ಟೆಂಡರ್ ಶೂರ್ ಕಾಮಗಾರಿಯಲ್ಲಿ ಲೋಪ : ಗುತ್ತಿಗೆದಾರರಿಗೆ 6 ಲಕ್ಷ ದಂಡ..!

ಈ ಸುದ್ದಿಯನ್ನು ಶೇರ್ ಮಾಡಿ

BBMP--01

ಬೆಂಗಳೂರು, ಏ.4- ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದ ಬಿಬಿಎಂಪಿಯ ಮಹತ್ವಾಕಾಂಕ್ಷಿ ಟೆಂಡರ್‍ಶೂರ್ ಯೋಜನೆಯಡಿ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರ ಸಂಸ್ಥೆಗೆ ಮೇಯರ್ ಜಿ.ಪದ್ಮಾವತಿ ದಂಡ ವಿಧಿಸುವ ಮೂಲಕ ಚುರುಕು ಮುಟ್ಟಿಸಿದ್ದಾರೆ.  ಕಳಪೆ ಕಾಮಗಾರಿ ಮಾಡಿರುವ ಸಂಸ್ಥೆಗೆ 5 ಲಕ್ಷ ರೂ. ದಂಡ ಸೇರಿದಂತೆ ಇಂದು ಮೇಯರ್ ಪದ್ಮಾವತಿ ಒಟ್ಟಾರೆ 6ಲಕ್ಷ ದಂಡ ವಿಧಿಸುವ ಮೂಲಕ ಸಂಸ್ಥೆಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕಳಪೆ ಮಾದಚಾರಿ ಮಾರ್ಗ ನಿರ್ಮಿಸಿರುವ ಆರ್‍ಎನ್‍ಎಸ್ ಸಂಸ್ಥೆಗೆ ಮೇಯರ್ 5 ಲಕ್ಷ ರೂ. ದಂಡ ವಿಧಿಸಿ ಕಾಮಗಾರಿಯನ್ನು ಅತ್ಯುತ್ತಮ ಹಾಗೂ ಶೀಘ್ರ ಮುಗಿಸುವಂತೆ ತಾಕೀತು ಮಾಡಿದರು.

ಹಳೇ ಏರ್‍ಪೋರ್ಟ್ ರಸ್ತೆಯ ವಿವೇಕಾನಂದ ಮೆಟ್ರೋ ಸ್ಟೇಷನ್‍ನಿಂದ ಚನ್ನಸಂದ್ರ ಮಾರ್ಗದ ಹದಿನೇಳುವರೆ ಕಿ.ಮೀ. ರಸ್ತೆಯನ್ನು ಟೆಂಡರ್‍ಶೂರ್ ಯೋಜನೆಯಡಿ 142 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.  ಈ ಕಾಮಗಾರಿಯಲ್ಲಿ ಓಕ್‍ಫಾರಂ ಮತ್ತು ಬಿಗ್‍ಬಜಾರ್ ಬಳಿ ಎರಡು ಅಂಡರ್‍ಪಾಸ್ ಹಾಗೂ ಒಂದು ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. ಓಕ್‍ಫಾರಂ ಬಳಿ ಭೂ ಸ್ವಾಧೀನಕ್ಕೆ ಸ್ವಲ್ಪ ತೊಂದರೆ ಇದ್ದದ್ದು ಈಗ ಪರಿಹಾರವಾಗಿದ್ದು, ಶೇ.50ರಷ್ಟು ಕಾಮಗಾರಿ ಮುಗಿದಿದೆ. ಇಂದು ಬೆಳಗ್ಗೆ ಈ ಕಾಮಗಾರಿ ಪ್ರದೇಶಕ್ಕೆ ಮೇಯರ್ ಪದ್ಮಾವತಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಪರಿಶೀಲನೆ ವೇಳೆ ಕಾಮಗಾರಿ ಸಮರ್ಪಕವಾಗಿರದುದ್ದನ್ನು ಕಂಡು ಮೇಯರ್ ಆರ್‍ಎನ್‍ಎಸ್ ಸಂಸ್ಥೆಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಸ್ಥಳದಲ್ಲೇ ಸಂಸ್ಥೆ ಗೆ 5ಲಕ್ಷರೂ. ದಂಡ ವಿಧಿಸಿದರು.

ಅದೇ ರೀತಿ ಅವೇಧವೆಂಚರ್ಸ್ ಬಿಲ್ಡರ್ಸ್‍ನವರು ಪಾದಚಾರಿ ಮಾರ್ಗದಲ್ಲೇ ತ್ಯಾಜ್ಯ ಹಾಕಿರುವುದು ಕಂಡುಬಂದುದ್ದರಿಂದ ಮೇಯರ್ ಈ ಸಂಸ್ಥೆಗೂ 50ಸಾವಿರ ದಂಡ ವಿಧಿಸಿದ್ದಾರೆ.  ಕಸ ವಿಲೇವಾರಿ ಗುತ್ತಿಗೆಗೆ ಪಡೆದಿದ್ದ ದಿನಕರ್ ಎಂಬವರು ಸಮರ್ಪಕವಾಗಿ ಕಸ ನಿರ್ವಹಣೆ ಮಾಡದೇ ಇದ್ದುದ್ದನ್ನು ಕಂಡು ಅವರಿಗೂ 25 ಸಾವಿರ ದಂಡ ವಿಧಿಸಿದರು.  ಹೀಗೆ ಇಂದು ಒಟ್ಟಾರೆ 6ಲಕ್ಷ ರೂ. ದಂಡ ವಿಧಿಸಿದ್ದಲ್ಲದೆ, ಹಳೇ ಏರ್‍ಪೋರ್ಟ್ ರಸ್ತೆಯ ವಿವೇಕಾನಂದ ಮೆಟ್ರೋ ಸ್ಟೇಷನ್‍ನಿಂದ ಚೆನ್ನಸಂದ್ರ ಮಾರ್ಗದವರೆಗಿನ ಹದಿನೇಳುವರೆ ಕಿ.ಮೀ. ರಸ್ತೆಗಿದ್ದ ಎಲ್ಲಾ ಅಡೆತಡೆಗಳು ನಿವಾರಣೆಯಾಗಿದ್ದು, 6ತಿಂಗಳೊಳಗೆ ಈ ಮಹಾತ್ವಾಕಾಂಕ್ಷಿ ಯೋಜನೆಯನ್ನು ಪೂರ್ಣಗೊಳಿಸಬೇಕು ಹಾಗೂ ಗುಣಮಟ್ಟದಿಂದ ಕೂಡಿರಬೇಕೆಂದು ಮೇಯರ್ ತಾಕೀತು ಮಾಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin