ಟೋಲ್ ಶುಲ್ಕ ಕೈಬಿಡದಿದ್ದರೆ ಮತ್ತೆ ಲಾರಿ ಮುಷ್ಕರ : ಷಣ್ಮುಗಪ್ಪ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Lorry-Shanmugappa

ಬೆಂಗಳೂರು, ಜು.14-ಕೆಶಿಪ್ ಯೋಜನೆಯಡಿ ನಿರ್ಮಿಸಿರುವ ರಾಜ್ಯದ 19 ಹೆದ್ದಾರಿಗಳಿಗೆ ಟೋಲ್ ಅಳವಡಿಸುವ ನಿರ್ಧಾರವನ್ನು ಸರ್ಕಾರ ಕೈ ಬಿಡದೇ ಇದ್ದರೆ ಲಾರಿ ಮಾಲೀಕರು ಉಗ್ರ ಸ್ವರೂಪದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಲಾರಿ ಮಾಲೀಕರ ಮತ್ತು ಏಜೆಂಟರ ಸಂಘದ ರಾಜ್ಯಾಧ್ಯಕ್ಷ ಜಿ.ಆರ್.ಷಣ್ಮುಗಪ್ಪ ಎಚ್ಚರಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯದಲ್ಲಿ 27 ಟೋಲ್ ರಸ್ತೆಗಳಿವೆ. ಪ್ರತಿ ವರ್ಷ 6 ಸಾವಿರ ಕೋಟಿ ಟೋಲ್ ಸಂಗ್ರಹವಾಗುತ್ತಿದೆ. ಪ್ರತಿ ಕಿ.ಮೀ.ಗೆ ಲಾರಿ ಮಾಲೀಕರು 4ರೂ.ನಂತೆ ಟೋಲ್ ನೀಡುತ್ತಿದ್ದಾರೆ. ಇದು ಡೀಸಲ್ ವೆಚ್ಚಕ್ಕಿಂತಲೂ ಅಧಿಕವಾಗಿದೆ ಎಂದು ಅಳಲು ತೋಡಿಕೊಂಡರು.

ಈಗಾಗಲೇ ನಿರ್ಮಿಸಲಾಗಿರುವ 19 ರಸ್ತೆಗಳಿಗೆ ಹೊಸದಾಗಿ ಸುಣ್ಣಬಣ್ಣ ಬಳಿದು ಸರ್ಕಾರ ಟೋಲ್ ವಿಧಿಸಲು ಮುಂದಾಗುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ 19 ರಸ್ತೆಗಳಿಗೆ ಟೋಲ್ ವಿಧಿಸಿದ ತಕ್ಷಣದಿಂದ ಲಾರಿ ಮಾಲೀಕರು ಅನಿರ್ದಿಷ್ಟಾವಧಿ ಮುಷ್ಕರ ಮಾಡಲಿದ್ದಾರೆ. ಜತೆಗೆ ರಸ್ತೆ ತಡೆ ನಡೆಸಿ ಉಗ್ರ ಪ್ರತಿಭಟನೆ ಮಾಡಲಾಗುವುದು. ಟೋಲ್ ವಿಧಿಸದಂತೆ ಈಗಾಗಲೇ ಹಲವು ಬಾರಿ ಮನವಿ ಮಾಡಿದ್ದೇವೆ. ಪ್ರತಿಭಟನೆಯ ಎಚ್ಚರಿಕೆ ನೀಡಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. ನಮ್ಮೊಂದಿಗೆ ಮಾತುಕತೆ ನಡೆಸಿ ಬೇಡಿಕೆ ಈಡೇರಿಸದೇ ಇದ್ದರೆ ಇದೇ 23ರಂದು ನಡೆಯುವ ಸಭೆಯಲ್ಲಿ ಮುಷ್ಕರ ನಡೆಸುವ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಹುಬ್ಬಳ್ಳಿ ಮತ್ತು ಗಬ್ಬೂರು ನಡುವಿನ ರಸ್ತೆ ನಿರ್ಮಾಣಗೊಂಡು 17 ವರ್ಷಗಳು ಕಳೆದಿವೆ. 12 ವರ್ಷಕ್ಕೆ ಆ ರಸ್ತೆ ನಿರ್ಮಾಣಕ್ಕೆ ಮಾಡಿದ ವೆಚ್ಚ ಸಂಗ್ರಹವಾಗಿದೆ. ಆದರೂ ಐದು ವರ್ಷಗಳಿಂದ ಹೆಚ್ಚುವರಿಯಾಗಿ ಹಣ ವಸೂಲಿ ಮಾಡಲು ಸರ್ಕಾರ ಅವಕಾಶಕೊಟ್ಟಿದೆ. ಇನ್ನು ನೈಸ್ ರಸ್ತೆಯಲ್ಲೂ ಹಗಲು ದರೋಡೆ ನಡೆಯುತ್ತಿದೆ. ಅಲ್ಲಿ ಟೋಲ್ ಸಂಗ್ರಹಣೆಯಲ್ಲಿ ವಂಚನೆಯಾಗಿದೆ ಎಂದು ದೂರಿದರು. ಪ್ರಸ್ತುತ 1.10ಕೋಟಿ ಹಣ ಸಂಗ್ರಹವಾಗುತ್ತಿದೆ. ಈವರೆಗೂ ಸರಿಸುಮಾರು 1800 ಕೋಟಿ ರೂ. ಟೋಲ್ ಸಂಗ್ರಹಿಸಲಾಗಿದೆ ಎಂದು ಅವರು ವಿವರಿಸಿದರು.

ಜತೆಗೆ ಕೇಂದ್ರ ವಿಧಿಸಿದ್ದ ತೆರಿಗೆಯನ್ನು ಹಿಂಪಡೆಯುವುದಾಗಿ ಭರವಸೆ ನೀಡಿದ್ದ ರಾಜ್ಯ ಸರ್ಕಾರ ಈವರೆಗೂ ಕಾಲಹರಣ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಎಸ್‍ಟಿ ಜಾರಿಯಿಂದ ವಾಣಿಜ್ಯ ತೆರಿಗೆಯ ಸೆಸ್‍ಗಳು ಮುಚ್ಚಿ ಹೋಗಿದ್ದು, ಪ್ರಯಾಣ ಸುಖಕರವಾಗಿದ್ದು, ಕಡಿಮೆ ಅವಧಿಯಲ್ಲಿ ಹೆಚ್ಚು ದೂರ ಕ್ರಮಿಸಬಹುದಾಗಿದೆ. ಆದರೆ, 30ಕಿ.ಮೀ.ಗೆ ಒಂದರಂತೆ ಸೆಸ್‍ಗಳನ್ನು ನಿರ್ಮಿಸಲಾಗುತ್ತಿದೆ. ಅನಗತ್ಯವಾಗಿ ಪದೇ ಪದೇ ತಪಾಸಣೆ ಮಾಡಿ ಕಿರುಕುಳ ನೀಡಲಾಗುತ್ತಿದೆ. ನಮ್ಮ ಕಷ್ಟ, ನಷ್ಟಗಳನ್ನು ಕೇಳಿ ಸ್ಪಂದಿಸದಿದ್ದರೆ ಸರ್ಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ ನಡೆಸುವುದು ಅನಿವಾರ್ಯವಾಗಲಿದೆ ಎಂದು ಷಣ್ಮುಗಪ್ಪ ಎಚ್ಚರಿಸಿದರು. ಲಾರಿ ಮಾಲೀಕರ ಸಂಘದ ವಿವಿಧ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin