ಜೈಲಿನಿಂದ ಹೊರಬರುತ್ತಿದ್ದಂತೆ ಜಯಚಂದ್ರ ಸಿಬಿಐ ವಶಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Jayachandra-01

ಬೆಂಗಳೂರು, ಡಿ.16- ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಹೆದ್ದಾರಿ ಪ್ರಾಧಿಕಾರದ ಯೋಜನಾ ಮುಖ್ಯಾಧಿಕಾರಿ ಎಸ್.ಸಿ.ಜಯಚಂದ್ರ ಅವರನ್ನು ಹೆಚ್ಚಿನ ವಿಚಾರಣೆಗೆ ಸಿಬಿಐ ವಶಕ್ಕೆ ಪಡೆದಿದೆ. ಐಟಿ ಅಧಿಕಾರಿಗಳ ದಾಳಿ ವೇಳೆ ಹೊಸ 2000 ಮುಖಬೆಲೆಯ ನೋಟುಗಳು ಸೇರಿದಂತೆ 5.7 ಕೋಟಿ ಹಣ, ಕೆಜಿಗಟ್ಟಲೆ ಚಿನ್ನದ ಗಟ್ಟಿಗಳು, ನೂರಾರು ಕೋಟಿ ರೂ. ಆಸ್ತಿ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ಜಾರಿ ನಿರ್ದೇಶನಾಲಯದ ವಶದಲ್ಲಿದ್ದು, ನಿನ್ನೆ ವಿಶೇಷ ನ್ಯಾಯಾಲಯದಿಂದ ಜಾಮೀನು ಪಡೆದಿದ್ದರೂ ಬಿಡುಗಡೆಯಾಗದೆ ಪರಪ್ಪನ ಅಗ್ರಹಾರದಲ್ಲಿದ್ದ ಜಯಚಂದ್ರ ಅವರು ಇಂದು ಜೈಲಿನಿಂದ ಹೊರಬರುತ್ತಿದ್ದಂತೆ ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ನೋಟು ನಿಷೇಧದ ನಂತರ ನಡೆದ ಐಟಿ ದಾಳಿಯಲ್ಲಿ 150 ಕೋಟಿಗೂ ಹೆಚ್ಚು ಅಕ್ರಮ ಆಸ್ತಿ ಪತ್ತೆಯಾಗಿದ್ದು, ಈ ಪ್ರಕರಣದಲ್ಲಿ ಜಯಚಂದ್ರ, ಚಿಕ್ಕರಾಯಪ್ಪ ಸೇರಿದಂತೆ ಆರು ಜನ ಪ್ರಮುಖ ಆರೋಪಿಗಳಾಗಿದ್ದರು.   ಐಟಿ ದಾಳಿ ಸಂದರ್ಭದಲ್ಲಿ 2000 ಮುಖಬೆಲೆಯ 2.8 ಕೋಟಿ ಸೇರಿದಂತೆ 5.7 ಕೋಟಿ ಹಣ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಜಾರಿ ನಿರ್ದೇಶನಾಲಯದ ವಶದಲ್ಲಿದ್ದು, ನಿನ್ನೆ ವಿಶೇಷ ನ್ಯಾಯಾಲಯದಿಂದ ಜಯಚಂದ್ರ ಅವರಿಗೆ ಷರತ್ತುಬದ್ಧ ಜಾಮೀನು ಸಿಕ್ಕಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಅವರು ಬಿಡುಗಡೆಯಾಗಿರಲಿಲ್ಲ. ಇಂದು ಜಾಮೀನು ಪಡೆದು ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬರುತ್ತಿದ್ದಂತೆ ಸಿಬಿಐನವರು ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆದಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ಅಧಿಕಾರಿಗಳು ಕೂಡ ಮೊಕದ್ದಮೆ ದಾಖಲಿಸಿದ್ದರು. ಹೆಚ್ಚಿನ ವಿಚಾರಣೆಗೆ ತಮ್ಮ ವಶಕ್ಕೆ ನೀಡಬೇಕೆಂದು ಮನವಿ ಸಲ್ಲಿಸಿದ್ದರು. ಸಿಬಿಐನವರು ಇಂದು ಜಯಚಂದ್ರ ಅವರನ್ನು ವಿಚಾರಣೆಗೆ ಕರೆದೊಯ್ದಿದ್ದು, ಇನ್ನೂ ಅಕ್ರಮ ಆಸ್ತಿಯ ಯಾವ ಯಾವ ಅಂಶಗಳು ಪತ್ತೆಯಾಗಲಿವೆ, ಯಾರ ಕುತ್ತಿಗೆಗೆ ಬರಲಿದೆ ಎಂಬುದು ತೀವ್ರ ಕುತೂಹಲವಾಗಿದೆ.  ಈ ಪ್ರಕರಣದಲ್ಲಿ ರಾಜ್ಯದ ಪ್ರಭಾವಿ ಸಚಿವರಿಬ್ಬರ ಹೆಸರುಗಳು ಕೂಡ ಕೇಳಿಬಂದಿವೆ. ಜಾರಿ ನಿರ್ದೇಶನಾಲಯದವರು ಇಬ್ಬರಿಗೂ ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ.   ಜಯಚಂದ್ರ, ಚಿಕ್ಕರಾಯಪ್ಪ ಅವರ ತೀವ್ರ ವಿಚಾರಣೆ ನಂತರ ಇನ್ನೂ ಹೆಚ್ಚಿನ ಅಂಶಗಳು ಬೆಳಕಿಗೆ ಬರುವ ಸಾಧ್ಯತೆ ಇದೆ.

>  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin