ಠಾಣೆಗೆ ಕರೆದ ಪೊಲೀಸರಿಗೆ ಯಡಿಯೂರಪ್ಪ ಕೊಟ್ಟ ಉತ್ತರವೇನು..?

ಈ ಸುದ್ದಿಯನ್ನು ಶೇರ್ ಮಾಡಿ

yadiyurappa--1

ಬೆಂಗಳೂರು, ಸೆ.28- ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಆಪ್ತ ಹಾಗೂ ಶಾಸಕ ವಿನಯ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರೇ ತಮ್ಮ ಮನೆಗೆ ಬಂದು ಮಾಹಿತಿ ಪಡೆಯಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ಕೆಲ ದಿನಗಳ ಹಿಂದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಖುದ್ದು ವಿಚಾರಣೆಗೆ ಹಾಜರಾಗಬೇಕೆಂದು ಮಹಾಲಕ್ಷ್ಮಿಲೇಔಟ್‍ನ ಎಸಿಪಿ ಬಡಿಗೇರ್ ಅವರು ಯಡಿಯೂರಪ್ಪನವರಿಗೆ ನೋಟಿಸ್ ಜಾರಿ ಮಾಡಿದ್ದರು.

ಈ ನೋಟಿಸ್‍ಗೆ ಇದೇ 26ರಂದು ಪತ್ರ ಬರೆದಿರುವ ಬಿಎಸ್‍ವೈ, ನಿಮಗೆ ಮಾಹಿತಿ ಬೇಕೆಂದರೆ ನನ್ನ ಮನೆಗೆ ಬಂದು ಯಾವುದೇ ರೀತಿಯ ಮಾಹಿತಿ ಪಡೆದುಕೊಳ್ಳಬಹುದು. ಇದಕ್ಕೆ ನಾನು ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧನಿದ್ದೇನೆ. ಆದರೆ, ಇಂತಹ ಇಳಿವಯಸ್ಸಿನಲ್ಲಿ ನಾನು ಠಾಣೆಗೆ ಬಂದು ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಮ್ಮ ಆಪ್ತ ಸಹಾಯಕ ಸಂತೋಷ್ ಅವರು ವಿನಯ್ ಅಪಹರಣ ಪ್ರಕರಣದಲ್ಲಿ ಶಾಮೀಲಾಗಿದ್ದರೆ ನಾನು ಈ ಬಗ್ಗೆ ನನಗೆ ತಿಳಿದಿರುವ ಮಾಹಿತಿಯನ್ನು ತನಿಖಾ ಅಧಿಕಾರಿಗಳ ಮುಂದೆ ಹಂಚಿಕೊಳ್ಳಲು ಸಿದ್ದನಿದ್ದೇನೆ. 75 ವರ್ಷ ಸಮೀಸುತ್ತಿರುವ ನನ್ನನ್ನು ಠಾಣೆಗೆ ಬಂದು ಮಾಹಿತಿ ನೀಡುವಂತೆ ನೋಟಿಸ್ ನೀಡುವುದು ಸರಿಯೇ ಎಂದು ಎಸಿಪಿ ಬಡಿಗೇರ್ ವಿರುದ್ಧ ಯಡಿಯೂರಪ್ಪ ಕಿಡಿಕಾರಿದ್ದಾರೆ. ಐಪಿಸಿ ಸೆಕ್ಷನ್ 160ನೇ ಕಲಂ ಪ್ರಕಾರ ನೀವು ಕಳುಹಿಸಿರುವ ನೋಟಿಸ್‍ಗೆ ನನ್ನ ವಿಳಾಸ ನಿಮಗೆ ಗೊತ್ತಿದೆ. ನಮ್ಮ ಮನೆಗೆ ಬಂದರೆ ನಾನು ನಿಮಗೆ ಎಲ್ಲಾ ರೀತಿಯ ಸಹಕಾರ ನೀಡುವೆ. ನನಗೂ ಈ ಪ್ರಕರಣಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಅನಗತ್ಯವಾಗಿ ನೋಟಿಸ್ ನೀಡಿ ನನ್ನನ್ನು ಠಾಣೆಗೆ ಬಂದು ಮಾಹಿತಿ ನೀಡುವಂತೆ ಒತ್ತಾಯಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.

ನನ್ನ ಮನೆಯ ಕಾರಿಡಾರ್‍ನಲ್ಲೇ ವಿನಯ್ ಅಪಹರಣಕ್ಕೆ ಸಂಚು ನಡೆದಿತ್ತು ಎಂಬುದು ಆಧಾರ ರಹಿತ ಆರೋಪ. ಮನೆಗೆ ಪ್ರತೀ ದಿನ ನೂರಾರು ಕಾರ್ಯಕರ್ತರು ಬಂದು ಭೇಟಿ ಮಾಡಿ ಹೋಗುತ್ತಾರೆ. ಕೆಲವು ಸಂದರ್ಭಗಳಲ್ಲಿ ಯಾರು ಏನು ಮಾಡುತ್ತಾರೆ ಎಂಬುದನ್ನು ವೈಯಕ್ತಿಕವಾಗಿ ಗಮನಿಸಲು ಸಾಧ್ಯವಾಗುವುದಿಲ್ಲ.

ನಿಮಗೆ ಈಗಾಗಲೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ್ ಎಲ್ಲಾ ರೀತಿಯ ಮಾಹಿತಿ ನೀಡಿದ್ದಾರೆ. ಆದಾಗ್ಯೂ ನನ್ನನ್ನು ಠಾಣೆಗೆ ಬರುವಂತೆ ನೋಟಿಸ್ ನೀಡಿರುವ ಹಿಂದಿನ ಉದ್ದೇಶ ಕಾಣದ ಕೈಗಳ ಷಡ್ಯಂತ್ರವೆಂದು ಆರೋಪಿಸಿದ್ದಾರೆ. ಈಗಲೂ ನಾನು ಸ್ಪಷ್ಟಪಡಿಸುವಂತೆ ನಿಮ್ಮ ವಿಚಾರಣೆಯಲ್ಲಿ ನಾನು ಅನಗತ್ಯವಾಗಿ ಹಸ್ತಕ್ಷೇಪಮಾಡುವುದಾಗಲಿ, ಇಲ್ಲವೇ ಯಾವುದೇ ರೀತಿಯ ಪ್ರಭಾವ ಬೀರುವ ಕೀಳುಮಟ್ಟಕ್ಕೆ ಇಳಿಯುವುದಿಲ್ಲ. ಯಾವುದೇ ಅಧಿಕಾರಿ ಬಂದರೂ ನಾನು ಮಾಹಿತಿ ನೀಡಲು ಸಿದ್ದನಿದ್ದೇನೆ. ಬರುವ ಮುನ್ನ ನನಗೆ ಮಾಹಿತಿ ನೀಡಿದರೆ ನಿಮ್ಮ ಆಗಮನಕ್ಕೆ ಎದುರುನೋಡುತ್ತೇನೆ ಎಂದು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ಏನಿದು ಪ್ರಕರಣ:

ಕೆಲ ತಿಂಗಳ ಹಿಂದೆ ಈಶ್ವರಪ್ಪ ಆಪ್ತ ಸಹಾಯಕರಾಗಿದ್ದ ವಿನಯ್‍ನನ್ನು ಬಿಎಸ್‍ವೈ ಪಿಎ ಸಂತೋಷ್ ಮತ್ತು ಅವರ ಬೆಂಬಲಿಗರು ಅಪಹರಿಸಲು ಸಂಚು ರೂಪಿಸಿದ್ದರೆಂಬ ಆರೋಪವಿತ್ತು. ಮಹಾಲಕ್ಷ್ಮಿಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಕಾರಿನಲ್ಲಿ ಬರುತ್ತಿದ್ದ ವಿನಯ್‍ನನ್ನು ಕೆಲದುಷ್ಕರ್ಮಿಗಳು ಹಲ್ಲೆ ನಡೆಸಿ ಅಪಹರಣಕ್ಕೆ ಪ್ರಯತ್ನಿಸಿದ್ದರು. ಕೊನೆಗೆ ಇದು ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ವೇಳೆ ಈ ಪ್ರಕರಣದಲ್ಲಿ ಯಡಿಯೂರಪ್ಪ ಸಹಾಯಕ ಸಂತೋಷ್ ಹಾಗೂ ಆತನ ಬೆಂಬಲಿಗರ ಕೈವಾಡ ಇದೆ ಎಂಬ ಆರೋಪ ಕೇಳಿಬಂದಿತ್ತು.  ಸಂತೋಷ್ ತನ್ನನ್ನು ಬಂಧಿಸಬಹುದೆಂಬ ಭೀತಿಯಲ್ಲಿ ಹೈಕೋರ್ಟ್‍ನಲ್ಲಿ ನಿರೀಕ್ಷಣ ಜಾಮೀನು ಪಡೆದಿದ್ದರು.   ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲು ಪೊಲೀಸ್ ಠಾಣೆಗೆ ಬರಬೇಕೆಂದು ಯಡಿಯೂರಪ್ಪ ಅವರಿಗೆ ಮಹಾಲಕ್ಷ್ಮಿಲೇಔಟ್ ಠಾಣೆ ಎಸಿಪಿ ಬಡಿಗೇರ್ ನೋಟಿಸ್ ಜಾರಿಮಾಡಿದ್ದರು.

Facebook Comments

Sri Raghav

Admin