ಜ್ವರ ಬಂದ ಹಸುವಿನ ಹಾಲನ್ನು ಡೇರಿಗೆ ಹಾಕಬೇಡಿ
ಹುಳಿಯಾರು,ಸೆ.17- ಜ್ವರ ಬಂದ ಹಸುವಿಗೆ ಚಿಕಿತ್ಸೆ ಕೊಡಿಸಿದಾಗ ಔಷಧಿಯ ಗುಣಗಳು ಹಾಲಿನಲ್ಲಿನ ರೋಗ ನಿರೋಧಕ ಶಕ್ತಿ ಕುಂದಿಸುತ್ತದೆ. ಹಾಗಾಗಿ ಡೈರಿಗೆ ಜ್ವರದ ಹಸುವಿನ ಹಾಲು ಹಾಕುವುದರಿಂದ ಇತರ ಹಾಲಿನಲ್ಲೂ ಔಷಧಿಯ ಗುಣಗಳು ಸೇರುತ್ತವೆ. ಹಾಗಾಗಿ ಜ್ವರ ಬಿಡುವವರೆವಿಗೂ ಡೇರಿಗೆ ಹಾಲು ಹಾಕದಿರುವುದು ಒಳಿತು ಎಂದು ತುಮುಕೂರು ಹಾಲು ಒಕ್ಕೂಟದ ನಿರ್ದೇಶಕ ಹಳೆಮನೆ ಶಿವನಂಜಪ್ಪ ತಿಳಿಸಿದರು.ಹುಳಿಯಾರು ಸಮೀಪದ ದೊಡ್ಡಬಿದರೆಯಲ್ಲಿ ಹಾಲಿನ ಡೈರಿಯ ಉಪಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು,ರಾಜ್ಯದಲ್ಲಿ ಡೇರಿಗಳು ಆರಂಭವಾಗಿ 30 ವರ್ಷಗಳ ನಂತರ ದೊಡ್ಡಬಿದರೆ ಗ್ರಾಮದವರು ತಡವಾಗಿಯಾದರೂ ಹೈನುಗಾರಿಕೆಯ ಮಹತ್ವದ ಬಗ್ಗೆ ಅರಿವು ಬಂದಿರುವುದು ಸ್ವಾಗತಾರ್ಹ.
ಕಳೆದ 12 ವರ್ಷಗಳ ಹಿಂದೆ ತಾನು ತುಮುಲು ಅಧ್ಯಕ್ಷರಾಗಿದ್ದಾಗ ಇಲ್ಲಿ ಡೇರಿ ಮಾಡಬೇಕೆಂದು ಗ್ರಾಮಕ್ಕೆ ಅಲೆದರೂ ಗ್ರಾಮಸ್ಥರು ಮನಸ್ಸು ಮಾಡಲಿಲ್ಲ. ಹಾಗಾಗಿ ಪಕ್ಕದ ಚಿಕ್ಕಬಿದರೆಗೆ ಕೊಟ್ಟೆ. ಈಗ ಉಪಕೇಂದ್ರ ಮಾಡಿದ್ದೀರಿ. ಬೇಗಮುಖ್ಯ ಕೇಂದ್ರ ಮಾಡಿ ಒಕ್ಕೂಟ ಹಾಗೂ ಸರ್ಕಾರದ ಸಂಪೂರ್ಣ ಸೌಲಭ್ಯ ಪಡೆದುಕೊಳ್ಳಿ ಎಂ ಎಂದು ಸಲಹೆ ನೀಡಿದರು. ಮಳೆ ಹಾಗೂ ಬೆಳೆಯಿಲ್ಲದೆ ಉದ್ಯೋಗ ಅರಸಿ ಯುವ ಜನತೆ ಪಟ್ಟಣ ಸೇರಿ ಹಳ್ಳಿಗಳು ವೃದ್ಧಾಶ್ರಮವಾಗುತ್ತಿವೆ. ಪಟ್ಟಣಕ್ಕೆ ಹೋಗಿ ಗಾರ್ಮೆಂಟ್ಸ್ಗಳಲ್ಲಿ ಕೆಲಸ ಮಾಡುವುದಕ್ಕಿಂತ ಎರಡ್ಮೂರು ಹಸು ಕಟ್ಟಿದರೂ ನೆಮ್ಮದಿಯ ಜೀವನ ನಿರ್ವಹಿಸಬಹುದು ಎಂದು ಕಿವಿ ಮಾತು ಹೇಳಿದರು.ಕಂಪನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಂಘದ ಅಧ್ಯಕ್ಷೆ ಕಾಳಮ್ಮ, ತುಮುಲ್ ಸಹಾಯಕ ವ್ಯವಸ್ಥಾಪಕ ಎ.ಪಿ.ಯರಗುಂಟಪ್ಪ, ವಿಸ್ತರಣಾಧಿಕಾರಿ ಎಂ.ಎನ್.ಮಹೇಶ್, ಸಮಾಲೋಚನಾಧಿಖಾರಿ ಸುನಿಲ್, ಗ್ರಾಪಂ ಸದಸ್ಯ ಕುಮಾರ್, ಅರುಣ್ ಕುಮಾರ್, ಕಂಪನಹಳ್ಳಿ ಡೇರಿ ಸಂಸ್ಥಾಪಕ ಅಧ್ಯಕ್ಷ ವೀರಭದ್ರಯ್ಯ, ಕಾರ್ಯದರ್ಶಿ ಯಶೋದ, ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.
► Follow us on – Facebook / Twitter / Google+