ಜೈನ ಧರ್ಮ ಎಂದೂ ಯಾರಿಗೂ ನೋವು ಮಾಡಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

BELAGAVI-JAIN

ಬೆಳಗಾವಿ,ಸೆ.26- ಜೈನ ಧರ್ಮ ಎಂದೂ ಯಾರಿಗೂ ನೋವು ಮಾಡಿಲ್ಲ. ಪ್ರಾಚೀನ ಧರ್ಮವಾಗಿರುವ ಅದು ಗುಪ್ತಗಾಮಿನಿಯಂತೆ ಹರಿದುಕೊಂಡು ಬಂದಿದೆ ಎಂದು ಉಪನ್ಯಾಸಕ ಶ್ರೀಕಾಂತ ಶಾನವಾಡ ಹೇಳಿದರು.ನಿನ್ನೆ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ದಕ್ಷಿಣ ಕನ್ನಡ ದಿಗಂಬರ ಜೈನ ಮೈತ್ರಿಕೂಟದ 7ನೇ ವಾರ್ಷಿಕೋತ್ಸವದಲ್ಲಿ ಅವರು ಉಪನ್ಯಾಸ ನೀಡಿದರು.ನನ್ನ ಧರ್ಮ ಮಾತ್ರ ಬದುಕಬೇಕು ಎಂಬ ನಿಲುವು ಹೊಂದಿರದ ಜೈನ ಧರ್ಮ ಅನ್ಯ ಧರ್ಮವು ಇರಬೇಕು ಎಂಬ ಭಾವನೆ ಹೊಂದಿದೆ. ಜಗತ್ತಿ ನಲ್ಲಿಂದು ಧಾರ್ಮಿಕತೆ ಕಲುಷಿತಗೊಳ್ಳುತ್ತಿರುವ ಸಂದರ್ಭದಲ್ಲಿ ಜೈನ ಧರ್ಮದ ಸತ್ಯ, ಅಹಿಂಸೆ ಮುಂತಾದ ತತ್ವ  ಸಿದ್ಧಾಂತಗಳ ಪಾಲನೆ ಅತ್ಯಂತ ಅವಶ್ಯವಾಗಿದೆ ಎಂದು ಹೇಳಿದರು.

ಹರಪ್ಪ, ಮೊಹೆಂಜೋದಾರ, ಸಿಂಧೂ ನಾಗರಿಕತೆ ಸಂದರ್ಭದಲ್ಲಿ ಕಂಡು ಬಂದ ಅನೇಕ ಮುನಿಗಳ ಯೋಗ ಮುದ್ರೆಗಳನ್ನು ಗಮನಿಸಿದಾಗ ಆಗಲೂ ಜೈನ ಧರ್ಮ ಅಸ್ವಿತ್ವದಲ್ಲಿತ್ತು ಎಂಬ ಮಾಹಿತಿ ಇದೆ. 23 ತೀರ್ಥಂಕರರು ಜೈನ ಧರ್ಮವನ್ನು ಪೊಷಿಸಿದ್ದರೂ 24 ನೇ ತೀರ್ಥಂಕರರಾದ ಮಹಾವೀರರಿಂದ ಈ ಧರ್ಮ ಜಗತ್ತಿಗೆ ಪರಿಚಯಿಸಲ್ಪಟ್ಟಿತು, ಅಹಿಂಸಾ ತತ್ವದ ಮೂಲಕ ಜಗತ್ತಿಗೆ ಶ್ರೇಷ್ಠ ಧರ್ಮ ಎಂದು ಮಹಾವೀರರು ತೋರಿಸಿಕೊಟ್ಟರು ಎಂದರು.ಭಾರತದಲ್ಲಿಂದು ಸಹಬಾಳ್ವೆ, ಅಹಿಂಸೆ ಉಳಿದುಕೊಂಡು ಬಂದಿದ್ದರೆ ಅದಕ್ಕೆ ಜೈನ ಧರ್ಮದ ವಿಚಾರಧಾರೆಯೇ ಕಾರಣ. ಸ್ವಾತಂತ್ರ್ಯ ಹೋರಾಟದ ಕಾಲಕ್ಕೆ ಮಹಾತ್ಮ ಗಾಂಧೀಜಿ ಅಹಿಂಸಾ ತತ್ವದ ಮೂಲಕವೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು ಎಂದು ನೆನೆಪಿಸಿದರು.

ಪ್ರಪಂಚದಲ್ಲಿಂದು ಮಾನವರನ್ನು ಪ್ರಾಣಿಗಳಿಗಿಂತ ಕಡೆಯಾಗಿ ನೋಡುವ ವಾತಾವರಣ ಸೃಷ್ಟಿಯಾಗುತ್ತಿದ್ದು, ಹಿಂಸೆಯ ಮೇಲಾಟ ನಡೆದಿದೆ. ಇಂತಹ ಸಂದರ್ಭದಲ್ಲಿ ಎಲ್ಲದಕ್ಕೂ ಜೈನ ಧರ್ಮವೇ ಪರಿಹಾರವಾಗಿದೆ. ಈ ನೆಲೆದ ಧರ್ಮವಾಗಿರುವದರಿಂದ ಇದರ ಆದರ್ಶಗಳನ್ನು ಹಿರಿಯರು ತಿಳಿದುಕೊಂಡು ತಮ್ಮ ಮಕ್ಕಳಿಗೆ ಉತ್ತಮ ವಿಚಾರವನ್ನು ಮಾರ್ಗದರ್ಶನ ಮಾಡಬೇಕು ಎಂದರು.ಉತ್ತರ ಭಾರತದಲ್ಲಿ ಹುಟ್ಟಿ ಅಲ್ಲೆ ನೆಲೆಯೂರಿದ್ದ ಜೈನ ಧರ್ಮ 4 ನೇ ಶತಮಾನದಲ್ಲಿ ಚಂದ್ರಗುಪ್ತ ಮರ್ಯನ ನಂತರ ದಕ್ಷಿಣ ಭಾರತಕ್ಕೆ ಕಾಲಿಟ್ಟಿತು. ಹಲವು ಜೈನ ಮುನಿಗಳು ಶ್ರವಣಬೆಳಗೊಳಕ್ಕೆ ಆಗಮಿಸಿ ದಕ್ಷಿಣದಲ್ಲೂ ಜೈನ ಧರ್ಮ ಪ್ರಸಾರಕ್ಕೆ ಕಾರಣವಾದರು ಎಂದು ತಿಳಿಸಿದರು.

ಪತ್ರಕರ್ತ ಡಾ. ಸರಜೂ ಕಾಟ್ಕರ ಮಾತನಾಡಿ, ಜೈನ ಧರ್ಮಧ ಇತಿಹಾಸ ಸಿಂಧೂ ನಾಗರಿಕತೆಯ ಕಾಲದವರೆಗೂ ಹೋಗುತ್ತದೆ. ಭಾರತದಲ್ಲಿ ಈ ಧರ್ಮ ಈ ಹಿಂದೆ ದೊಡ್ಡ ಪ್ರಮಾಣದಲ್ಲಿ ಬೇರೂರಿತ್ತು. ಇಡೀ ದೇಶಾದ್ಯಂತ ವ್ಯಾಪಿಸಿತ್ತು. ಕನ್ನಡ ಸಾಹಿತ್ಯ ಆರಂಭವಾಗುವುದೇ ಜೈನ ಸಾಹಿತ್ಯದಿಂದ ಎಂದು ಹೇಳಿದರು.ಜತಿ, ಮತ ನೋಡದೆ ಇತರರನ್ನು ತಮ್ಮವರು ಎಂಬ ಗುಣ ಹೊಂದಿರುವ ಔದಾರ್ಯತೆ ಜೈನರಲ್ಲಿದೆ. ಜಗತ್ತಿನ ಅತ್ಯಂತ ಪ್ರಾಚೀನ ಧರ್ಮವಾಗಿರುವ ಬಗ್ಗೆ ಆಳವಾದ ಸಂಶೋಧನೆಗಳು ಇಂದು ನಡೆಯುತ್ತಿದ್ದು, ಪ್ರಾಚೀನ ನಾಗರಿಕತೆಯ ಅವಶೇಷಗಳಲ್ಲಿ ಜೈನರಿಗೆ ಸಂಬಂಧಿಸಿದ ಮಾಹಿತಿಗಳು ಕಂಡು ಬರುತ್ತಿದೆ ಎಂದು ತಿಳಿಸಿದರು.

ಉದ್ಘಾಟನೆ ನೆರವೇರಿಸಿ ಮಂಗಳೂರು ಭಾರತೀಯ ಜೈನ ಮಿಲನ್ ಉಪಾಧ್ಯಕ್ಷ ಪುಷ್ಪರಾಜ್ ಜೈನ ಮಾತನಾಡಿ, ಜೈನಧರ್ಮ ಶ್ರೇಷ್ಟ ಧರ್ಮ ವಿಶ್ವಕ್ಕೆ ಶಾಂತಿ ಸಂದೇಶವನ್ನು ಪ್ರಸರಿಸಿದ್ದು, ಬದುಕಿನ ಮೌಲ್ಯ   ಗಳನ್ನು ಪ್ರತಿಪಾದಿಸಿವೆ ಎಂದರು.ಉದ್ಯಮಿ ಜಗತ್ಪಾಲ ಅಜ್ರಿ ದಂಪತಿ, ದಕ್ಷಿಣ ಕನ್ನಡ ದಿಗಂಬರ ಜೈನ ಮೈತ್ರಿಕೂಟ ಸ್ಥಾಪಕ ಶಿರ್ಲಾಲು ಬಿ. ಗುಣಪಾಲ ಹೆಗ್ಡೆ, ಬೆಳಗಾವಿ ಘಟಕದ ಅಧ್ಯಕ್ಷ ಮಹಾವೀರ ಪೂವಣಿ, ಮುನಿರಾಜ ಜೈನ, ರಾಜವರ್ಮ ಜೈನ, ರಾಜವರ್ಮ ಹೆಗ್ಡೆ, ವೀರೇಂದ್ರ ಹೆಗ್ಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು.ಮಿಮಿಕ್ರಿ ಕಲಾವಿದ ಸುಳ್ಯದ ಪಟ್ಟಾಭಿರಾಮ ಅವರಿಂದ ಮಿಮಿಕ್ರಿ ನಡೆಯಿತು. ಕಲಾವಿದ ವಿಶಾಲ ರಾಜ್ ಅವರನ್ನು ಸನ್ಮಾನಿಸಲಾಯಿತು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನೆರವೆರಿತು. ಮಾಲ ಹೆಗ್ಡೆ, ಅರುಣಾ ಜೈನ ಪ್ರಾರ್ಥಿಸಿದರು, ಜಿನವಾಣಿ ಉಪಾಧ್ಯ, ವಂದಿಸಿದರು. ಪ್ರಾಚಾರ್ಯ ಎಂ. ಅಜಿತಕುಮಾರ ನಿರೂಪಿಸಿದರು.

 

► Follow us on –  Facebook / Twitter  / Google+

Facebook Comments

Sri Raghav

Admin