ಜೈನಕಾಶಿಯಲ್ಲಿ ಬಿಸಿಲು ಲೆಕ್ಕಿಸದೆ ಬಾಹುಬಲಿ ದರ್ಶನ ಪಡೆದ ಭಕ್ತರು

ಈ ಸುದ್ದಿಯನ್ನು ಶೇರ್ ಮಾಡಿ

Bahubali--01

ಶ್ರವಣಬೆಳಗೊಳ, ಫೆ.23- ಜೈನಕಾಶಿ ಶ್ರವಣಬೆಳಗೊಳದಲ್ಲಿ ಶ್ರೀ ಭಗವಾನ್ ಬಾಹುಬಲಿ ಸ್ವಾಮಿಗೆ ನಡೆಯುತ್ತಿರುವ 88ನೆ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಆರಂಭದಿಂದಲೂ ಪ್ರತಿನಿತ್ಯ 35 ರಿಂದ 40 ಸಾವಿರ ಜನ ಆಗಮಿಸುತ್ತಿದ್ದು, ಬಿಸಿಲನ್ನು ಲೆಕ್ಕಿಸದೆ ಸ್ವಾಮಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

26ರಂದು ಮಹಾಮಸ್ತಕಾಭಿಷೇಕ ಮಹೋತ್ಸವದ ಸಮಾರೋಪ ಸಭೆ ನಡೆಯಲಿದ್ದು, ನಂತರದ ದಿನಗಳಲ್ಲಿ ಎಂದಿನಂತೆಯೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನೀರಿಕ್ಷೆಯಿದೆ. ಸದ್ಯದ ಮಾಹಿತಿಯಂತೆ ಆಗಸ್ಟ್‍ವರೆಗೂ ಕ್ಷೇತ್ರದಲ್ಲಿ ಭಕ್ತರ ಆಗಮನ ಮುಂದುವರಿಯಲಿದೆ.ಪ್ರತಿನಿತ್ಯ ಸಂಚರಿಸುವ 12 ಸಾಮಾನ್ಯ ರೈಲುಗಳ ಜತೆಗೆ 12 ವಿಶೇಷ ರೈಲುಗಳು ಹಾಗೂ ಹೆಚ್ಚುವರಿಯಾಗಿ ನಿಯೋಜಿಸಿರುವ ಸಾರಿಗೆ ಬಸ್‍ಗಳು ವ್ಯವಸ್ಥಿತವಾಗಿ ಸಂಚರಿಸುತ್ತಿದ್ದು, ಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ.  ಫೆ. 26ರ ನಂತರವೂ ಈ ಎರಡು ವ್ಯವಸ್ಥೆಗಳು ಪ್ರವಾಸಿಗರ ಆಧಾರದ ಮೇಲೆ ಮುಂದುವರಿಯಲಿವೆ. ಎಲ್ಲರಿಗೂ ಸಕಲ ಸೌಕರ್ಯವನ್ನು ಮಠ ಹಾಗೂ ಸರ್ಕಾರದ ವತಿಯಿಂದ ಒದಗಿಸಲಾಗುತ್ತಿದೆ.

ಮಹಾಮಸ್ತಕಾಭಿಷೇಕ ಆರಂಭಗೊಂಡು ಮಧ್ಯಾಹ್ನದವರೆಗೆ ವಿವಿಧ ಬಗೆಯ ಅಭಿಷೇಕಗಳು ನಡೆದವು. ನಂತರ ಸಾರ್ವಜನಿಕರಿಗೆ ಅವಕಾಶ ನೀಡಿದ್ದು, ಬೆಳಗ್ಗೆಯಿಂದ ಮುಕ್ತಾಯದವರೆಗೂ ಸುಮಾರು 30 ರಿಂದ 35 ಸಾವಿರ ಭಕ್ತರು ವೀಕ್ಷಿಸಿದರು. ವಿಶೇಷ ಆಕರ್ಷಣೆ: ರಾಷ್ಟ್ರದ ವಿವಿಧ ಭಾಗಗಳಿಂದ ಭಕ್ತಾದಿಗಳು ಆಗಮಿಸಿ ಅತ್ಯಂತ ಉತ್ಸಾಹದಿಂದ ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಳ್ಳುತ್ತಿದ್ದು, ಶ್ರವಣಬೆಳಗೊಳದಲ್ಲಿ 20 ಭೋಜನಾಲಯಗಳನ್ನು ತೆರೆಯಲಾಗಿದೆ. ಆಗಮಿಸುವ ಯಾತ್ರಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ವಸ್ತು ಪ್ರದರ್ಶನ, ಫಲಪುಷ್ಪ ಪ್ರದರ್ಶನ, ವಿಂಧ್ಯಗಿರಿ ಬೆಟ್ಟ, ಚಂದ್ರಗಿರಿ ಬೆಟ್ಟ, ಹೆಲಿಟೂರಿಸಂ ಹಾಗು ಜನಿವಾರ ಕೆರೆಯಲ್ಲಿರುವ ಜಲಕ್ರೀಡೆಗಳು ಜನರನ್ನು ಆಕರ್ಷಿಸುತ್ತಿವೆ ಎಂದು ಮಹಾಮಸ್ತಕಾಭಿಷೇಕ ವಿಶೇಷಾಧಿಕಾರಿ ಬಿ.ಎನ್.ವರಪ್ರಸಾದ ರೆಡ್ಡಿ ತಿಳಿಸಿದರು.

Facebook Comments

Sri Raghav

Admin