ಜೆಡಿಎಸ್ ಪಕ್ಷ ಸಂಘಟನೆಗಾಗಿ 4 ಟೀಮ್ ಗಳು ರೆಡಿ

ಈ ಸುದ್ದಿಯನ್ನು ಶೇರ್ ಮಾಡಿ

NJD-MEet
ಬೆಂಗಳೂರು, ಡಿ.13- ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ಕೋರ್ ಕಮಿಟಿಯ ಎಲ್ಲಾ 12 ಮಂದಿ ಸದಸ್ಯರುಗಳಿಗೆ ಜವಾಬ್ದಾರಿ ನೀಡಲಾಗಿದ್ದು, ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿವಾಸದಲ್ಲಿ ಇಂದು ನಡೆದ ಮೊದಲ ಕೋರ್ ಕಮಿಟಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಅಧ್ಯಕ್ಷತೆಯ ಮೊದಲ ಕೋರ್ ಕಮಿಟಿ ಸಭೆ ನಡೆಸಲಾಗಿದೆ. ನೂತನವಾಗಿ ರಚಿಸಿರುವ ತಂಡಗಳು ಜಿಲ್ಲೆಗಳ ಪ್ರವಾಸ ಮಾಡಿ 10 ದಿನದಲ್ಲಿ ವರದಿ ನೀಡಲಿದ್ದಾರೆ ಎಂದರು.

ಶಾಸಕರಾದ ಮಧು ಬಂಗಾರಪ್ಪ ನೇತೃತ್ವದ ತಂಡದಲ್ಲಿ ಬಿ.ಬಿ.ನಿಂಗಯ್ಯ, ಶಾರದಾ ಪೂರ್ಯ ನಾಯಕ್ ಹಾಗೂ ಪಕ್ಷದ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಕ್ ಅವರಿದ್ದಾರೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ತಂಡವು ಪ್ರವಾಸ ಕೈಗೊಂಡು ಪಕ್ಷ ಸಂಘಟನೆ ಕಾರ್ಯ ಕೈಗೊಳ್ಳಲಿದೆ ಎಂದರು. ಶ್ರೀಮಂತ್ ಪಾಟೀಲ್ ನೇತೃತ್ವದ ತಂಡದಲ್ಲಿ ಮಾಜಿ ಸಚಿವ ಆಲ್ಕೋಡ್ ಹನುಮಂತಪ್ಪ ಹಾಗೂ ಸ್ಥಳೀಯ ಶಾಸಕರಿದ್ದು , ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಹೊಣೆಗಾರಿಕೆಯನ್ನು ನೀಡಲಾಗಿದೆ. ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್ ನೇತೃತ್ವದ ತಂಡವು ಕಲ್ಬುರ್ಗಿ, ಬೀದರ್, ಕೊಪ್ಪಳ, ರಾಯಚೂರು ಜಿಲ್ಲೆಗಳ ಉಸ್ತುವಾರಿಯನ್ನು ವಹಿಸಿಕೊಂಡಿದೆ. ಮಾಜಿ ಸಚಿವ ಜಿ.ಟಿ.ದೇವೇಗೌಡ ನೇತೃತ್ವದ ತಂಡವು ಮೈಸೂರು , ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಜಿಲ್ಲೆಗಳ ಹೊಣೆ ಹೊತ್ತಿದೆ.

ಡಿಸೆಂಬರ್ 24ರೊಳಗೆ ಆಯಾ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಜನರ ಸಮಸ್ಯೆಗಳ ಬಗ್ಗೆ ಹಾಗೂ ಪಕ್ಷ ಸಂಘಟನೆ ಬಗ್ಗೆ ಮಾಹಿತಿ ಸಂಗ್ರಹ ಮಾಡಲಿದ್ದಾರೆ. ಬೆಂಗಳೂರು ನಗರದ ಉಸ್ತುವಾರಿಯನ್ನು ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಅವರಿಗೆ ನೀಡಲಾಗಿದೆ ಎಂದರು. ಈ ನಾಲ್ಕೂ ತಂಡಗಳಿಗೂ ಆಯಾ ಭಾಗದ ಶಾಸಕರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗುತ್ತದೆ. ಅಲ್ಲದೆ ಪಕ್ಷದಲ್ಲಿ 10 ಮಂದಿ ಪ್ರಧಾನ ಕಾರ್ಯದರ್ಶಿಗಳು, 10 ಮಂದಿ ಜಂಟಿ ಕಾರ್ಯದರ್ಶಿಗಳು , 10 ಮಂದಿ ಕಾರ್ಯದರ್ಶಿಗಳು ಹಾಗೂ ಮೂವರು ಉಪಾಧ್ಯಕ್ಷರು ಮತ್ತು ಒಬ್ಬ ಹಿರಿಯ ಉಪಾಧ್ಯಕ್ಷರನ್ನು ನೇಮಕ ಮಾಡಲಾಗುವುದು.

ಒಬ್ಬರು ಖಜಾಂಚಿ ಹಾಗೂ ಒಬ್ಬ ಗೌರವ ಅಧ್ಯಕ್ಷರನ್ನು ನೇಮಕ ಮಾಡುವ ಮೂಲಕ ಪದಾಧಿಕಾರಿಗಳ ನೇಮಕ ಮಾಡಲು ತೀರ್ಮಾನಿಸಲಾಗಿದೆ. ಡಿ.24ರೊಳಗೆ ಪದಾಧಿಕಾರಿಗಳ ನೇಮಕ ಪೂರ್ಣಗೊಳ್ಳಲಿದೆ. ಜನವರಿಯಲ್ಲಿ ದಲಿತ ಮಹಿಳೆಯರ ಮತ್ತು ಹಿಂದುಳಿದ ವರ್ಗಗಳ ಸಮಾವೇಶವನ್ನು ನಡೆಸಲು ತೀರ್ಮಾನಿಸಲಾಯಿತು ಎಂದು ಕೋರ್ ಕಮಿಟಿ ಸಭೆಯ ತೀರ್ಮಾನದ ಮಾಹಿತಿಯನ್ನು ನೀಡಿದರು. ಡಿಸೆಂಬರ್ 17 ಮತ್ತು 18ಕ್ಕೆ ಬೆಂಗಳೂರಿನ ಎಲ್ಲಾ 28 ವಿಧಾನಸಭಾ ಕ್ಷೇತ್ರದ ಕ್ಷೇತ್ರಗಳ ಸಭೆ ನಡೆಸಲಾಗುವುದು. ಡಿ.19ರಿಂದ 23ರವರೆಗೆ ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬಳ್ಳಾರಿ ಮತ್ತಿತರ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳುವುದಾಗಿ ಕುಮಾರಸ್ವಾಮಿ ತಿಳಿಸಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin