪಾಟೀಲ ಅವರನ್ನು ಮಧ್ಯದಲ್ಲಿಯೇ ಜೆಡಿಎಸ್ ಕಾರ್ಯಕರ್ತರು ತಡೆದು ಚುನಾವಣಾ ಕೇಂದ್ರದೊಳಕ್ಕೆ ಹೋಗದಂತೆ ತಡೆಯೊಡ್ಡಿದರು. ಆಗ ಕಾಂಗ್ರೆಸ್ ಮುಖಂಡರು ಜೆಡಿಎಸ್ ಕಾರ್ಯಕರ್ತರೊಂದಿಗೆ ತೀವ್ರ ವಾಗ್ವಾದ ನಡೆಸಿದರು.ತಹಸೀಲ್ದಾರ್ ಎಂ.ಎಸ್. ಬಾಗವಾನ ಅವರು, ತಂಗಡಗಿ ಮತಕ್ಷೇತ್ರದಿಂದ ಬಾಪುಗೌಡ ನಿಂಗನಗೌಡ ಪಾಟೀಲ ಹಾಗೂ ಬೀರಪ್ಪ ರಾಮಣ್ಣ ಯರಝರಿ ನಾಮಪತ್ರ ಸಲ್ಲಿಸಿದ್ದು ಇಬ್ಬರೂ ಕಣದಲ್ಲಿದ್ದಾರೆ ಎಂದು ತಿಳಿಸಿ ತಮ್ಮ ನಿತ್ಯದ ಕಛೇರಿಯ ಕಾರ್ಯನಿರ್ವಹಣೆಯಲ್ಲಿ ತೊಡಗಿದರು.ಇತ್ತ ನಾಮಪತ್ರ ಹಿಂಪಡೆಯುವ ಕೇಂದ್ರದಲ್ಲಿ ಸೇರಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳುವ ವಿಷಯವಾಗಿ ವಾಗ್ವಾದ ನಡೆಸಿದರು.

ಇದೇ ವೇಳೆ ಮಾತನಾಡಿದ ಎನ್.ಎಸ್. ದೇಶಮುಖ ಕುಂಚಗನೂರ ಅವರು, ಅಭ್ಯರ್ಥಿ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದರೂ ಅವರಿಗೆ ಬಲವಂತ ಯಾಕೆ ಮಾಡುತ್ತಿದ್ದೀರಿ ? ಇದು ಅವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಕಣದಿಂದ ಹಿಂದೆ ಸರಿಯುತ್ತಿದ್ದು ಅದಕ್ಕೆ ಅವಕಾಶ ಮಾಡಿಕೊಡಿ ಎಂದು ಹೇಳುತ್ತಿದ್ದಂತೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್‍ನ ಶಾಂತಗೌಡ ಪಾಟೀಲ ನಡಹಳ್ಳಿ, ಗುರುನಾಥಗೌಡ ಬಿರಾದಾರ, ಶಾಂತಗೌಡ ಮಂಗ್ಯಾಳ ಅವರು, ಬಲವಂತವಾಗಿ ಅವರನ್ನು ಕರೆತಂದು ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳಲು ಒತ್ತಡ ಹೇರಲಾಗುತ್ತಿದೆ. ಸಮಯ ಮೀರಿದ ನಂತರ ನಾಮಪತ್ರ ಹಿಂದಕ್ಕೆ ಹೇಗೆ ಪಡೆದುಕೊಳ್ಳುತ್ತಾರೆ ? ಇಂತಹ ಒತ್ತಡದ ರಾಜಕಾರಣ ಬಿಡಿ ಎಂದು ಮಾರುತ್ತರ ನೀಡಿದರು.

ಇದಕ್ಕೆ ಆವೇಶ ಭರಿತವಾಗಿ ಪ್ರತ್ಯುತ್ತರ ಎನ್.ಎಸ್. ದೇಶಮುಖ ಮುಂದಾಗುತ್ತಿದ್ದಂತೆ ಅವರನ್ನು ಕಾಂಗ್ರೆಸ್ ಕಾರ್ಯಾಧ್ಯಕ್ಷ ಗುರು ತಾರನಾಳ ಮಧ್ಯೆದಲ್ಲಿಯೇ ತಡೆದರು.ಈ ಸಂದರ್ಭದಲ್ಲಿ ಹಿರಿಯ ರಾಜಕೀಯ ಧುರೀಣರೂ ಆಗಿದ್ದು ಎನ್.ಎಸ್. ದೇಶಮುಖ ಅವರಿಗೆ ಜೆಡಿಎಸ್ ಕಾರ್ಯಕರ್ತರೊಬ್ಬರು ಆಡಿದ ಮಾತು ಕಾಂಗ್ರೆಸ್ ಮುಖಂಡರನ್ನು ಕೆರಳಿಸಿತು. ಆಗ ಜೆಡಿಎಸ್ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು. ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳುವ ದಿನವಾಗಿದ್ದರೂ ಘಟನಾ ಸ್ಥಳದಲ್ಲಿ ಯಾವೊಬ್ಬ ಪೊಲೀಸ ಪೇದೆಯೂ ಇರಲಿಲ್ಲ. ಗದ್ದಲ ನಡೆಯುತ್ತಿದ್ದರೂ ಪೊಲೀಸರು ಕಡೆಯವರೆಗೂ ತಹಸೀಲ್ದಾರ ಕಛೇರಿಯತ್ತ ಸುಳಿಯಲಿಲ್ಲ.

 34 ಅಭ್ಯರ್ಥಿಗಳು ಕಣದಲ್ಲಿ
ಎಪಿಎಂಸಿ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದು 12 ಸ್ಥಾನಗಳಿಗೆ ಒಟ್ಟು 34 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಎಸ್.ಬಾಗವಾನ ತಿಳಿಸಿದ್ದಾರೆ.ಈ ಕುರಿತು ಮಾಹಿತಿ ನೀಡಿದ ಅವರು, ನಾಲತವಾಡದಲ್ಲಿ ನಾಲ್ವರು, ಮುದ್ದೇಬಿಹಾಳ, ಕುಂಟೋಜಿ, ಢವಳಗಿ, ಬಳಗಾನೂರ, ಮಿಣಜಗಿ, ತಾಳಿಕೋಟಿ, ತುಂಬಗಿ, ಕಾಳಗಿ ಕ್ಷೇತ್ರಗಳಲ್ಲಿ ತಲಾ ಮೂವರು, ಆಲೂರ, ತಂಗಡಗಿ ಹಾಗೂ ವರ್ತಕರ ಮತಕ್ಷೇತ್ರದಲ್ಲಿ ತಲಾ ಇಬ್ಬರು ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ ಎಂದು ಹೇಳಿದರು.

ಕಣದಿಂದ ನಿವೃತ್ತಿ ಘೋಷಣೆ
ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳಲು ಆಗಮಿಸಿ ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳಲಾಗದೇ ಆಗಮಿಸಿದ ತಂಗಡಗಿ ಕ್ಷೇತ್ರದ ಅಭ್ಯರ್ಥಿ ಬಾಪುಗೌಡ ನಿಂಗನಗೌಡ ಪಾಟೀಲ ಉರ್ಫ ಬಿರಾದಾರ ಅವರು ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅನಾರೋಗ್ಯದ ಕಾರಣ ತಾವು ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಿ ಅದೇ ಕ್ಷೇತ್ರದಿಂದ ಸ್ಪರ್ಧಿಸಿರುವ ಬೀರಪ್ಪ ರಾಮಣ್ಣ ಯರಝರಿ ಅವರಿಗೆ ಬೆಂಬಲ ಸೂಚಿಸುತ್ತಿರುವುದಾಗಿ ಹೇಳಿದರು.ಈ ಸಂದರ್ಭದಲ್ಲಿ ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಎಸ್.ದೇಶಮುಖ,ಬ್ಲಾಕ್ ಕಾಂಗ್ರೇಸ್ ಕಾರ್ಯಾಧ್ಯಕ್ಷ ಗುರು ತಾರನಾಳ,ವೈ.ಎಚ್. ವಿಜಯಶಂಕರ್,ಬಿ.ಎಸ್.ಶಿರೋಳ ಮತ್ತಿತರರು ಇದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin