ಜೆಡಿಎಸ್ ನೂತನ ಕಚೇರಿ ಜೆ.ಪಿ. ಭವನ ಉದ್ಘಾಟನೆ
ಬೆಂಗಳೂರು, ಮಾ.15-ಜಾತ್ಯಾತೀತ ಜನತಾದಳದ ನೂತನ ಕಚೇರಿ ಜೆ.ಪಿ.ಭವನ ಇಂದು ವಿಧ್ಯುಕ್ತವಾಗಿ ಉದ್ಘಾಟನೆಗೊಂಡಿತು. ಶೇಷಾದ್ರಿಪುರಂನಲ್ಲಿ ನೂತನವಾಗಿ ನಿರ್ಮಿಸಿರುವ ಜಯಪ್ರಕಾಶ್ ನಾರಾಯಣ್ ಭವನಕ್ಕೆ ಇಂದು ಬೆಳಗ್ಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು, ಪತ್ನಿ ಚೆನ್ನಮ್ಮ ದೇವೇಗೌಡರು, ಪುತ್ರ ಮಾಜಿ ಸಚಿವ ಎಚ್.ಡಿ.ರೇವಣ್ಣ ಗೋಪೂಜೆ ನೆರವೇರಿಸಿ ನೂತನ ಕಟ್ಟಡದ ಪ್ರವೇಶ ಮಾಡಿದರು. ಮೂಲಸಂಪ್ರದಾಯದಂತೆ ಹಾಲು ಉಕ್ಕಿಸಿ, ಇತರೆ ಎಲ್ಲಾ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ನಮ್ಮ ಪಕ್ಷಕ್ಕೆ ಕಚೇರಿ ಇರಲಿಲ್ಲ. ಇಂದು ಅಧಿಕೃತವಾಗಿ ಕಚೇರಿ ಆರಂಭಗೊಂಡಿದೆ. ಜನರ ಸಮಸ್ಯೆ ಬಗೆಹರಿಸಲು ಈ ಕಚೇರಿ ನಾಂದಿ ಹಾಡಲಿದೆ ಎಂದು ತಿಳಿಸಿದರು. ಮಾ.15ರಂದೇ ದೇವೇಗೌಡರು ಮೊದಲ ಬಾರಿ ಶಾಸಕರಾದ ದಿನ. ಅದೇ ದಿನ ಜೆಡಿಎಸ್ನ ಅಧಿಕೃತ ಕಚೇರಿ ಆರಂಭಗೊಳ್ಳುತ್ತಿದೆ. ಇದು ಕಾಕತಾಳೀಯ. ಆದರೆ ನಮಗೆಲ್ಲ ಸಂತಸ ತಂದಿದೆ ಎಂದು ತಿಳಿಸಿದರು.
ಇಂದು ಸಂಜೆ ನೂತನ ಕಟ್ಟಡದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ದೇವೇಗೌಡರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ನಂಜನಗೂಡು-ಗುಂಡ್ಲುಪೇಟೆ ಉಪಚುನಾವಣೆ ಹಿನ್ನೆಲೆಯಲ್ಲಿ ಇದೊಂದು ಮಹತ್ವದ ಸಭೆಯಾಗಲಿದ್ದು, ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದರು. ಈ ಜಾಗ ಕಚೇರಿ ನಿರ್ಮಾಣಕ್ಕೆ ಸಿಗಬಾರದೆಂದು ಸಾಕಷ್ಟು ಜನ ಪ್ರಯತ್ನಿಸಿದ್ದರು. ಈ ಜಾಗ ಸಿಗಲು ಕಾರಣರಾದವರಿಗೆ ಹಾಗೂ ನಿರ್ಮಾಣಕ್ಕೆ ಸಹಕರಿಸಿದವರಿಗ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಕಚೇರಿ ಕಾರ್ಯ ಸುಸೂತ್ರವಾಗಿ ನಡೆಸಲಾಗುವುದು. ತಾವು ಬೆಂಗಳೂರಿನಲ್ಲಿರುವ ದಿನಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 3 ಗಂಟೆವರೆಗೆ ಕಚೇರಿಯಲ್ಲಿದ್ದು, ಪಕ್ಷದ ಕಾರ್ಯಕರ್ತರು, ಜನರ ಸಮಸ್ಯೆ ಆಲಿಸಲಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದರು. ನಮ್ಮ ಪಕ್ಷಕ್ಕೆ ಒಂದು ಕಚೇರಿ ಅಗತ್ಯವಿತ್ತು. ಮುಂಬರುವ ಚುನಾವಣಾ ಕಾರ್ಯಕ್ಕೆ ಇದರಿಂದ ಹೆಚ್ಚಿನ ನೆರವಾಗಲಿದೆ. ಶೃಂಗೇರಿ ಗುರುಗಳ ಆಶೀರ್ವಾದದೊಂದಿಗೆ ಅಲ್ಲಿನ ಪುರೋಹಿತರ ನೇತೃತ್ವದಲ್ಲೇ ಶಾಸ್ತ್ರೋಕ್ತವಾಗಿ ಕಟ್ಟಡದ ಉದ್ಘಾಟನೆ ನೆರವೇರಿದೆ. ನಾಳೆಯಿಂದಲೇ ಕಾರ್ಯಾರಂಭ ಮಾಡಲಿರುವ ಕಚೇರಿ ಅಹವಾಲು ಸ್ವೀಕರಿಸಲು ಸಿದ್ಧವಿದೆ ಎಂದರು.
ಸಮಾರಂಭದಲ್ಲಿ ಅನಿತಾ ಕುಮಾರಸ್ವಾಮಿ, ಶಾಸಕ ಗೋಪಾಲಯ್ಯ, ಉಪಮೇಯರ್ ಆನಂದ್, ಮಾಜಿ ಉಪಮೇಯರ್ ಹೇಮಲತಾಗೋಪಾಲಯ್ಯ, ಬೆಂಗಳೂರು ನಗರ ಘಟಕದ ಅಧ್ಯಕ್ಷ ಪ್ರಕಾಶ್ ಸೇರಿದಂತೆ ಎಲ್ಲಾ ಶಾಸಕರು, ಸದಸ್ಯರು, ಕಾರ್ಯಕರ್ತರು, ಹಿತೈಷಿಗಳು, ಆಪ್ತರು ಪಾಲ್ಗೊಂಡಿದ್ದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS