ಟಿ.ಬಿ.ಜಯಚಂದ್ರ ಅವರನ್ನು ಸೋಲಿಸಲು ಜೆಡಿಎಸ್ ಹೊಸ ತಂತ್ರ

ಈ ಸುದ್ದಿಯನ್ನು ಶೇರ್ ಮಾಡಿ

TB-Jayachandra

ತುಮಕೂರು, ಆ.11- ಮುಂಬರುವ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಜಿಲ್ಲಾ ಮಟ್ಟದ ರಾಜಕೀಯ ವಲಯ ದಲ್ಲಿ ಭಾರೀ ಬೆಳವಣಿಗೆಗಳು ಚುರುಕು ಗೊಂಡಿದ್ದು, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಅವರನ್ನು ಸೋಲಿಸಲು ಜೆಡಿಎಸ್‍ನ ನಾಯಕರು ಮತ್ತು ಮಾಜಿ ಸಚಿವರು ಭರ್ಜರಿ ಪ್ಲ್ಯಾನ್ ಮಾಡಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರದ ಪ್ರಭಾವಿ ನಾಯಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಟಿ.ಬಿ.ಜಯಚಂದ್ರ ಅವರು ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ನೀರಾವರಿ ಯೋಜನೆಯ ಹರಿಕಾರರೆಂದೇ ಬಿಂಬಿಸಲಾಗುತ್ತಿದ್ದು, ಬರುವ ಚುನಾವಣೆ ಯಲ್ಲಿ ಇವರು ಸೋಲುವ ಮಾತೇ ಇಲ್ಲ. ಬರಡು ಭೂಮಿಗೆ ನೀರು ಹರಿಸಿ ಜನ- ಜಾನುವಾರು ನೆಮ್ಮದಿಯಿಂದ ಇರುವ ಕೆಲಸ ಮಾಡಿದ್ದಾರೆ ಎಂದು ಜನರು ಭಾವಿಸಿದ್ದಾರೆ.

ಆದರೆ ಇದನ್ನರಿತ ಜೆಡಿಎಸ್ ಬರುವ ಚುನಾವಣೆಯಲ್ಲಿ ಏನಾದರೂ ಮಾಡಿ ಇವರನ್ನು ಸೋಲಿಸಬೇಕು ಎನ್ನುವ ರಣತಂತ್ರ ಹೂಡಿದ್ದಾರೆ ಎನ್ನುವುದು ಜಗಜ್ಜಾಹೀರಾವೆ.. ಜೆಡಿಎಸ್‍ನ ಮಾಜಿ ಸಚಿವ ಬಿ.ಸತ್ಯನಾರಾಯಣ ಸೇರಿದಂತೆ ಅವರ ಬೆಂಬಲಿಗರು ಮಳೆ ಬಂದಿಲ್ಲ. ದೇವರನ್ನು ಪ್ರಾರ್ಥಿಸೋಣ ಎಂದು ಶಿರಾ ಕಾಂಗ್ರೆಸ್ ಪಕ್ಷದ ನಗರಸಭೆ ಸದಸ್ಯರನ್ನು ಪ್ರವಾಸ ನೆಪದಲ್ಲಿ ಮಾರಿ ಕಣಿವೆ ಡ್ಯಾಂಗೆ ಕರೆ ದೊಯ್ಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಇದಲ್ಲದೆ ಸದಸ್ಯರ ಖರ್ಚು ಮತ್ತು ಮುಂಬರುವ ಚುನಾವಣೆವರೆಗಿನ ಖರ್ಚುಗಳನ್ನು ಭರಿಸುವುದಾಗಿ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸುಮಾರು 40 ವರ್ಷಗಳ ರಾಜಕೀಯ ಅನುಭವ ಹೊಂದಿರುವ ಜಯಚಂದ್ರ ಅವರಿಗೆ ತನ್ನ ಪಕ್ಷದಲ್ಲೇ ಕೇಡು ಬಯಸುವವರು ಇದ್ದಾರೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ತನ್ನ ಪಕ್ಷದವರು ತನ್ನ ಬೆನ್ನಿಗೆ ಚೂರಿ ಹಾಕುತ್ತಾರೆ ಎಂಬುದರ ಬಗ್ಗೆ ಎಚ್ಚರವಿರಲಿ ಎಂದು ಆಪ್ತರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಯಾರೊಂದಿಗೂ ಘರ್ಷಣೆ, ಮನಸ್ತಾಪಕ್ಕೆ ಇಳಿಯದೆ ಎದುರಾಳಿಗಳನ್ನು ನಯವಾಗಿಯೇ ಮಟ್ಟ ಹಾಕುವ ಜಾಣ್ಮೆ ನಡೆ ಹೊಂದಿರುವ ಜಿಲ್ಲಾ ಉಸ್ತುವಾರಿ ಸಚಿವರು ಸದ್ದಿಲ್ಲದೆ ಚುನಾವಣೆಗೆ ತಯಾರಿ ನಡೆಸಿ ಕೊಂಡಿದ್ದಾರೆ ಎಂದು ಅವರ ಆಪ್ತ ವಲಯಗಳಿಂದ ತಿಳಿದು ಬಂದಿದೆ. ಇದಕ್ಕೆ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎನ್ನುವ ಉದ್ದೇಶದಿಂದ ಸಚಿವರ ಆಪ್ತರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರನ್ನು ಒಳ ಒಳಗೆ ತನ್ನತ್ತ ಸೆಳೆದುಕೊಳ್ಳುವ ಮಾಸ್ಟರ್ ಪ್ಲ್ಯಾನ್ ಅನ್ನು ಜೆಡಿಎಸ್ ಪಕ್ಷದ ನಾಯಕರು ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಾರಿ ಏನಾದರೂ ಮಾಡಿ ಜಯಚಂದ್ರ ಅವರನ್ನು ಸೋಲಿಸಲೇ ಬೇಕು ಎಂದು ಟೊಂಕ ಕಟ್ಟಿ ನಿಂತಿದ್ದಾರೆ. ಆದರೆ ಜಯಚಂದ್ರ ಅವರನ್ನು ಅಷ್ಟು ಯಾಮಾರಿಸುವುದು ಸುಲಭವಲ್ಲ. ಏಕೆಂದರೆ ರಾಜಕೀಯದಲ್ಲಿ ನುರಿತವರು ಸಾಕಷ್ಟು ಅನುಭವಿಗಳು. ಅಲ್ಲದೆ ಸರ್ಕಾರ ವನ್ನು ಹಲವು ಬಾರಿ ಸಂಕಷ್ಟದಿಂದ ಪಾರು ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.  ಒಟ್ಟಾರೆ ಶಿರಾ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಇರುವ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರನ್ನು ಜೆಡಿಎಸ್‍ಗೆ ಸೆಳೆಯಲು ರಣತಂತ್ರವನ್ನು ರೂಪಿಸಿದ್ದಾರೆ ಎನ್ನುವುದಕ್ಕೆ ಈ ಪ್ರವಾಸ ಒಂದು ಉದಾಹರಣೆಯಾಗಿದೆ.

Facebook Comments

Sri Raghav

Admin