ಟೋಲ್ ಸಂಗ್ರಹ ಕೇಂದ್ರಗಳನ್ನು ಒಡೆದುಹಾಕಿ ಸಿಬ್ಬಂದಿ ಮೇಲೆ ಹಲ್ಲೆ

ಈ ಸುದ್ದಿಯನ್ನು ಶೇರ್ ಮಾಡಿ

Toll-01

ಬಾಗೇಪಲ್ಲಿ, ಏ.24- ಪಟ್ಟಣದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ 44ರ ಬಳಿಯ ನಾರೆಪಲ್ಲಿ ಸಮೀಪವಿರುವ ಟೋಲ್‍ನಲ್ಲಿ ಆಂಧ್ರದ ಹಿಂದುಪುರ ಸಂಸದ ನಿಮ್ಮಲ ಕೃಷ್ಣಪ್ಪ ಅವರ ಸಂಬಂಧಿಕರ ವಾಹನಗಳಿಗೆ ತಡೆಯೊಡ್ಡಿದ್ದರಿಂದ ನಡೆದ ಗಲಾಟೆಯಲ್ಲಿ ಸ್ಥಳದಲ್ಲಿದ್ದ ಆರೇಳು ಟೋಲ್ ಸಂಗ್ರಹ ಕೇಂದ್ರಗಳನ್ನು ಒಡೆದುಹಾಕಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.ಈ ಸಂಬಂಧ ಎಸ್‍ಪಿ ಕಾರ್ತಿಕ್‍ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಗೋರಂಟ್ಲ ಸಬ್‍ಇನ್ಸ್‍ಪೆಕ್ಟರ್ ವೆಂಕಟೇಶ್, ಬಾಗೇಪಲ್ಲಿ ಸಬ್‍ಇನ್ಸ್‍ಪೆಕ್ಟರ್ ನರೇಶ್ ನಾಯಕ್ ಸಹ ಸ್ಥಳದಲ್ಲಿ ಹಾಜರಿದ್ದು, ಹೆಚ್ಚಿನ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಆಂಧ್ರ ಹಾಗೂ ಕರ್ನಾಟಕದ ಗಡಿ ಭಾಗವಾಗಿರುವ ಬಾಗೇಪಲ್ಲಿ ಪಟ್ಟಣದ ಹೊರವಲಯದ ಮೂಲಕ ಇಂದು ಬೆಳಗ್ಗೆ ಸಂಸದ ನಿಮ್ಮಲ ಕೃಷ್ಣಪ್ಪ ಅವರ ಸಂಬಂಧಿಕರ ಎರಡು ವಾಹನಗಳು ಬರುತ್ತಿದ್ದು, ಒಂದಕ್ಕೆ ಟೋಲ್ ಸಂಗ್ರಹಿಸದೆ ತೆರಳಲು ಅವಕಾಶ ನೀಡಲಾಗಿತ್ತು, ಮತ್ತೊಂದು ವಾಹನಕ್ಕೆ ಟೋಲ್ ಪಾವತಿಸಬೇಕೆಂದು ಸಿಬ್ಬಂದಿ ಸೂಚಿಸಿದ್ದರಿಂದ ಆಕ್ರೋಶಗೊಂಡು ತಮ್ಮ ಕಡೆಯ 50-60 ಮಂದಿಯನ್ನು ಕರೆಸಿಕೊಂಡು ಟೋಲ್ ಸಿಬ್ಬಂದಿ ಮೇಲೆ ದೊಣ್ಣೆ, ರಾಡ್‍ನಿಂದ ಹಲ್ಲೆ ನಡೆಸಿ ಟೋಲ್ ಕೇಂದ್ರಗಳನ್ನು ಧ್ವಂಸಗೊಳಿಸಿದ್ದಾರೆ.

ಈ ವೇಳೆ ಟೋಲ್‍ನ ನಾಲ್ಕೈದು ಮಂದಿ ಸಿಬ್ಬಂದಿಗೆ ಗಾಯಗಳಾಗಿದ್ದು, ಪ್ರಥಮ ಚಿಕಿತ್ಸೆ ಪಡೆದಿದ್ದಾರೆ. ಇದರಿಂದ ಲಕ್ಷಾಂತರ ರೂ. ನಷ್ಟವಾಗಿದ್ದು, ವಿಷಯ ತಿಳಿದ ಕೂಡಲೇ ಎಸ್‍ಪಿ ಕಾರ್ತಿಕ್‍ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆಯೂ ಸಹ ಎರಡು-ಮೂರು ಬಾರಿ ನಿಮ್ಮಲ ಕೃಷ್ಣಪ್ಪ ಸಂಬಂಧಿಕರು ಟೋಲ್ ಕೇಂದ್ರದ ಸಿಬ್ಬಂದಿಯೊಂದಿಗೆ ಇದೇ ರೀತಿ ಅನುಚಿತವಾಗಿ ವರ್ತಿಸಿದ್ದು, ಪೊಲೀಸರ ಮಧ್ಯಸ್ಥಿಕೆಯಲ್ಲಿ ಸಮಸ್ಯೆ ಬಗೆಹರಿಸಲಾಗಿತ್ತು.

ಆದರೆ, ಇಂದು ಬೆಳಗ್ಗೆ ಏಕಾಏಕಿ ಟೋಲ್‍ಗಳನ್ನೇ ಧ್ವಂಸಗೊಳಿಸಿದ್ದಾರೆ. ಈ ಸಂಬಂಧ ಕೃಷ್ಣಪ್ಪ ಅವರ ಮಗ ಅಂಬರೀಶ್ ನಮ್ಮ ವಾಹನ ಬರುತ್ತಿದ್ದಾಗ ಬ್ಯಾರಿಕೇಡ್ ಅಡ್ಡ ಹಾಕಿರುವುದರಿಂದ ವಾಹನಗಳಿಗೆ ಡ್ಯಾಮೇಜ್ ಆಗಿದೆ. ಈ ಸಂಬಂಧ ಬಾಗೇಪಲ್ಲಿ ಠಾಣೆಯಲ್ಲಿ ಸ್ಪಷ್ಟನೆ ನೀಡುವುದಾಗಿ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin