ಟಿ.ಬಿ.ಜಯಚಂದ್ರಗೆ ಮತ್ತೆ `ಶಿರಾ’ಬಾಗುವರೇ ಮತದಾರರು..?

ಈ ಸುದ್ದಿಯನ್ನು ಶೇರ್ ಮಾಡಿ

Tumakuru--01

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‍ರಂತೆ ರಾಜ್ಯದ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಏಳನೇ ಬಾರಿಗೆ ಶಿರಾ ಕ್ಷೇತ್ರದಲ್ಲಿ ತಮ್ಮ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ. ಜಯಚಂದ್ರರ ಕನಸಿಗೆ ಜೆಡಿಎಸ್‍ನ ಸತ್ಯನಾರಾಯಣ, ಬಿಜೆಪಿಯ ಮಂಜುನಾಥ್ ಅಡ್ಡಗಾಲು ಹಾಕಲು ತಾಲೀಮು ನಡೆಸಿದ್ದಾರೆ. ರಾಜ್ಯ ಸರ್ಕಾರದಲ್ಲಿ ಪ್ರಭಾವಿ ಸಚಿವರೆಂದು ಗುರುತಿಸಿಕೊಂಡಿರುವ ಜಯಚಂದ್ರ ಮೌಢ್ಯ ನಿಷೇಧದಂತಹ ಕಾಯ್ದೆಗಳನ್ನು ಜಾರಿಗೆ ತರಲು ಪ್ರಮುಖ ಪಾತ್ರ ವಹಿಸಿದ್ದವರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೇಲ್ಲಾ ಪ್ರಮುಖ ಖಾತೆಯ ಹೊಣೆಗಾರಿಕೆ ಹೊತ್ತುಕೊಳ್ಳುವ ಜಯಚಂದ್ರ ಕ್ಷೇತ್ರದಲ್ಲೂ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಹೇಮಾವತಿ ನೀರನ್ನು ಮೂದಲೂರು ಕೆರೆಗೆ ಹರಿಸಿ ಅಂತರ್ಜಲ ಕುಸಿತದಿಂದ ತತ್ತರಿಸಿದ್ದ ಶಿರಾಕ್ಕೆ ಸ್ವಲ್ಪ ಉಸಿರಾಡುವಂತೆ ಮಾಡಿದ್ದಾರೆ. ಹಲವಾರು ಹಾಸ್ಟಲ್ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಶಾಲಾ ಕಾಲೇಜುಗಳ ಕಟ್ಟಡಗಳಿಗೆ ಕಾಯಕಲ್ಪ ನೀಡಿದ್ದಾರೆ. ಕ್ಷೇತ್ರಾದ್ಯಂತ ರೈತರ ಜಮೀನುಗಳಲ್ಲಿ ಚೆಕ್ ಡ್ಯಾಮ್‍ಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ಸಣ್ಣ ನೀರಾವರಿ ಖಾತೆಯನ್ನು ನಿರ್ವಹಿಸುತ್ತಿರುವ ಜಯಚಂದ್ರ ಹಲವಾರು ಕೆರೆಗೆಳ ಪುನವೃಜ್ಜಿವನಗೊಳಿಸಿದ್ದಾರೆ. ಸಾಕಷ್ಟು ಅಭಿವೃದ್ಧಿ ಮಾಡಿದ್ದರು, ಜಯಚಂದ್ರರಿಗೆ ಅಪವಾದ ತಪ್ಪಿಲ್ಲ. ಜನಸಾಮಾನ್ಯರ ಕೈ ಸಿಗುವುದಿಲ್ಲ, ಗ್ರಾಮೀಣ ಭಾಗದತ್ತ ತಲೆ ಹಾಕುತ್ತಿಲ್ಲ. ನಗರ ಪ್ರದೇಶಕ್ಕಷ್ಟೆ ಒತ್ತು ಕೊಡುತ್ತಾರೆ ಎಂಬ ಆಕ್ಷೇಪಗಳಿವೆ.

ಜಿಲ್ಲೆಯ ರಾಜಕಾರಣಿಗಳ ಪೈಕಿ ಪರಮೇಶ್ವರ್ ಹೆಚ್ಚು ವೈಟ್ ಕಾಲರ್ ಎಂದು ಗುರುತಿಸಿಕೊಂಡಿದ್ದರೆ, ಜಯಚಂದ್ರ ಅವರ ನಂತರದ ವೈಟ್‍ಕಾಲರ್ ಎಂಬ ಹಣಪಟ್ಟಿ ಅಂಟಿಸಿಕೊಂಡಿದ್ದಾರೆ. ಚುನಾವಣೆ ಬಂದಾಗ ಜನರ ನಡುವೆ ಇದ್ದಂತೆ ಗುರುತಿಸಿಕೊಳ್ಳುವ ವೈಟ್‍ಕಾಲರ್ ರಾಜಕಾರಣಿಗಳು ಉಳಿದಂತೆ ಜನರನ್ನು ಮಾರು ದೂರವೇ ನಿಲ್ಲಿಸುತ್ತಾರೆ ಎಂಬ ಮಾತುಗಳಿವೆ. ಏನೇ ಇದ್ದರು ಜಯಚಂದ್ರರಿಗೆ ಕಾಂಗ್ರೆಸ್‍ನಲ್ಲಿ ಯಾರು ಪ್ರತಿಸ್ಪರ್ಧಿಗಳಿಲ್ಲ. ಹಾಗೆಂದು ಗೆಲವು ಸುಲಭವಲ್ಲ. ಜೆಡಿಎಸ್ ಮತ್ತು ಬಿಜೆಪಿಯ ಅಭ್ಯರ್ಥಿಗಳು ಜಯಚಂದ್ರರ ನಾಗಾಲೋಟಕ್ಕೆ ಕಡಿವಾಣ ಹಾಕಲು ಹವಣಿಸುತ್ತಿದ್ದಾರೆ.

ಜೆಡಿಎಸ್- ಹಿರಿಯ ರಾಜಕಾರಣಿ ಮಾಜಿ ಸಚಿವ ಸತ್ಯನಾರಾಯಣ್ ಅವರು ಕಳೆದ ಐದು ವರ್ಷಗಳಿಂದ ನಿರಂತರವಾಗಿ ಬೂತ್ ಮಟ್ಟದಲ್ಲಿ ಜೆಡಿಎಸ್ ಸಂಘಟನೆ ಮಾಡಿಕೂಂಡು ಬಂದಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಸತ್ಯನಾರಾಯಣ್ ಅವರಿಗೆ ಟಿಕೆಟ್ ಸಿಗಲಿದೆ ಎಂಬ ನಿರೀಕ್ಷೆಗಳಿವೆ. ಸತ್ಯನಾರಾಯಣ ಅವರಿಗೆ ಅವರ ಶಿಷ್ಯರಾದ ಜಿಲ್ಲಾ ಪಂಚಾಯತ್ ಸದಸ್ಯ ಸಿ.ಅರ್.ಉಮೇಶ್, ಚಿದಾನಂದ ಗೌಡ ಸೇರಿದಂತೆ ಇತರರು ತೀವ್ರ ಅಡ್ಡಗಾಲಾಗುತ್ತಿದ್ದಾರೆ.ಬಿಜೆಪಿ- ಕ್ಷೇತ್ರದಲ್ಲಿ ಕಳೆದ 10 ವರ್ಷಗಳಿಂದ ಪಕ್ಷವನ್ನು ಸಂಘಟಿಸಿಕೊಂಡು ಬಂದಿರುವ ಬಿ.ಕೆ.ಮಂಜುನಾಥ್ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. ಈ ಬಾರಿ ಮತ್ತೆ ಟಿಕೆಟ್ ಅಕಾಂಕ್ಷಿಯಾಗಿದ್ದಾರೆ.

ಬಿಜೆಪಿಯ ಪರಿವರ್ತನಾ ರ್ಯಾಲಿಯಲ್ಲಿ ವ್ಯಕ್ತವಾದ ಆಭೂತ ಪೂರ್ವ ಬೆಂಬಲದಿಂದ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಎಸ್.ಅರ್.ಗೌಡ, ಸಿ.ಎಂ.ನಾಗರಾಜ್, ಮಾಲಿ ಸಿ.ಎಲ್.ಗೌಡ ಸೇರಿದಂತೆ ಇನ್ನು ಹಲವರು ಮಂದಿ ಟಿಕೆಟ್ ಗಿಟ್ಟಿಸಲು ಕಸರತ್ತು ನಡೆಸುತ್ತಿದ್ದಾರೆ. ಈಗಾಗಲೇ ಮಾಲಿ ಸಿ.ಎಲ್.ಗೌಡ ಅವರು ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು, ಹಲವಾರು ಜನಪರ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪಕ್ಷದ ಮುಖಂಡರು ಸಹ ಇವರ ಮೇಲೆ ಒಲವು ಹೊಂದಿದ್ದು, ವಿಧಾನಸಭೆ ಚುನಾವಣೆಗೆ ಬಹುತೇಕ ಟಿಕೆಟ್ ದೊರೆಯುವ ನಿರೀಕ್ಷೆ ಇದೆ. ಎಸ್.ಅರ್.ಗೌಡರಿಗೆ ಟಿಕೇಟು ನೀಡಬೇಕೆಂದು ಬೆಂಬಲಿಗರು ಪಟ್ಟು ಹಿಡಿದಿದ್ದಾರೆ. ಅಂತಿಮವಾಗಿ ಯಾರು ಟಿಕೇಟು ಪಡೆಯುತ್ತಾರೊ ನೋಡ ಬೇಕಿದೆ.

ಅರು ಬಾರಿ ಶಾಸಕರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಜಯಚಂದ್ರರಿಗೆ ಈ ಬಾರಿ ಗೆಲುವು ಅಷ್ಟು ಸುಲಭವಲ್ಲ. ಕಾಂಗ್ರೆಸ್‍ನಲ್ಲಿನ ಒಳ ವಿರೋಧಿಗಳು ಪರೋಕ್ಷವಾಗಿ ಜೆಡಿಎಸ್ ಬೆಂಬಲ ನೀಡುತ್ತಿರುವುದು ಗುಟ್ಟಾಗೇನು ಉಳಿದಿಲ್ಲ. ಎಪಿಎಂಸಿ, ಟಿಎಪಿಎಂಎಸ್, ಕೃಷಿ ಮಾರುಕಟ್ಟೆ ಸಮಿತಿ ಹಲವು ಗ್ರಾಮ ಪಂಚಾಯತಿಗಳು, ನಗರ ಸಭೆ ಕಾಂಗ್ರೆಸ್ ವಶದಲ್ಲಿವೆ. ಶಿರಾ ತಾಲ್ಲೂಕಿನಲ್ಲಿರುವ 42 ಗ್ರಾಮ ಪಂಚಾಯಿತಿ ಗಳ ಪೈಕಿ ಬಿಜೆಪಿ ಹಾಗೂ ಜೆಡಿಎಸ್ ಸಮ ಬಲದಲ್ಲಿ ಅಧಿಕಾರದಲ್ಲಿವೆ. ತಾಲ್ಲೂಕ್ ಪಂಚಾಯತ್ ಸದಸ್ಯರು 26 ಮಂದಿಯಿದ್ದು, ಕಾಂಗ್ರೆಸ್ 13 ಸ್ಥಾನ ಪಡೆದರೆ ಜೆಡಿಎಸ್ ಹಾಗೂ ಬಿಜೆಪಿ ಯವರು ಹೊಂದಾಣಿಕೆ ಮಾಡಿ ಕೊಂಡು ಅಧಿಕಾರ ಹಿಡಿದಿದ್ದಾರೆ. 7 ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಜೆಡಿಎಸ್ 4 ಕಾಂಗ್ರೆಸ್ 2 ಹಂಚಿ ಕೊಂಡರೆ ಬಿಜೆಪಿ 1 ಸ್ಥಾನ ದಲ್ಲಿ ಇದೆ

ಕಳೆದ ಚುನಾವಣೆಯ ಫಲಿತಾಂಶ
ಕಾಂಗ್ರೆಸ್- ಟಿ ಬಿ ಜಯಚಂದ್ರ- 74089 ಮತಗಳು
ಜೆಡಿಎಸ್- ಬಿ ಸತ್ಯನಾರಾಯಣ 59408 ಮತಗಳು
ಬಿಜೆಪಿ- ಬಿ ಕೆ ಮಂಜುನಾಥ್ 18.884 ಮತಗಳು

ಜಾತಿವಾರು ಲೆಕ್ಕಾಚಾರ : ಕುಂಚಿಟಿಗ ಒಕ್ಕಲಿಗರು 4000 / ಎಸ್‍ಸಿ, ಎಸ್‍ಟಿ 80000 / ಯಾದವರು 2500 / ಮುಸ್ಲಿಂರು 15000
ಕುರುಬರು 23000 / ಲಿಂಗಾಯತರು 2000 / ಬ್ರಾಹ್ಮಣರು 1300 / ತಿಗಳರು 4000 / ಬಲಿಜಿಗ 16000 / ವಿಶ್ವಕರ್ಮ 3000 /ಇತರೆ 1514

Facebook Comments

Sri Raghav

Admin