ಟ್ರಂಪ್ ನನ್ನು ನಾಯಿಗೆ ಹೋಲಿಸಿದ ‘ಕಿರಿಕ್’ ಕಿಮ್..!
ಪಯೊಂಗ್ಯಾಂಗ್/ವಾಷಿಂಗ್ಟನ್, ಸೆ.21-ಉತ್ತರ ಕೊರಿಯಾವನ್ನು ನಿರ್ನಾಮ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಎಚ್ಚರಿಕೆಯನ್ನು ನಾಯಿ ಬೊಗಳಿದಂತೆ ಎಂದು ಲೇವಡಿ ಮಾಡಿರುವ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ಬದಲಿಗೆ ನಾವೇ ಭೀಕರ ಪರಮಾಣು ದಾಳಿ ನಡೆಸಿ ಆ ದೇಶವನ್ನು ಸರ್ವನಾಶ ಮಾಡುತ್ತೇವೆ ಎಂದು ಗಂಭೀರ ಬೆದರಿಕೆ ಹಾಕಿದ್ದಾರೆ. ನಮ್ಮ ವೈರಿಗಳು ಆಕ್ರಮಣ ಪ್ರಚೋದನೆಯ ಸ್ವಲ್ಪ ಲಕ್ಷಣ ತೋರಿದರೂ ನಾವೇ ಮುಂಚಿತವಾಗಿ ದಾಳಿ ನಡೆಸಿ ಅದನ್ನು ನಿರ್ನಾಮ ಮಾಡಲು ನಾವು ಸಿದ್ಧ ಎಂದು ಅವರು ಗಂಭೀರ ಎಚ್ಚರಿಕೆ ನೀಡಿದ್ದಾರೆ.
ವಿಶ್ವದ ಪ್ರಮುಖ ದೇಶಗಳ ಕಿರುಕುಳ ಮತ್ತು ಅಡ್ಡಿ-ಆತಂಕಗಳ ನಡುವೆಯೂ ಉತ್ತರ ಕೊರಿಯಾ ಅತ್ಯಂತ ಪ್ರಬಲ ಪರಮಾಣು ಶಕ್ತ ದೇಶವಾಗಿ ಹೊರಹೊಮ್ಮಿದೆ. ನಮಗೆ ಭಯ ಎಂಬುದೇ ಗೊತ್ತಿಲ್ಲ. ಒತ್ತಡಗಳು, ದಿಗ್ಬಂಧನಗಳು ಮತ್ತು ಯುದ್ಧ ಬೆದರಿಕೆಗಳಿಗೆ ನಾವು ಅಂಜುವುದಿಲ್ಲ ಎಂದು ಕಿಮ್ ಹೇಳಿದ್ದಾರೆ. ಅಮೆರಿಕ ಸಂಘರ್ಷ ಮತ್ತು ಯುದ್ಧವನ್ನು ಬಯಸಿದ್ದರೆ, ಅದು ಭಯಾನಕ ಪರಮಾಣು ದಾಳಿಯನ್ನು ಎದುರಿಸಬೇಕಾಗುತ್ತದೆ ಹಾಗೂ ಸರ್ವನಾಶವಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.