ಜೋರಾಗಿದೆ ‘ಜಾಗ್ವಾರ್’ ಹವಾ

ಈ ಸುದ್ದಿಯನ್ನು ಶೇರ್ ಮಾಡಿ

Jaguar

ಸ್ಯಾಂ ಡಲ್‍ವುಡ್‍ನಲ್ಲಿ ಬಹು ನಿರೀಕ್ಷೆ ಹುಟ್ಟಿಸಿದಂತಹ ಅದ್ಧೂರಿ ವೆಚ್ಚದ ಜಾಗ್ವಾರ್ ಚಿತ್ರ ಬೆಳ್ಳಿ ಪರದೆ ಮೇಲೆ ರಾರಾಜಿಸಿದೆ. ಈ ಚಿತ್ರದ ಮೂಲಕ ರಾಜಕೀಯ ಧುರೀಣ, ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರ ಮೊಮ್ಮಗ ಹಾಗೂ ಮಾಜಿ ಮುಖ್ಯಮಂತ್ರಿಎಚ್.ಡಿ.ಕುಮಾರಸ್ವಾಮಿಯವರ ಸುಪುತ್ರ ನಿಖಿಲ್‍ಕುಮಾರ್ ಭರವಸೆಯ ನಟನಾಗಿ ಸ್ಯಾಂಡಲ್‍ವುಡ್‍ನಲ್ಲಿ ಮಿಂಚಲಿದ್ದಾರೆ.ಆರಂಭದಿಂದಲೂ ಸ್ಯಾಂಡಲ್‍ವುಡ್‍ನಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಚಿತ್ರ ಜಾಗ್ವಾರ್. ಚಿತ್ರವು ಸಹಜವಾಗಿಯೇ ರಾಜಕೀಯ ಮತ್ತು ಚಿತ್ರೋದ್ಯಮ ಎರಡೂ ಕ್ಷೇತ್ರಗಳಲ್ಲೂ ಒಂದಷ್ಟು ಸುದ್ದಿಗೆ ಕಾರಣವಾಗಿದೆ. ಜಾಗ್ವಾರ್‍ನ ಮುಹೂರ್ತ ಸಮಾರಂಭದಿಂದ ಹಿಡಿದು ಕಲಾವಿದರ ಆಯ್ಕೆ, ತಂತ್ರಜ್ಞರು, ಚಿತ್ರೀಕರಣ, ಆಡಿಯೋ ಬಿಡುಗಡೆ, ಪ್ರಮೋಷನ್ ಹೀಗೆ ಪ್ರತಿಯೊಂದು ಹಂತದಲ್ಲೂ ಅದ್ದೂರಿತನವನ್ನು ಪ್ರದರ್ಶಿಸಿರುವ ನಿರ್ಮಾಪಕ ಹೆಚ್.ಡಿ. ಕುಮಾರಸ್ವಾಮಿ ಅವರು ಅಷ್ಟೇ ಅದ್ದೂರಿಯಾಗಿಯೇ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.

ಜಾಗ್ವಾರ್ ಚಿತ್ರವನ್ನು ದಸರಾ ಹಬ್ಬದ ಸಮಯದಲ್ಲಿ ಅದೂ ರಜಾದಿನಗಳು ಹೆಚ್ಚಾಗಿರುವಂಥ ಟೈಮಿನಲ್ಲೇ ರಿಲೀಸ್ ಮಾಡಿರುವುದು ಚಿತ್ರಕ್ಕೆ ಪ್ಲಸ್ ಆಗಿದೆ. ಕರ್ನಾಟಕ, ಸೀಮಾಂಧ್ರ, ತೆಲಂಗಾಣ ಮಾತ್ರವಲ್ಲದೆ ಭಾರತದ ಇತರ ಕಡೆಗಳಲ್ಲೂ ಜಾಗ್ವಾರ್ ಚಿತ್ರ ರಿಲೀಸ್ ಆಗಿದೆ. ಇನ್ನು ಜಾಗ್ವಾರ್ ಚಿತ್ರವನ್ನು ವಿದೇಶಗಳಲ್ಲೂ ಬಿಡುಗಡೆ ಮಾಡಲು ಯೋಚಿಸಿರುವ ಕುಮಾರಸ್ವಾಮಿ, ಆಸ್ಟ್ರೇಲಿಯಾ, ಅಮೇರಿಕಾ, ಬ್ರಿಟನ್, ಜರ್ಮನ್ ಸೇರಿದಂತೆ ಹಲವು ಯುರೋಪ್ ದೇಶಗಳಲ್ಲಿ ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಈಗಾಗಲೆ ಹಲವು ವಿದೇಶಿ ಚಿತ್ರ ವಿತರಕರು ಜಾಗ್ವಾರ್ ಬಿಡುಗಡೆಗೆ ಉತ್ಸುಕರಾಗಿದ್ದು ಅವರೊಂದಿಗೂ ಮಾತುಕತೆ ನಡೆದಿದೆಯಂತೆ.

ಒಟ್ಟಾರೆ, ತಮ್ಮ ಪುತ್ರನ ಚೊಚ್ಚಲ ಚಿತ್ರವನ್ನು ಬಿಗ್ ಸ್ಕ್ರೀನ್ ಮೇಲೆ ಅಷ್ಟೇ ಅದ್ದೂರಿಯಾಗಿ ತಂದಿದ್ದಾರೆ. ನಿರ್ಮಾಪಕ ಹೆಚ್.ಡಿ.ಕುಮಾರಸ್ವಾಮಿ. ಈ ಚಿತ್ರ ಹಲವಾರು ವಿಶೇಷತೆಗಳಿಂದ ಸುದ್ದಿಯಲ್ಲಿದೆ. ಟಾಲಿವುಡ್‍ನ ಹೆಸರಾಂತ ನಟಿ ಮಿಲ್ಕಿ ಬ್ಯೂಟಿ ತಮನ್ನಾ ಈ ಚಿತ್ರದ ಹಾಡೊಂದಕ್ಕೆ ಬಂದು ಡ್ಯಾನ್ಸ್ ಮಾಡಿದ್ದಾರೆ, ಅಲ್ಲದೆ ಬಾಹುಬಲಿ ಚಿತ್ರಕ್ಕೆ ಕಥೆ ಬರೆದಿರುವ ವಿಜಯೇಂದ್ರ ಪ್ರಸಾದ್ ಈ ಚಿತ್ರಕ್ಕೂ ಕಥೆಯನ್ನು ಹೆಣೆದಿದ್ದಾರೆ. ಬಾಹುಬಲಿ ನಿರ್ದೇಶಕ ರಾಜಮೌಳಿ ಅವರ ಶಿಷ್ಯ ಮಹದೇವ್ ಅವರು ಈ ಚಿತ್ರವನ್ನು ಡೈರೆಕ್ಷನ್ ಮಾಡಿದ್ದಾರೆ. ದೀಪ್ತಿ ಸತಿ ಈ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಈ ಚಿತ್ರಕ್ಕೆ ಎಸ್.ಎಸ್.ತಮನ್ನಾ ಸಂಗೀತ ನೀಡಿದ್ದಾರೆ. ಸ್ಯಾಂಡಲ್‍ವುಡ್ ಇತಿಹಾಸದಲ್ಲೇ ಅತಿ ಹೆಚ್ಚಿನ ಬಡ್ಜೆಟ್ ಹೊಂದಿದ ಚಿತ್ರ ಎಂಬ ಹೆಗ್ಗಳಿಕೆಯೂ ಈ ಚಿತ್ರಕ್ಕಿದೆ. ನಿಖಿಲ್ ಅವರ ಅತ್ಯದ್ಭುತವಾದ ಆ್ಯಕ್ಷನ್‍ಗಳು ಜಾಗ್ವಾರ್‍ನ ಪ್ರಮುಖ ಹೈಲೈಟ್.

ಇನ್ನು ನಿಖಿಲ್ ಕುಮಾರ್ ಅಭಿನಯದ ಜಾಗ್ವಾರ್ ಚಿತ್ರದ ಬಿಡುಗಡೆಗೂ ಮೊದಲೇ ನಿರ್ಮಾಪಕ ಕುಮಾರಸ್ವಾಮಿ ತಮ್ಮ ಪುತ್ರನ ಎರಡನೆ ಸಿನಿಮಾದ ಬಗ್ಗೆಯೂ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಮೊದಲ ಚಿತ್ರದಲ್ಲಿಯೇ ತಮ್ಮ ಪುತ್ರನ ಪರ್ಫಾಮೆನ್ಸ್ ನೋಡಿ ಮೆಚ್ಚಿಕೊಂಡಿರುವ ಕುಮಾರಸ್ವಾಮಿ ಸದ್ದಿಲ್ಲದೆ ತಮ್ಮ ಎರಡನೇ ಚಿತ್ರದ ನಿರ್ಮಾಣಕ್ಕೂ ತಯಾರಿ ನಡೆಸಿದ್ದಾರಂತೆ.ಜಗ್ವಾರ್‍ನಂತೆಯೇ ಎರಡನೇ ಚಿತ್ರವನ್ನು ಕೂಡ ಬಿಗ್ ಬಜೆಟ್‍ನಲ್ಲಿಯೇ ನಿರ್ಮಿಸಲು ಯೋಜಿಸಿರುವ ಹೆಚ್‍ಡಿಕೆ, ಈ ಬಗ್ಗೆ ತೆಲುಗಿನ ಕೆಲ ಖ್ಯಾತ ನಿರ್ದೇಶಕರ ಜೊತೆ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ದಾರೆ ಎನ್ನಲಾಗುತ್ತಿದೆ. ಪುನೀತ್ ರಾಜಕುಮಾರ್ ಅಭಿನಯದ ಅಪ್ಪು ಚಿತ್ರ ನಿರ್ದೇಶಿಸಿದ್ದ ನಿರ್ದೇಶಕ ಪುರಿ ಜಗನ್ನಾಥ್, ಟಾಲಿವುಡ್‍ನಲ್ಲಿ ಪವನ್ ಕಲ್ಯಾಣ್ ಅಭಿನಯದ ಅತ್ತಾರಿಂಟಿಕಿ ದಾರೇದಿ ಚಿತ್ರದ ನಿರ್ದೇಶಕ ತ್ರಿವಿಕ್ರಮ್, ಇತ್ತೀಚೆಗೆ ತೆರೆಕಂಡ ಎನ್‍ಟಿಆರ್ ಅಭಿನಯದ ಜನತಾ ಗ್ಯಾರೇಜ್ ಚಿತ್ರದ ನಿರ್ದೇಶಕ ಕೊರಟಾಲ ಶಿವ, ಹಲವಾರು ಸಕ್ಸಸ್ ಫುಲ್ ಚಿತ್ರಗಳ ನಿರ್ದೇಶಕ ಸುರೇಂದರ್ ರೆಡ್ಡಿ ಅವರೊಂದಿಗೆ ಚರ್ಚೆ ನಡೆಯುತ್ತಿದೆಯಂತೆ.

ಶ್ರೀಘ್ರದಲ್ಲೇ  ಇವರಲ್ಲಿ ಯಾರಾದರೊಬ್ಬರ ಜೊತೆ ಸಿನಿಮಾ ಫಿಕ್ಸ್ ಆಗಲಿದ್ದು, ಡಿಸೆಂಬರ್‍ನಲ್ಲಿ ನಿಖಿಲ್ ಅವರ ಎರಡನೇ ಚಿತ್ರದ ಶೂಟಿಂಗ್ ಆರಂಭಿಸುವುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ . ಟಾಲಿವುಡ್‍ನ ಪ್ರಮುಖ ನಿರ್ದೇಶಕರು ನಿಖಿಲ್ ಜೊತೆ ಕೆಲಸ ಮಾಡಲು ಒಲವು ತೋರಿಸಿದ್ದಾರೆ   ಎಂದಿರುವ ಕುಮಾರಸ್ವಾಮಿ ನಿಖಿಲ್ ಅಭಿನಯದ ಮುಂದಿನ ಸಿನಿಮಾಗಳೆಲ್ಲವನ್ನೂ ಬಹುಭಾಷಾ ಚಿತ್ರಗಳಾಗಿ ರೂಪಿಸುತ್ತೇವೆ. ಉತ್ತಮ ರೆಸ್ಪಾನ್ಸ್ ಸಿಕ್ಕರೆ ಕನ್ನಡ, ತೆಲುಗು ಮಾತ್ರವಲ್ಲ ದಕ್ಷಿಣದ  ಭಾಷೆಗಳಲ್ಲೂ ಏಕಕಾಲದಲ್ಲಿ ಚಿತ್ರವನ್ನು ನಿರ್ಮಿಸುತ್ತೇವೆ ಎಂದು ಹೇಳಿದ್ದಾರೆ .ನಿರೀಕ್ಷೆಯಂತೆ ಬಿಡುಗಡೆಗೊಂಡ ಜಾಗ್ವಾರ್ ಚಿತ್ರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದು ಮುನ್ನುಗ್ಗುತ್ತಿದೆ. ಒಟ್ಟಾರೆ ಸ್ಯಾಂಡಲ್‍ವುಡ್‍ನಲ್ಲಿ ಭದ್ರ ನೆಲೆ ಕಂಡುಕೊಳ್ಳುವ ಎಲ್ಲ ಲಕ್ಷಣಗಳೂ ನಿಖಿಲ್‍ಗೆ ಒಲಿದು ಬಂದಿದೆ. ಚಿತ್ರ ಎಲ್ಲ ಕೇಂದ್ರಗಳಲ್ಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಮುನ್ನುಗ್ಗುತ್ತಿದೆ. ಮುಂದಿನ ದಿನಗಳಲ್ಲಿ ಚಿತ್ರ ಯಾವ ಮಟ್ಟದಲ್ಲಿ ಯಶಸ್ಸು ಕಾಣುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin