ಜೆಡಿಎಸ್ ಗೆ ‘ಕೈ’ ಕೊಟ್ಟ ಪುಟ್ಟಣ್ಣ ಬಿಜೆಪಿಯತ್ತ

ಈ ಸುದ್ದಿಯನ್ನು ಶೇರ್ ಮಾಡಿ

JDS-Puttanna--01

ಬೆಂಗಳೂರು, ಅ.7-ವಿಧಾನಪರಿಷತ್ ಸದಸ್ಯ ಜೆಡಿಎಸ್ ಹಿರಿಯ ಮುಖಂಡ ಪುಟ್ಟಣ್ಣ ಅವರು ಬಿಜೆಪಿಯತ್ತ ಮುಖ ಮಾಡಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಪುಟ್ಟಣ್ಣ ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ಜೆಡಿಎಸ್ ಭಿನ್ನಮತೀಯರಾದ ಚೆಲುವರಾಯಸ್ವಾಮಿ, ಜಮೀರ್ ಅಹಮದ್, ಬಾಲಕೃಷ್ಣ ಅವರ ಜೊತೆ ಗುರುತಿಸಿಕೊಂಡಿದ್ದ ಪುಟ್ಟಣ್ಣ ಕಾಂಗ್ರೆಸ್‍ಗೆ ಹೋಗಬಹುದು ಎಂಬ ನಿರೀಕ್ಷೆಯಿತ್ತು.

ಆದರೆ ಕಾಂಗ್ರೆಸ್‍ನಲ್ಲಿ ಭಿನ್ನಮತೀಯರಿಗೆ ಟಿಕೆಟ್ ನೀಡುವ ಬಗ್ಗೆ ಈವರೆಗೂ ಯಾವುದೇ ಭರವಸೆ ಸಿಕ್ಕಿಲ್ಲ. ಇನ್ನು ಪುಟ್ಟಣ್ಣ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವುದರಿಂದ ಅವರಿಗೂ ಕೂಡ ಟಿಕೆಟ್ ಕೊಡುವ ಬಗ್ಗೆ ಕಾಂಗ್ರೆಸ್ ನಾಯಕರಿಂದ ಯಾವ ಆಶ್ವಾಸನೆಯೂ ಬಂದಿಲ್ಲ. ಇದೆಲ್ಲವನ್ನು ಅಳೆದು ತೂಗಿರುವ ಪುಟ್ಟಣ್ಣ ಬಿಜೆಪಿಯಿಂದ ತಮ್ಮ 2ನೇ ರಾಜಕೀಯ ಇನ್ನಿಂಗ್ಸ್ ಆರಂಭಿಸಲು ಮುಂದಾಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈಗಾಗಲೇ ಪುಟ್ಟಣ್ಣ ಜೊತೆ ಬಿಜೆಪಿಯ ಪ್ರಭಾವಿ ಬೆಂಗಳೂರು ಮೂಲದ ಒಕ್ಕಲಿಗ ನಾಯಕರೊಬ್ಬರು ಮಾತುಕತೆ ನಡೆಸಿದ್ದಾರೆ. ಪಕ್ಷಕ್ಕೆ ಬರುವುದಾದರೆ ಸೂಕ್ತ ಸ್ಥಾನಮಾನ ಹಾಗೂ ತಾವು ಬಯಸುವ ಕ್ಷೇತ್ರದಿಂದಲೇ ಟಿಕೆಟ್ ನೀಡುವುದಾಗಿ ಆಶ್ವಾಸನೆ ನೀಡಿದ್ದಾರೆ.

ಯಶವಂತಪುರದಿಂದ ಟಿಕೆಟ್ ನೀಡುವುದಾದರೆ ತಾವು ಬಿಜೆಪಿ ಸೇರಲು ಸಿದ್ಧ ಎಂದು ಪುಟ್ಟಣ್ಣ ಹೇಳಿರುವುದಾಗಿ ತಿಳಿದುಬಂದಿದೆ.  ಮೂಲತಃ ಜೆಡಿಎಸ್‍ನಲ್ಲಿ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್‍ಗೆ ಆಯ್ಕೆಯಾಗುತ್ತಿದ್ದ ಪುಟ್ಟಣ್ಣ ಒಂದು ಕಾಲದಲ್ಲಿ ಮಾಜಿ ಮುಖ್ಯಮಂತ್ರಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.   ಜೆಡಿಎಸ್‍ನ 2ನೇ ಹಂತದ ನಾಯಕರಾಗಿದ್ದ ಅವರನ್ನು ವಿಧಾನಪರಿಷತ್‍ನಲ್ಲಿ ಉಪಸಭಾಪತಿಯನ್ನಾಗಿಯೂ ಮಾಡಲಾಗಿತ್ತು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕುಮಾರಸ್ವಾಮಿ ಹಾಗೂ ಅವರ ಆಪ್ತರ ನಡುವೆ ವೈಮನಸ್ಸು ಮೂಡಿದ ಕಾರಣ ಪಕ್ಷ ತೊರೆಯುವ ತೀರ್ಮಾನಕ್ಕೆ ಬಂದಿದ್ದರು.  ಪ್ರಾರಂಭದಲ್ಲಿ ಚಲುವರಾಯಸ್ವಾಮಿ ಜೊತೆ ಗುರುತಿಸಿಕೊಂಡಿದ್ದ ಅವರಿಗೆ ಪಕ್ಷದಲ್ಲಿ ಟಿಕೆಟ್ ಕೊಡುವ ಬಗ್ಗೆ ಕೆಲ ಸ್ಥಳೀಯ ನಾಯಕರು ಅಪಸ್ವರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಯಶವಂತಪುರ ಸ್ಪರ್ಧೆ:

ಮೂಲಗಳ ಪ್ರಕಾರ ಬಿಜೆಪಿ ಸೇರಲು ಮುಂದಾಗಿರುವ ಪುಟ್ಟಣ್ಣನವರಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯಶವಂತಪುರದಿಂದ ಬಹುತೇಕ ಟಿಕೆಟ್ ಸಿಗುವುದು ಖಚಿತವಾಗಿದೆ.  ಯಶವಂತಪುರದಲ್ಲಿ ಗಂಗಟ್ಕರ್ ಮತಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಪುಟ್ಟಣ್ಣ ಸ್ಪರ್ಧಿಸಿದರೆ ಸಹಜವಾಗಿ ಪಕ್ಷಕ್ಕೆ ಅನುಕೂಲವಾಗುವುದರ ಜೊತೆಗೆ ಹೆಚ್ಚುವರಿಯಾಗಿ ಒಂದು ಸ್ಥಾನವನ್ನು ಗೆಲ್ಲಬಹುದೆಂಬುದು ಕಮಲ ಪಾಳೆಯದ ಲೆಕ್ಕಾಚಾರ.  ಕಾಂಗ್ರೆಸ್‍ನ ಹಾಲಿ ಶಾಸಕ ಎಸ್.ಟಿ.ಸೋಮಶೇಖರ್ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಬಿಜೆಪಿಗೆ ಅನಿವಾರ್ಯವಾಗಿದೆ. ಈ ಹಿಂದೆ ಈ ಕ್ಷೇತ್ರದಿಂದ ಹಾಲಿ ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಕಣಕ್ಕಿಳಿಯುವ ಇಂಗಿತವನ್ನು ವ್ಯಕ್ತಪಡಿಸಿದ್ದರು.

ಆದರೆ ಹಾಲಿ ಸಂಸದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೊರತುಪಡಿಸಿದರೆ ಬೇರೆ ಯಾವುದೇ ಸಂಸದರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬಾರದೆಂದು ಹೈಕಮಾಂಡ್ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದರಿಂದ ಶೋಭಾ ಆಸೆಗೆ ತಣ್ಣೀರು ಎರಚಲಾಗಿತ್ತು.  ಹೀಗಾಗಿ ಯಶವಂತಪುರ ಕ್ಷೇತ್ರದಿಂದ ಪುಟ್ಟಣ್ಣ ಅವರನ್ನು ಪಕ್ಷಕ್ಕೆ ಕರೆತಂದು ಸೋಮಶೇಖರ್‍ಗೆ ಪ್ರಬಲ ಸ್ಪರ್ಧೆವೊಡ್ಡಲು ಬಿಜೆಪಿ ರಣತಂತ್ರ ರೂಪಿಸಿದೆ.   ಸದ್ಯದಲ್ಲೇ ಅವರು ಯಡಿಯೂರಪ್ಪ ಸಮ್ಮುಖದಲ್ಲಿ ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್‍ಗೆ ವಿದಾಯ ಹೇಳಿ ಕಮಲ ಮುಡಿಯಲಿದ್ದಾರೆ.

Facebook Comments

Sri Raghav

Admin