ಟಾರ್ಗೆಟ್ ಕರ್ನಾಟಕ : ಚುನಾವಣೆಗೆ ಶುರುವಾಗಿದೆ ಬಿಜೆಪಿ ಕಾರ್ಯತಂತ್ರ, 600 ಜನರ ಟೀಮ್’ನಿಂದ ಅಮಿತ್ ಷಾಗೆ ರಾಜ್ಯದ ಮಾಹಿತಿ

ಈ ಸುದ್ದಿಯನ್ನು ಶೇರ್ ಮಾಡಿ

Amith-Shah--01

ಬೆಂಗಳೂರು, ಮಾ.21- ಮುಂಬರುವ ವಿಧಾನಸಭಾ ಚುನಾವಣೆಯನ್ನು ಗೆಲ್ಲಲು ರಾಜ್ಯದ ಬಿಜೆಪಿ ನಾಯಕರು ಒಂದೆಡೆ ಕಸರತ್ತು ನಡೆಸುತ್ತಿದ್ದರೆ, ಮತ್ತೊಂದೆಡೆ ಕರ್ನಾಟಕಕ್ಕೆ ಎಂಟ್ರಿ ಕೊಡಲು ಸಜಾಗುತ್ತಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಈಗಾಗಲೇ 600 ಮಂದಿಯ ತಂಡವನ್ನು ಕರ್ನಾಟಕಕ್ಕೆ ಕಳಿಸಿ ಮೇಲಿಂದ ಮೇಲೆ ವರದಿ ಪಡೆಯತ್ತಿದ್ದಾರೆ ಎಂದು ತಿಳಿದು ಬಂದಿದೆ.  ರಾಜ್ಯ ಬಿಜೆಪಿ ನಾಯಕರು ಗೆಲುವಿಗೆ ತಮ್ಮದೇ ರಣತಂತ್ರ ರೂಪಿಸುತ್ತಿದ್ದರೆ, ಅಮಿತ್ ಷಾ ಕರ್ನಾಟಕಕ್ಕೆ ಪ್ರತ್ಯೇಕ ತಂಡಗಳನ್ನು ಕಳಿಸಿ ಪ್ರತಿ ವಾರ ವರದಿ ಪಡೆಯುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಕರ್ನಾಟಕದ ಪ್ರತಿ ಜಿಲ್ಲೆಗಳಿಗೂ ತಲಾ ಇಪ್ಪತ್ತು ಮಂದಿಯಂತೆ ಒಟ್ಟು 600 ಮಂದಿಯನ್ನು ಕಳಿಸಿರುವ ಅಮಿತ್ ಷಾ, ಪ್ರತಿಯೊಂದು ಜಿಲ್ಲೆಯ ಭೌಗೋಳಿಕ ವಿವರ, ಅಲ್ಲಿನ ಜಾತಿ ಲೆಕ್ಕಾಚಾರ, ಆರ್ಥಿಕ ಪರಿಸ್ಥಿತಿಗಳ ವಿವರವನ್ನು ಗಮನಿಸುತ್ತಿದ್ದಾರೆ. ಇದೇ ಕಾರಣಕ್ಕಾಗಿ ಅಮಿತ್ ಷಾ ಕಳಿಸಿದ ತಂಡದ ತಲಾ ಇಪ್ಪತ್ತು ಮಂದಿ ಒಂದೊಂದು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಜನಸಾಮಾನ್ಯರು ಹೆಚ್ಚಾಗಿ ಕಾಣಿಸಿಕೊಳ್ಳುವ ದೇವಸ್ಥಾನಗಳಿಂದ ಹಿಡಿದು ಹೋಟೆಲ್‍ಗಳವರೆಗೆ, ಸಲೂನ್‍ಗಳಿಂದ ಹಿಡಿದು ಸಮಾರಂಭಗಳ ತನಕ ಎಲ್ಲೆಡೆ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ.

ಜನರಿಗೆ ಬಿಜೆಪಿಯ ಕುರಿತು ಇರುವ ಭಾವನೆಯೇನು? ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಬಗ್ಗೆ ಇರುವ ಅಭಿಪ್ರಾಯವೇನು? ಈ ಮಧ್ಯೆ ದೇವೇಗೌಡರ ನೇತೃತ್ವದ ಜೆಡಿಎಸ್ ಬಲ ಹೆಚ್ಚಿದೆಯೇ? ಕಡಿಮೆಯಾಗಿದೆಯೇ? ಎಂಬ ಕುರಿತು ಜನರಾಡುತ್ತಿರುವ ಮಾತುಗಳನ್ನು ಈ ತಂಡದ ಸದಸ್ಯರು ಕೇಳಿಸಿಕೊಳ್ಳುತ್ತಿದ್ದಾರೆ. ಹೀಗೆ ಇರುವ ಜನಾಭಿಪ್ರಾಯದ ವಿವರವನ್ನು ಪ್ರತಿವಾರ ಅಮಿತ್ ಷಾ ಅವರಿಗೆ ರವಾನೆ ಮಾಡುತ್ತಿರುವ ತಂಡಗಳು, ಎಲ್ಲಿ ಬಿಜೆಪಿಯ ಕುರಿತು ವಿರೋಧ ಭಾವನೆ ಇದೆ? ಅದಕ್ಕೇನು ಕಾರಣ?ಅನ್ನುವ ಕುರಿತೂ ವಿವರ ದಾಖಲಿಸುತ್ತಿದ್ದಾರೆ ಎಂದು ಗೊತ್ತಾಗಿದೆ.

ಬಿಜೆಪಿ ಪರವಾದ ಭಾವನೆಯನ್ನು ಮೂಡಿಸುವುದು ಹೇಗೆ? ಒಂದು ವೇಳೆ ಕಾಂಗ್ರೆಸ್ ಅಥವಾ ಜೆಡಿಎಸ್ ಪರವಾದ ಅಭಿಪ್ರಾಯಗಳಿದ್ದರೆ ಅದನ್ನು ಕ್ಷೀಣಗೊಳಿಸಿ ಬಿಜೆಪಿ ಪರವಾದ ಭಾವನೆ ಮೂಡಲು ಏನು ಮಾಡಬಹುದು? ಅನ್ನುವುದನ್ನೂ ತಂಡ ವರದಿಯಲ್ಲಿ ದಾಖಲಿಸುತ್ತಿದೆ. ಈಗಾಗಲೇ ಹಲವು ವಾರಗಳಿಂದ ಅಮಿತ್ ಷಾ ಕಳಿಸಿರುವ ರಹಸ್ಯ ತಂಡ ಕಾರ್ಯಾಚರಣೆ ನಡೆಸುತ್ತಿದ್ದು, ಇದು ನೀಡುವ ವರದಿಯನ್ನು ಆಧರಿಸಿ,ರಾಜ್ಯ ಬಿಜೆಪಿ ನಾಯಕರಿಂದ ಪ್ರತ್ಯೇಕ ವರದಿಯನ್ನು ಪಡೆಯಲಿರುವ ಅಮಿತ್ ಷಾ ವರದಿಗಳನ್ನು ಹೋಲಿಸಿ ನೋಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin